ಶೇ.25 ಕುಟುಂಬಕ್ಕೆ ತಲುಪಿಲ್ಲ ಜೀವಜಲ

>

– ವಿಜಯವಾಣಿ ಸುದ್ದಿಜಾಲ ಮಂಗಳೂರು
ರೇಷನಿಂಗ್ ವ್ಯವಸ್ಥೆಯಡಿ ಮೂರು ದಿನಗಳಿಂದ ತುಂಬೆ ಡ್ಯಾಂನಲ್ಲಿ ಪಂಪಿಂಗ್ ನಡೆಯುತ್ತಿದ್ದರೂ ಮಂಗಳೂರು ಮಹಾನಗರ ಪಾಲಿಕೆಯ ಸುಮಾರು ಶೇ.25 ಭಾಗದ ಜನರಿಗೆ ಇನ್ನೂ ಕುಡಿಯುವ ನೀರು ತಲುಪಿಲ್ಲ.
ತುಂಬೆ ಡ್ಯಾನಂಲ್ಲಿ ನಾಲ್ಕು ಮೀಟರ್ ನೀರು ಇದ್ದ ಸಂದರ್ಭದಲ್ಲಿ ಕೂಡ ನಿರಂತರ ನೀರು ಪೂರೈಸಲಾಗಿದೆ. ಆದ್ದರಿಂದ ಇಂದಿನ ಪರಿಸ್ಥಿತಿಯಲ್ಲಿ ರೇಷನಿಂಗ್ ಅಗತ್ಯವಿಲ್ಲ ಎನ್ನುವುದು ಸ್ಥಳೀಯ ಶಾಸಕರು, ಪಾಲಿಕೆಯ ಬಹುತೇಕ ಎಲ್ಲ ಸದಸ್ಯರ ಅಭಿಪ್ರಾಯ. ಆದರೆ ತುಂಬೆ ನದಿಗೆ ನೀರು ಒದಗಿಸುವ ಕುಮಾರಧಾರಾ, ನೇತ್ರಾವತಿ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಮೇ ಅಂತ್ಯದ ತನಕ ಪರಿಸ್ಥಿತಿ ನಿಬಾಯಿಸಲು ರೇಷನಿಂಗ್ ಅನಿವಾರ್ಯ ಎನ್ನುವುದು ಜಿಲ್ಲಾಡಳಿತದ ದೃಢ ನಿಲುವು.

ರೇಷನಿಂಗ್ ಈಗ ಬೇಡ: ತಕ್ಷಣಕ್ಕೆ ರೇಷನಿಂಗ್ ನೀರು ಅಗತ್ಯವಿಲ್ಲ. ಪ್ರಸ್ತುತ ತುಂಬೆ ಡ್ಯಾನಂಲ್ಲಿ 5.20 ಮೀಟರ್, ಶಂಭೂರು ಎಎಂಆರ್ ಡ್ಯಾಂನಲ್ಲಿ 3 ಮೀಟರ್ ನೀರು ಇದೆ. ತುಂಬೆ ಡ್ಯಾಂನಲ್ಲಿ 4.5 ಮೀಟರ್‌ಗೆ ನೀರು ಇಳಿಯುವ ತನಕ ರೇಷನಿಂಗ್ ವ್ಯವಸ್ಥೆ ಕೈಬಿಡಬೇಕು ಎಂದು ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಜತೆ ಸೋಮವಾರ ಸಾಯಂಕಾಲ ತುಂಬೆ ಮತ್ತು ಎಎಂಆರ್ ಡ್ಯಾಂಗೆ ಭೇಟಿ ನೀಡಿದ ಬಳಿಕ ಶಾಸಕ ಡಿ.ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರು ಉತ್ತರ (ಸುರತ್ಕಲ್) ಶಾಸಕ ಡಾ.ಭರತ್ ಶೆಟ್ಟಿ ಮತ್ತು ಪಾಲಿಕೆ ಸದಸ್ಯರ ಜತೆ ಮಂಗಳವಾರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಿದ್ದಾರೆ. ಮೇ 10ರ ತನಕವಾದರೂ ರೇಷನಿಂಗ್ ವ್ಯವಸ್ಥೆಯನ್ನು ಮುಂದೂಡುವುದು. ಅದರೊಳಗೆ ಸ್ವಲ್ಪ ಮಳೆಯಾದರೆ ಪರಿಸ್ಥಿತಿ ಸುಧಾರಿಸಬಹುದು ಎನ್ನುವುದು ಅವರ ನಿರೀಕ್ಷೆ.

ಖಾಸಗಿ ಟ್ಯಾಂಕರ್ ಬೇಡಿಕೆ: ನೀರು ಪೂರೈಕೆ ನಡೆಸುವ ಖಾಸಗಿ ಟ್ಯಾಂಕರ್‌ಗಳಿಗೂ ನಗರದಲ್ಲಿ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಒಂದು ಟ್ಯಾಂಕರ್ ನೀರಿಗೆ ಸಾವಿರ ರೂ.ನಿಂದ 1200 ರೂ. ತನಕ ದರವಿದೆ. ಆದರೆ ಹೀಗೆ ಪೂರೈಕೆಯಾಗುತ್ತಿರುವ ಗುಣಮಟ್ಟದ ಬಗ್ಗೆ ನಾಗರಿಕರಲ್ಲಿ ಅನುಮಾನ ಇದ್ದೇ ಇದೆ.

ನಾಲ್ಕು ದಿನದಿಂದ ನೀರಿಲ್ಲ: ಬೋಂದೆಲ್ ಪ್ರದೇಶದ ಕೆಲವೆಡೆ ಕಳೆದ ನಾಲ್ಕು ದಿನಗಳಿಂದ ನೀರಿಲ್ಲ ಎಂದು ಪಾಲಿಕೆ ಮಾಜಿ ಮೇಯರ್ ಹರಿನಾಥ್ ಆರೋಪಿಸಿದ್ದಾರೆ. ಪಾಂಡೇಶ್ವರ, ಮಂಗಳಾದೇವಿ ಮುಖ್ಯರಸ್ತೆ ಇಕ್ಕೆಲ, ಹೊಗೆಬಜಾರ್, ಬೋಳಾರ, ಮಾರ್ನೆಮಿಕಟ್ಟೆ, ಸುಭಾಷ್ ನಗರ ಸಹಿತ ನಗರದ ಅನೇಕ ಕಡೆ ಸಮಸ್ಯೆ ಉಳಿದಿದೆ.

ಟ್ಯಾಂಕರ್ ನೀರು ಲಭ್ಯ: ನೀರು ತಲುಪದಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ಒದಗಿಸಿದರೆ ಅಂತಹ ಕಡೆಗಳಿಗೆ ಟ್ಯಾಂಕರ್ ಮೂಲಕ ನೀರು ತಲುಪಿಸಲಾಗುವುದು. ಸಂಬಂಧಪಟ್ಟ ಇಂಜಿನಿಯರ್‌ಗಳ ದೂರವಾಣಿ ಸಂಖ್ಯೆಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಈಗಾಗಲೇ ಕೆಲ ಕಡೆಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಸಂಪರ್ಕ ಸಹಾಯವಾಣಿ: ನೀರು ಪೂರೈಕೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಾರ್ವಜನಿಕರು ಸಂಪರ್ಕಿಸಲು ಸಹಾಯವಾಣಿ ದೂರವಾಣಿ ಸಂಖ್ಯೆ ಆರಂಭಿಸಲಾಗಿದೆ. ಮಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ (ಬೆಂದೂರು ರೇಚಕ ಸ್ಥಾವರ) ಸಾರ್ವಜನಿಕರು 0824-2220303, ಸುರತ್ಕಲ್ ವಿಭಾಗಕ್ಕೆ (ಪಣಂಬೂರು ರೇಚಕ ಸ್ಥಾವರ) ಸಂಬಂಧಿಸಿ 0824-2220364 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಇದು ದಿನದ 24 ಗಂಟೆಯೂ ಚಾಲನೆಯಲ್ಲಿರುತ್ತದೆ. ಆಯಾಯ ವಾರ್ಡ್‌ಗೆ ಸಂಬಂಧಿಸಿದ ದೂರುಗಳಿಗೆ ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *