ನೀರಿನ ಅಭಾವ ಸಾರ್ವಜನಿಕ ಶೌಚಗೃಹಗಳಿಗೆ ಬೀಗ

< ಸಾರ್ವಜನಿಕರಿಗೆ ಪರದಾಡುವ ಸ್ಥಿತಿ ಶುಚಿಗೊಳಿಸಲು ನೀರಿಲ್ಲದೆ ಗಬ್ಬು ವಾಸನೆ >

ಹರೀಶ್ ಮೋಟುಕಾನ, ಮಂಗಳೂರು

ನೀರಿನ ಅಭಾವದ ಬಿಸಿ ಮಂಗಳೂರು ನಗರದ ಸಾರ್ವಜನಿಕ ಶೌಚಗೃಹಗಳಿಗೂ ತಟ್ಟಿದೆ. ಕಂಕನಾಡಿ, ಅಂಬೇಡ್ಕರ್ ವೃತ್ತ, ಹಂಪನಕಟ್ಟೆ ಮೊದಲಾದ ಕಡೆ ಇರುವ ಸಾರ್ವಜನಿಕ ಶೌಚಗೃಹಗಳಿಗೆ ಬೀಗ ಜಡಿಯಲಾಗಿದೆ. ಇದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ಎದುರಾಗಿದೆ.

ಕಂಕನಾಡಿ, ಅಂಬೇಡ್ಕರ್ ವೃತ್ತದಲ್ಲಿರುವ ಸಾರ್ವಜನಿಕ ಶೌಚಗೃಹಗಳು ಅತಿ ಅವಶ್ಯ. ಬಸ್ ತಂಗುದಾಣ ಇರುವ ಕಾರಣ ಸಾವಿರಾರು ಮಂದಿ ಇಲ್ಲಿ ಸೇರುತ್ತಾರೆ. ಪ್ರತಿದಿನ ನೂರಾರು ಮಂದಿ ಈ ಶೌಚಗೃಹಗಳನ್ನು ಬಳಸುತ್ತಾರೆ. ಪ್ರಸ್ತುತ ನೀರಿನ ಕೊರತೆಯಿಂದ ಶೌಚಗೃಹಕ್ಕೆ ಬೀಗ ಹಾಕಲಾಗಿದೆ.

ಕಂಕನಾಡಿ ಮಾರುಕಟ್ಟೆಯೊಳಗೆ ಶೌಚಗೃಹವಿದ್ದು, ಅಲ್ಲಿಯೂ ನೀರಿನ ಸಮಸ್ಯೆ ಎದುರಾಗಿದೆ. ಕಂಕನಾಡಿ ಪರಿಸರದಲ್ಲಿರುವ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಬಸ್ ಚಾಲಕರು, ಅಂಗಡಿಗಳಲ್ಲಿ ಕೆಲಸ ಮಾಡುವವರು ಇಲ್ಲಿನ ಬಸ್ ತಂಗುದಾಣದಲ್ಲಿರುವ ಶೌಚಗೃಹ ಬಳಸುತ್ತಿದ್ದರು. ಬಾಗಿಲು ಹಾಕಿದ ಕಾರಣ ಪ್ರತಿನಿತ್ಯ ಇದನ್ನು ಬಳಸುವವರು ಪರದಾಡುವಂತಾಗಿದೆ.

ನಾಲ್ಕು ದಿನಗಳಿಂದ ಶೌಚಗೃಹಕ್ಕೆ ಬಾಗಿಲು ಹಾಕಿದ್ದು, ಶುಚಿಗೊಳಿಸಲು ನೀರಿಲ್ಲದೆ ಗಬ್ಬು ವಾಸನೆ ಬರುತ್ತಿದೆ. ಅಂಬೇಡ್ಕರ್ ವೃತ್ತದಲ್ಲಿರುವ ಹಾಗೂ ಪಿವಿಎಸ್ ಬಳಿ ಇರುವ ಶೌಚಗೃಹಗಲೂ ಇದೇ ಸ್ಥಿತಿಯಲ್ಲಿವೆ.

ಬಯಲಿನಲ್ಲಿ ಶೌಚ: ಶೌಚಗೃಹ ಆರಂಭವಾಗುವುದಕ್ಕಿಂತ ಹಿಂದೆ ಬಸ್ ನಿಲ್ದಾಣದ ಹಿಂಬದಿ ಕಂಕನಾಡಿ ಮಾರುಕಟ್ಟೆ ಆವರಣದ ಬಯಲಿನಲ್ಲಿ ಮೂತ್ರ ಶಂಕೆ ಮಾಡುತ್ತಿದ್ದರು. ಸ್ಥಾಪನೆಯಾದ ಬಳಿಕ ಇದಕ್ಕೆ ಬ್ರೇಕ್ ಬಿದ್ದಿತ್ತು. ಮುಡಿಪು, ಸುರತ್ಕಲ್ ಮುಂತಾದ ಕಡೆಗೆ ಹೋಗುವ ಬಸ್‌ಗಳು ಇಲ್ಲಿ ತಂಗುತ್ತಿದ್ದು, ಇದರ ಹಿಂಬದಿ ತೆರಳಿ ಮೂತ್ರ ಶಂಕೆ ಮಾಡುತ್ತಿರುವುದು ಕಂಡುಬಂದಿದೆ.

ಟ್ಯಾಂಕರ್ ಮೂಲಕ ನೀರು ಕಲ್ಪಿಸಿ:ಮಂಗಳೂರು ನಗರದ ಹೃದಯ ಭಾಗಗಳಲ್ಲಿರುವ ಸಾರ್ವಜನಿಕ ಶೌಚಗೃಹಗಳು ಅತೀ ಅವಶ್ಯ. ನೀರಿನ ಅಭಾವ ಎಂದು ಶೌಚಗೃಹಕ್ಕೆ ಬೀಗ ಹಾಕುವುದು ಸರಿಯಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಟ್ಯಾಂಕ್‌ನಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಮಾಡಬೇಕು. ಮಳೆಗಾಲ ಆರಂಭವಾಗಲು ಇನ್ನೂ ಒಂದೂವರೆ ತಿಂಗಳ ಕಾಲ ಕಾಯಬೇಕಾಗಿದೆ. ಅಷ್ಟರ ತನಕ ನೀರಿನ ಅಭಾವ ಸಹಜ. ಶೌಚಗೃಹಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಬಳಕೆಗೆ ಒದಗಿಸಬೇಕು ಎಂದು ಸ್ಥಳೀಯ ಟ್ಯಾಕ್ಸಿ ಚಾಲಕರು ಆಗ್ರಹಿಸಿದ್ದಾರೆ.

ಕಂಕನಾಡಿ ಪರಿಸರದಲ್ಲಿ ಶೌಚಗೃಹ ಅಗತ್ಯವಿದ್ದು, ನೀರಿನ ಅಭಾವದಿಂದ ಬಾಗಿಲು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟವರು ಇತ್ತ ಗಮನ ವಹಿಸಿ ಜನರಿಗಾಗುತ್ತಿರುವ ಸಮಸ್ಯೆಯನ್ನು ನೀಗಿಸಬೇಕಾಗಿದೆ.
ಧೀರಜ್, ಬಸ್ ಚಾಲಕ

ಮಂಗಳೂರು ನಗರದಲ್ಲಿರುವ ಎಲ್ಲ ಸಾರ್ವಜನಿಕ ಶೌಚಗೃಹಗಳನ್ನು ನೀರಿಲ್ಲ ಎನ್ನುವ ಕಾರಣ ನೀಡಿ ಬೀಗ ಜಡಿಯುವುದು ಸರಿಯಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಶೌಚಗೃಹ ತೆರೆದಿಡಬೇಕು.
ಶುಭಕರ ಟ್ಯಾಕ್ಸಿ ಚಾಲಕರು, ಕಂಕನಾಡಿ