ಕುಮಾರಧಾರೆ ಒಡಲಲ್ಲೇ ಜಲ ಬರ!

ರತ್ನಾಕರ ಸುಬ್ರಹ್ಮಣ್ಯ

ಬಿಸಿಲ ತಾಪ ಹೆಚ್ಚಿದಂತೆ ಸುಬ್ರಹ್ಮಣ್ಯ ಪರಿಸರ ಸುತ್ತಮುತ್ತ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಪಕ್ಕದಲ್ಲೆ ಕುಮಾರಧಾರಾ ನದಿ ಹರಿಯುತ್ತಿದ್ದರೂ ಕೈಕಂಬ, ಕುಲ್ಕುಂದ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಬಿಳಿನೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಂಬ ಪರಿಸರದಲ್ಲಿ ನೀರಿನ ಸಮಸ್ಯೆ ಒಂದು ತಿಂಗಳಿಂದ ಕಾಣಿಸಿಕೊಂಡಿದೆ. ಸ್ಥಳೀಯ ಪಂಚಾಯಿತಿ ಈ ಭಾಗಕ್ಕೆ ಸಮಗ್ರ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ತಂದಿದೆ. ಕೈಕಂಬ ಕಾಲನಿ ಪಕ್ಕದಲ್ಲೆ ಕೊಳವೆಬಾವಿ ತೆರೆದು ಪೈಪ್ ಅಳವಡಿಸಿ ಅದರಿಂದ ಸಣ್ಣ ಮತ್ತು ದೊಡ್ಡ ಗಾತ್ರದ ಎರಡು ತೊಟ್ಟಿಗೆ ನೀರು ಹರಿಸಿ ಪರಿಸರದ ಮನೆ ಹಾಗೂ ಶಾಲೆ, ಅಂಗನವಾಡಿಗಳಿಗೆ ನೀರು ಒದಗಿಸಲಾಗುತ್ತಿತ್ತು. ಆದರೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಪರಿಸರದ ಮನೆಗಳಿಗೆ ಮತ್ತು ಅಂಗನವಾಡಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ.

ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವಾಸಿಗಳ ಕಾಲನಿಗಳಿವೆ. ಇತರೆ ಹಲವು ಕುಟುಂಬಗಳೂ ವಾಸಿಸುತ್ತಿವೆ. ಇವರೆಲ್ಲರೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಥಳೀಯ ನಿವಾಸಿ ವೀರಪ್ಪ ಕೈಕಂಬ ಎಂಬುವರು ಸ್ವಂತ ಬಳಕೆಗೆ ಕೊಳವೆ ಬಾವಿ ಹೊಂದಿದ್ದು ಎಲ್ಲರಿಗೂ ನೀರು ನೀಡಿ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಕೈಕಂಬ ಶಾಲೆಯಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಕುಡಿಯಲು ಮನೆಯಿಂದ ಹೆತ್ತವರು ನೀರು ಕಳುಹಿಸಿದರೂ ಅಡುಗೆ, ಶೌಚಗೃಹಕ್ಕೆ ನೀರಿಲ್ಲದೆ ತೊಂದರೆಯಾಗಿದೆ.

ಸಮಸ್ಯೆಗೆ ಕಾರಣ: ಕುಡಿಯುವ ನೀರು ಯೋಜನೆಯ ಪಂಪ್ ಆಗಾಗ್ಗೆ ಕೆಡುತ್ತಿರುವುದು ಸಮಸ್ಯೆಗೆ ಕಾರಣ. ಇನ್ನೊಂದೆಡೆ ದೊಡ್ಡ ನೀರಿನ ಟ್ಯಾಂಕ್‌ಗೆ ಅಳವಡಿಸಿರುವ ಪೈಪ್‌ಗಳು ಶಿಥಿಲಗೊಂಡಿವೆ. ಹೀಗಾಗಿ ಪೈಪ್ ಆಗಾಗ್ಗೆ ಒಡೆದು ನೀರು ಸರಾಗವಾಗಿ ಹರಿಯದೆ ಪೋಲಾಗುತ್ತಿತ್ತು. ತೊಟ್ಟಿಗೆ ಹೋಗುವ ನೀರು ಅರ್ಧಕ್ಕೂ ಹೆಚ್ಚು ಸೋರಿಕೆಯಾಗಿ ಟ್ಯಾಂಕ್‌ನಲ್ಲಿ ಅತ್ಯಲ್ಪ ನೀರು ಸಂಗ್ರಹವಾಗುತ್ತದೆ. ಇದರಿಂದ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.

ಕುಡಿಯುವ ನೀರಿನ ಯೋಜನೆಯ ವಿದ್ಯುತ್ ಚಾಲಿತ ಪಂಪ್ ತಿಂಗಳಲ್ಲಿ ಹತ್ತಾರು ಬಾರಿ ಕೆಟ್ಟು ಹೋಗುತ್ತಿದೆ. ದುರಸ್ತಿ ತತ್‌ಕ್ಷಣಕ್ಕೆ ಆಗುತ್ತಿಲ್ಲ. ಪೈಪ್‌ಗಳು ಕೂಡ ಶಿಥಿಲಗೊಂಡು ಸಮಸ್ಯೆ ಬಿಗಡಾಯಿಸುತ್ತಿರುತ್ತದೆ. ಸಣ್ಣ ತೊಟ್ಟಿಯ ಸಂಗ್ರಹದ ನೀರು ಸಾಲುತ್ತಿಲ್ಲ. ದೊಡ್ಡ ನೀರಿನ ತೊಟ್ಟಿಗೆ ನೀರು ಸಾಕಷ್ಟು ಹರಿಯುತ್ತಿಲ್ಲ.

ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ: ಬಿಳಿನೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಂಬ ಪರಿಸರದಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆ ಸದ್ಯ ನಿವಾರಣೆಗೊಂಡಿದೆ. ಸ್ಪಂದಿಸಿದ ಬಿಳಿನೆಲೆ ಗ್ರಾಪಂ ಪಿಡಿಒ, ಅಧ್ಯಕ್ಷರು ಮತ್ತು ಸದಸ್ಯರು ಕೆಟ್ಟು ಹೋಗಿರುವ ಪಂಪ್ ಬದಲಿಗೆ ಪರ‌್ಯಾಯ ಪಂಪ್ ಅಳವಡಿಸಿ, ಪೈಪ್‌ಗಳನ್ನು ಬದಲಿಸಿ ನೀರು ಹರಿಯುವಂತೆ ಮಾಡಿದ್ದಾರೆ. ಈ ಮೂಲಕ ಬಹುಸಮಯಗಳಿಂದ ಎದುರಿಸುತ್ತಿದ್ದ ಸಮಸ್ಯೆ ನಿವಾರಣೆ ಕಂಡಿದೆ. ಸ್ಥಳೀಯ ನಿವಾಸಿಗಳ ಎಲ್ಲ ಮನೆ ಹಾಗೂ ಅಂಗನವಾಡಿ ಕೇಂದ್ರಕ್ಕೂ ನೀರು ತಲುಪುತ್ತಿದೆ.

ತೋಟಕ್ಕೂ ನೀರು ಸಿಗದೆ ಕಂಗಾಲು: ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತ ಪರಿಸರದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಜೀವಜಲಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಕಂಡುಬರಲಾರಂಭಿಸಿವೆ. ಬಟ್ಟೆ ತೊಳೆಯಲು ಮಹಿಳೆಯರು ನೀರು ಅರಸಿ ತೆರಳುತ್ತಿದ್ದಾರೆ. ತೋಟಕ್ಕೂ ನೀರು ಸಿಗದೆ ರೈತರು ಕಂಗೆಟ್ಟಿದ್ದಾರೆ. ಸುಬ್ರಹ್ಮಣ್ಯ ಗ್ರಾಪಂ ವ್ಯಾಪ್ತಿಯ ಕುಲ್ಕುಂದ ಪರಿಸರದಲ್ಲಿ ಸಹಿತ ಕುಡಿಯುವ ನೀರಿನ ಕ್ಷಾಮ ಎದುರಾಗಿದೆ. ವಿದ್ಯುತ್ ಲೋವೋಲ್ಟೇಜ್ ಸಮಸ್ಯೆಯಿಂದಲೂ ಪಂಪ್‌ಗಳು ಕೆಟ್ಟುಹೋಗುತ್ತಿವೆ. ಎಡಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಪ್ ಕೈಕೊಟ್ಟಿದ್ದು ಎಸ್‌ಡಿಎಂಸಿಯವರು, ಹಳೇ ವಿದ್ಯಾರ್ಥಿಗಳು ವಾಹನದ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ.

ನೀರು ಸರಬರಾಜಿನ ವಿದ್ಯುತ್ ಪಂಪ್ ಕೆಟ್ಟಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ದುರಸ್ತಿಗೆ ಕಳುಹಿಸಲಾಗಿದೆ. ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪರ‌್ಯಾಯವಾಗಿ ಬೇರೆ ಪಂಪ್ ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಿ ಕೊಟ್ಟಿದ್ದೇವೆ.
| ಶೀನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಿಳಿನೆಲೆ

ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸುತ್ತೇವೆ. ಈಗ ಆಗಿರುವ ಸಮಸ್ಯೆ ನಿವಾರಣೆಗೆ ತಕ್ಷ್ಷಣದಿಂದ ಒತ್ತು ನೀಡುತ್ತೇವೆ.
| ಶಾರದಾ ಬಿಳಿನೆಲೆ ಗ್ರಾಪಂ ಅಧ್ಯಕ್ಷೆ