ಬೇಸಿಗೆ ಬೆಳೆಗೆ ನೀರಿಲ್ಲ; ಕಟ್ಟೆಯಲ್ಲಿದ್ದರೂ ಸಿಗಲ್ಲ

ಮಂಡ್ಯ: ಕನ್ನಂಬಾಡಿ ಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ, ನೀರನ್ನು ಕೊಡುವ ಅಧಿಕಾರ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಕೈಗೆ ಸಿಲುಕಿರುವುದರಿಂದ ಬೇಸಿಗೆ ಬೆಳೆಗಳಿಗೆ ನೀರು ಸಿಗುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ರೈತರು ಬೇಸಿಗೆ ಬೆಳೆಗೆ ನೀರು ಸಿಗುವುದೇ ಎಂದು ಪತ್ರಿಕೆಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ನೀರಾವರಿ ನಿಗಮದ ಅಧೀಕ್ಷಕ ರಮೇಂದ್ರ ಅವರನ್ನು `ವಿಜಯವಾಣಿ’ ಸಂಪಕರ್ಿಸಿದಾಗ ಅವರು ಬೇಸಿಗೆಯಲ್ಲಿ ಬಿತ್ತನೆ ಮಾಡುವ ಬೆಳೆಗಳಿಗೆ ನೀರು ಸಿಗುವುದಿಲ್ಲ.

ಹಾಲಿ ಬೆಳೆದು ನಿಂತಿರುವ ಬೆಳೆಗಳ ಅಂಕಿ ಅಂಶ ಸಿದ್ದಪಡಿಸುತ್ತಿದ್ದು, ಆ ಬೆಳೆಗಳ ರಕ್ಷಣೆಗೆ ಯಾವ ರೀತಿ ನೀರು ಕೊಡಬೇಕೆಂಬುದರ ಬಗ್ಗೆ 2-3 ದಿನದಲ್ಲಿ ತೀರ್ಮಾನ ತೆಗೆದುಕೊಂಡು ಪ್ರಕಟಿಸಲಾಗುವುದು ಎಂದವರು ಹೇಳಿದರು.

ಸದ್ಯ ರಾಜ್ಯದ ಪಾಲಿನ ನೀರು 6 ಟಿಎಂಸಿ ಉಳಿದಿದ್ದರೆ, ಒಟ್ಟಾರೆ 25 ಟಿಎಂಸಿ ನೀರು ಬಳಕೆಗೆ ಸಿಗಲಿದೆ. ಆದರೆ, 25 ಟಿಎಂಸಿ ನೀರನ್ನು ಹಂಚಿಕೆ ಮಾಡುವ ಅಧಿಕಾರ ನೀರು ನಿರ್ವಹಣಾ ಮಂಡಳಿಯ ಕೈಯಲ್ಲಿದ್ದು, ಮಂಡಳಿ ಬೆಳೆಗಳಿಗೆ ನೀರು ಬಿಡುವುದೋ ಅಥವಾ ಬೇಸಿಗೆಗೆ ಕುಡಿಯುವ ನೀರಿಗಾಗಿ ಸಂಗ್ರಹಿಸಿಟ್ಟುಕೊಳ್ಳುವುದೋ ಎಂಬುದು ಬಹಿರಂಗ ಆಗಬೇಕಿರುವ ಗುಟ್ಟು.

ಕುಡಿಯುವ ನೀರಿನ ಬಳಕೆಗೆ ಸಂಗ್ರಹಿಸಿಕೊಳ್ಳಲು ನಿಧರ್ಾರ ಮಾಡಿದಲ್ಲಿ ಹಾಲಿ ಬೆಳೆದು ನಿಂತಿರುವ 1,20,000 ಎಕರೆ ಪ್ರದೇಶದ ಕಬ್ಬು ಬಹುತೇಕ ನಾಶವಾಗಲಿದ್ದು, ರೈತರು ಸರಣಿ ಆತ್ಮಹತ್ಯೆ ನಡೆಯುವುದು ನಿಶ್ಚಿತ. ಆದ್ದರಿಂದ ಬೆಳೆ ರಕ್ಷಣೆಗೆ ನಿರ್ವಹಣಾ ಮಂಡಳಿ ಆದ್ಯತೆ ನೀಡಬೇಕು ಎನ್ನುತ್ತಾರೆ ರೈತಸಂಘದ ಮುಖಂಡ ಹುಳ್ಳೇನಹಳ್ಳಿ ಸುಚಿಂದ್ರ.

ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಸದ್ಯ 112.20 ಅಡಿ ನೀರಿದ್ದು, 276 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ, ಕಟ್ಟೆಯಿಂದ 2598 ನೀರು ಬಿಡಲಾಗುತ್ತಿದೆ. ಕಾವೇರಿ ನ್ಯಾಯಾಧೀಕರಣದ ಅಂತಿಮ ಆದೇಶದ ಪ್ರಕಾರ ಕೆ.ಆರ್.ಎಸ್. ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 40,000 ಎಕರೆಯಲ್ಲಿ ಕಬ್ಬು, 1,15,972 ಎಕರೆಯಲ್ಲಿ ಭತ್ತ ಮತ್ತು 20 ಸಾವಿರ ಎಕರೆಯಲ್ಲಿ ಅರೆಖುಷ್ಕಿ ಬೆಳೆಯನ್ನು ಮುಂಗಾರು ಹಂಗಾಮಿನಲ್ಲಿ ಬೆಳೆಯಲು ಅವಕಾಶವಿದೆ.

ಬೇಸಿಗೆ ಅಥವಾ ಹಿಂಗಾರು ಹಂಗಾಮಿನಲ್ಲಿ 40 ಸಾವಿರ ಎಕರೆ ಪ್ರದೇಶದಲ್ಲಿ ನಿಂತಿರುವ ಕಬ್ಬಿನ ಬೆಳೆಗೆ ಹಾಗೂ 20ಸಾವಿರ ಎಕರೆ ಪ್ರದೇಶದಲ್ಲಿ ಅರೆ ಖುಷ್ಕಿ ಬೆಳೆಯನ್ನು ಬೆಳೆಯಲು ಮಾತ್ರ ಅವಕಾಶವಿದೆ. ಆದರೆ, ಈ ಸಂಬಂಧ ರೈತರಿಗೆ ನೀರಾವರಿ ನಿಗಮ ಅಥವಾ ಜಿಲ್ಲಾಡಳಿತ ಇನ್ನೂ ರೈತರಿಗೆ ಯಾವುದೇ ನಿರ್ದೇಶನ ಅಥವಾ ಸೂಚನೆ ನೀಡಿಲ್ಲ. ಪರಿಣಾಮ ಕೆಲವೆಡೆ ರೈತರು ಭತ್ತದ ಒಟ್ಟಿಲು ಹಾಕುತ್ತಿದ್ದಾರೆ. ಕೆಲವೆಡೆ ಕಬ್ಬು ನಾಟಿ ಕೂಡ ನಡೆಯುತ್ತಿದೆ.


ರೈತರು ಈಗ ಯಾವುದೇ ಬೆಳೆ ಹಾಕುವುದು ಬೇಡ. ಮಳೆಯಾಶ್ರಿತ ಬೆಳೆ ಹಾಕಲು ಅಡ್ಡಿಯಲ್ಲಿ. ಇರುವ ಬೆಳೆ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಯಾವ ಪ್ರಮಾಣದಲ್ಲಿ ಬೆಳೆ ಹಾಕಬೇಕು ಎಂಬುದರ ಬಗ್ಗೆ ಜಿಲ್ಲಾಡಳಿತ, ಕೃಷಿ ಇಲಾಖೆ ಜತೆಗೂಡಿ ರೈತರಲ್ಲಿ ಜಾಗೃತಿ ಮೂಡಿಸಲು ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. | ರಮೇಂದ್ರ ಅಧೀಕ್ಷಕ ಅಭಿಯಂತರ ಕಾನೀನಿ. ಜಿಲ್ಲೆಯ 50 ಸಾವಿರ ಕುಟುಂಬಕ್ಕೆ ಉದ್ಯೋಗ ಕಲ್ಪಿಸುವ ಕನಸು ಕಾಣುತ್ತಿರುವ ಸಿಎಂ ಮೊದಲು ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಕೊಡಲಿ. ನಂತರ ಉದ್ಯೋಗ ಸೃಷ್ಟಿಯ ಕಥೆ ಹೇಳಲಿ. ನೀರು ಕೊಡದಿದ್ದರೆ ಸರಣಿ ಆತ್ಮಹತ್ಯೆಗಳಿಗೆ ಸಿಎಂ ಹೊಣೆಗಾರರಾಗುತ್ತಾರೆ. | ಹನಿಯಂಬಾಡಿ ನಾಗರಾಜು ರೈತಸಂಘದ ಮುಖಂಡ.