ಉಡುಪಿಯ 50 ಗ್ರಾಪಂಗಳಲ್ಲಿ ಜಲ ಸಂಕಷ್ಟ

ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಭಿನ್ನ ಸ್ವರೂಪ ಪಡೆಯುತ್ತಿದೆ. ಕುಂದಾಪುರ, ಕಾರ್ಕಳ, ಉಡುಪಿ ಸೇರಿದಂತೆ 50ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
ಜಿಲ್ಲೆಯ ನದಿ ಮೂಲಗಳು, ಬಾವಿ, ಕೆರೆಗಳು ಬಿಸಿಲ ಧಗೆಯಿಂದ ಬತ್ತಲಾರಂಭಿಸಿವೆ. ಪಂಚಾಯಿತಿ ಮಟ್ಟದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗಾಗಿ ಟೆಂಡರ್ ಪ್ರಕ್ರಿಯೆ, ಖಾಸಗಿ ಪಂಪುಗಳಲ್ಲಿ ನೀರು ಪೂರೈಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಉಡುಪಿ, ಕಾರ್ಕಳ, ಕುಂದಾಪುರ ಭಾಗದಿಂದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿ.ಎ, ಪಿಡಿಒ ಅವರಿಂದ ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿಗಳು, ತಹಸೀಲ್ದಾರ್‌ಗಳು ವರದಿ ತರಿಸಿಕೊಂಡಿದ್ದು, ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ನೀಡಿದ್ದಾರೆ. ಅದರಂತೆ ನೀರು ಪೂರೈಕೆ ಸಂಬಂಧಿಸಿ ತಾಪಂ ಇಒ ಮತ್ತು ತಹಸೀಲ್ದಾರ್‌ಗಳಿಗೆ ವಿಶೇಷ ಅಧಿಕಾರ ನೀಡಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಸಮಿತಿ ನಿರ್ಣಯ ತೆಗೆದುಕೊಂಡು ಟೆಂಡರ್‌ಗೆ ಅವಕಾಶ ಕೊಡಬಹುದು.
ಬಹುತೇಕ ಗ್ರಾ.ಪಂ.ಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ, ಇತರೆ ಶಾಶ್ವತ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗದ ಹಿನ್ನೆಲೆಯಲ್ಲಿ ಸಮಸ್ಯೆ ಇನ್ನು ಬಗೆಹರಿದಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ನೀರಿನ ಸಮಸ್ಯೆ ಆರಂಭವಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇದೆ ಎಂದು ಜಿಲ್ಲೆಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಕಲ್ಯಾಣಪುರ ವ್ಯಾಪ್ತಿ ಮೂಡುಕುದ್ರು, ಹೊನ್ನಪ್ಪ ಕುದ್ರು, ನಡು ಕುದ್ರು, ಅರಮನೆ ಹಿತ್ಲು, ಕಡೆಕಾರು, ಕಿದಿಯೂರು, ಅಂಬಲಪಾಡಿ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ಸಮುದ್ರ ವ್ಯಾಪ್ತಿ ಗ್ರಾ.ಪಂಗಳಲ್ಲಿ ಉಪ್ಪು ನೀರಿನ ಅಂಶ ಜನರನ್ನು ನಿದ್ದೆಗೆಡಿಸಿದೆ.

ಜಿಲ್ಲೆಯ 10 ರಿಂದ 15 ಗ್ರಾ.ಪಂ.ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಎಲ್ಲಾ ತಹಸೀಲ್ದಾರ್‌ಗಳು, ತಾ.ಪಂ.ಇಒಗಳು ಆಗಾಗ ಸಭೆ ನಡೆಸಿ ಗ್ರಾಪಂ ಮಟ್ಟದಿಂದ ವರದಿ ತೆಗೆದುಕೊಳ್ಳುತ್ತಿದ್ದಾರೆ. ಅವಶ್ಯವಿರುವ ಕಡೆ ಗ್ರಾಪಂ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಯೋಜನೆ ಅಡಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
– ಸಿಂಧೂ ಬಿ.ರೂಪೇಶ್, ಸಿಇಒ, ಉಡುಪಿ ಜಿ.ಪಂ.