ನೀರಿಗಾಗಿ ಹೆದ್ದಾರಿ ಸಂಚಾರ ತಡೆದು ರೈತರ ಪ್ರತಿಭಟನೆ

ಬಾಗಲಕೋಟೆ: ತಿಮ್ಮಾಪುರ ಏತ ನೀರಾವರಿಗೆ ನೀರು ಹರಿಸುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಸ್ಥರು ಸಮೀಪದ ಸಂಗಮ ಕ್ರಾಸ್ ಬಳಿ ಬೆಳಗಾವಿ-ರಾಯಚೂರು ಹೆದ್ದಾರಿ ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 11 ಗಂಟೆಗೆ ಹಲವಾರು ಟ್ರ್ಯಾಕ್ಟರ್​ಗಳಲ್ಲಿ ಸಂಗ್ರಮ ಕ್ರಾಸ್​ಗೆ ಆಗಮಿಸಿದ ನೂರಾರು ರೈತರು ಕೆಪಿಜೆಎನ್​ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ತಿಮ್ಮಾಪುರ ಏತ ನೀರಾವರಿ ಕಾಲುವೆಗಳಿಗೆ ಅಧಿಕಾರಿಗಳು ನೀರು ಹರಿಸುತ್ತಿಲ್ಲ. ಇದರಿಂದ ಹತ್ತಾರು ಗ್ರಾಮಗಳಿಗೆ ಕುಡಿವ ನೀರಿಗೆ ತತ್ವಾರ ಉಂಟಾಗಿದೆ. ಬೆಳೆಗಳು ಒಣಗಿ ಹೋಗು ತ್ತಿವೆ. ಈ ಬಗ್ಗೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಎಎಲ್​ಬಿಸಿ ವಿಭಾಗದ 1050 ಕಿಲೋ ವ್ಯಾಟ್​ನ ಪಂಪ್​ಗಳು ದುರಸ್ತಿಯಲ್ಲಿದ್ದರಿಂದ 45 ದಿನ ಗಳಿಂದ ಡಿಸಿ 1 ಹಾಗೂ ಡಿಸಿ 2 ಕಾಲುವೆಗಳಿಗೆ ಸರಿಯಾಗಿ ನೀರು ಹರಿದಿಲ್ಲ. ಇವುಗಳ ದುರಸ್ತಿಗೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಇದರಿಂದ ತೊಂದರೆಯಾಗಿದೆ. 45 ದಿನಗಳಿಂದ ಜನತೆಗೆ ನೀರಿನ ಕೊರತೆ ಎದುರಿಸುವಂತಾಗಿದೆ. ಆದ್ದರಿಂದ ಹೆಚ್ಚುವರಿಯಾಗಿ 45 ದಿನಗಳವರೆಗೆ ನೀರು ಹರಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಬೇಕೆಂದು ಮನವಿ ಮಾಡಿದರು.

ವಿ.ಎಸ್. ಹಳ್ಳೂರ, ನಿಂಗಪ್ಪ ಹೂಗಾರ, ಎ.ಪಿ. ಹಿರೇಮಠ, ಭೀಮಸಿ ಪತ್ತಾರ, ಬಸಪ್ಪ ಮೂಗನೂರ, ಅಮೀನಸಾಬ ಕೋಟಿ ಸೇರಿ ಬಾಗಲಕೋಟೆ ತಾಲೂಕಿನ ಭೈರಮಟ್ಟಿ, ಇಂಗಳಗಿ, ಕಡಿವಾಳ, ಸುಳ್ಳಕಲ್ಲ, ಅಂಬ್ಲಿಕೊಪ್ಪ, ಬೂದಿಹಾಳ, ಹಳ್ಳೂರ, ಬಸವನಾಳ, ಕಮತಗಿ, ಮೂಗನೂರ ಮತ್ತಿತರರ ಗ್ರಾಮಗಳ ರೈತರು ಇದ್ದರು.