ನೀರು ಸಮಸ್ಯೆ ಪರಿಹಾರಕ್ಕೆ ಶ್ರಮ

– ವಿಜಯವಾಣಿ ಸುದ್ದಿಜಾಲ ಮಂಗಳೂರು
ಜಿಲ್ಲಾದ್ಯಂತ ನೀರು ವಿತರಣೆ ಮತ್ತು ಪೂರೈಕೆ ಸಂಬಂಧ ಉಪವಿಭಾಗಾಧಿಕಾರಿ ಹಾಗೂ ಇಂಜಿನಿಯರ್‌ಗಳಿಗೆ ನೀರು ನಿರ್ವಹಣೆ ಹೊಣೆ ವಹಿಸಲಾಗಿದ್ದು, ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಎತ್ತರದ ಪ್ರದೇಶಗಳಿಗೆ ಹಾಗೂ ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಮುಂಚೆಯೇ ಗುರುತಿಸಿ ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೆ ಜಿಲ್ಲೆಯಲ್ಲಿ ಅನಾವೃಷ್ಟಿ ಮತ್ತು ಅತಿವೃಷ್ಟಿ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮೀಣ ವ್ಯಾಪ್ತಿಯಲ್ಲಿ ನೀರು ನಿರ್ವಹಣೆಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್.ಸೆಲ್ವಮಣಿ ಖುದ್ದು ಉಸ್ತುವಾರಿ ವಹಿಸಿ ಸಂಬಂಧಪಟ್ಟ ಕಾರ್ಯನಿರ್ವಹಣಾಧಿಕಾರಿಗಳ ಜತೆ ನಿರ್ವಹಣೆ ಯೋಜನೆಗಳನ್ನು ಅವಲೋಕಿಸಿದ್ದಾರೆ ಎಂದರು.
ಉಳ್ಳಾಲ, ಮೂಲ್ಕಿ, ಮೂಡುಬಿದಿರೆಯಲ್ಲಿ ನೀರು ನಿರ್ವಹಣೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಉಸ್ತುವಾರಿ ಸಚಿವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಟ್ಯಾಂಕರ್ ಮುಖಾಂತರ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಬೋರ್‌ವೆಲ್ ಕೊರೆಸಲು ಅನುಮತಿ ನೀಡಲಾಗಿದೆ ಎಂದರು. ಉಳ್ಳಾಲ, ಮೂಲ್ಕಿಯ ಮುಖ್ಯಾಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದು, ನೀರು ನಿರ್ವಹಣೆಗೆ ಸಹಕಾರ ನೀಡದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.
ಮೂಡುಬಿದಿರೆ ಮತ್ತು ಬಂಟ್ವಾಳದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದು, ಬಂಟ್ವಾಳದಲ್ಲಿ ನೀರು ಪೂರೈಕೆ ಸಂಬಂಧ ಇದ್ದ ಸಮಸ್ಯೆ ಸರಿಪಡಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ್ ಹೇಳಿದರು. ಪುತ್ತೂರಿನಲ್ಲಿ ನೀರಿಗೆ ಸಮಸ್ಯೆಯಾಗಿಲ್ಲ ಎಂದು ಎಸಿ ಕೃಷ್ಣಮೂರ್ತಿ ತಿಳಿಸಿದರು. ಪುತ್ತೂರಿನ ಕೆಲವು ಪ್ರದೇಶಗಳಲ್ಲಿ ನೀರಿದ್ದರೂ ಲೋ ವೋಲ್ಟೇಜ್ ಸಮಸ್ಯೆಯಿದೆ ಎಂದು ಸಿಇಒ ತಿಳಿಸಿದರು.

ತಾಲೂಕಿಗೆ 25 ಲಕ್ಷ ರೂ.: ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಕೆಲವು ಪ್ರದೇಶಗಳಲ್ಲಿ ನೀರಿನ ಅಭಾವವಿದ್ದು, ಪ್ರತಿ ತಾಲೂಕಿಗೆ ಬರ ನಿರ್ವಹಣೆಗೆ 25 ಲಕ್ಷ ರೂ. ನೀಡಲಾಗಿದೆ ಎಂದು ಸಿಇಒ ಮಾಹಿತಿ ನೀಡಿದರು.

ಜೂ.6ರವರೆಗೆ ತುಂಬೆ ನೀರು: ತುಂಬೆ ಅಣೆಕಟ್ಟಿನಲ್ಲಿ ನೀರಿನ ಕುಸಿತದ ಹಿನ್ನೆಲೆಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಜೂನ್ 6ರವರೆಗೂ ವ್ಯವಸ್ಥಿತವಾಗಿ ರೇಷನಿಂಗ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮಳೆ ಬಂದು ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ತುಂಬೆಯಲ್ಲಿ ನೀರಿನ ಮಟ್ಟ ಏರಿದರೆ ನೀರಿನ ರೇಷನಿಂಗ್ ಸ್ಥಗಿತಗೊಳಿಸಲಾಗುವುದು. ಮನಪಾ ವ್ಯಾಪ್ತಿಯಲ್ಲಿ ನೀರು ನಿರ್ವಹಣೆಗೆ ತೆರೆದ ಬಾವಿ ಹಾಗೂ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದ್ದು, ಹೊಸ 11 ಬೋರ್‌ವೆಲ್ ಸಹಿತ ಒಟ್ಟು 135 ಬೋರ್‌ವೆಲ್‌ಗಳಿವೆ. 48 ತೆರೆದ ಬಾವಿಗಳಿದ್ದು, 26ನ್ನು ಸ್ವಚ್ಛಗೊಳಿಸಲಾಗಿದೆ. ಇನ್ನುಳಿದ ಬಾವಿಗಳನ್ನು 2 ದಿನಗಳೊಳಗಾಗಿ ಸ್ವಚ್ಛಗೊಳಿಸಲಾಗುವುದು. ನೀರಿನ ಶುದ್ಧತೆಯನ್ನು ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಳೆಗಾಲ ಎದುರಿಸಲು ಸಿದ್ಧತೆ:  ಮಳೆಗಾಲವನ್ನು ಎದುರಿಸಲು ಎಲ್ಲ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದ್ದು, ಮಹಾನಗರಪಾಲಿಕೆ ಆಯುಕ್ತರು, ಉಪವಿಭಾಗಾಧಿಕಾರಿಗಳು ಹಾಗೂ ಪಂಚಾಯಿತಿಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಇಒ ಪಿಪಿಟಿ ಮೂಲಕ ವಿವರ ನೀಡಿದರು. ದೋಣಿಗಳು, ಹೋಂಗಾರ್ಡ್ ಹಾಗೂ ಉಪಕರಣಗಳನ್ನು ಚೆಕ್‌ಲಿಸ್ಟ್ ಮಾಡಿದ್ದು, ಎಲ್ಲವೂ ಸನ್ನದ್ಧ ಸ್ಥಿತಿಯಲ್ಲಿದೆ. ದುರಂತ ಸಂಭವಿಸಿದರೆ 24 ಗಂಟೆ ಹೆಚ್ಚೆಂದರೆ 48 ಗಂಟೆಯೊಳಗೆ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ. ಕಂಟ್ರೋಲ್ ರೂಮ್ ಈಗಾಗಲೆ ವ್ಯವಸ್ಥಿತವಾಗಿದ್ದು, ಸ್ಯಾಟಲೈಟ್ ಫೋನ್ ಸಹ ನೀಡಲಾಗಿದೆ ಎಂದರು.

ಘಾಟಿ ಕುಸಿತ ಸಾಧ್ಯತೆ:  ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಮೂರು ಘಾಟಿಗಳಲ್ಲಿ ಭೂಕುಸಿತ ಸಂಭವಿಸುವ ಮುನ್ಸೂಚನೆಗಳಿದ್ದು, ಲೋಕೋಪಯೋಗಿ ಇಲಾಖೆಗೆ ನಿರ್ವಹಣೆ ಹೊಣೆ ನೀಡುವಂತೆ ಜಿಲ್ಲಾಧಿಕಾರಿ ಸಚಿವರಿಗೆ ಸಲಹೆ ಮಾಡಿದರು. ಈಗಾಗಲೇ ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಭೂಕುಸಿತ ನಿರ್ವಹಣೆಗೆ ನಿಗದಿತ ಘಾಟಿಗಳಲ್ಲಿ ಜೆಸಿಬಿ ಹಾಗೂ ಸಿಬ್ಬಂದಿಯನ್ನು ಇರಿಸಲು ಸೂಚಿಸಲಾಗಿದೆ ಎಂದು ಸೆಂಥಿಲ್ ತಿಳಿಸಿದರು.

ಮಂಗಳೂರಿಗೆ ಪಂಪಿಂಗ್ ಸ್ಥಗಿತ

ಮಂಗಳೂರು: ತುಂಬೆಯಲ್ಲಿ ಸೋಮವಾರ ಮುಂಜಾನೆ ಪಂಪಿಂಗ್ ಸ್ಥಗಿತಗೊಳಿಸಲಾಗಿದ್ದು, ಮಂಗಳೂರು ನಗರಕ್ಕೆ ನೀರು ಪೂರೈಕೆ ನಿಂತಿದೆ. ನಗರದ ವಿವಿಧಡೆ ಓವರ್ ಹೆಡ್ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗಿದ್ದ ನೀರನ್ನು ಆದ್ಯತೆಯ ಮೇರೆಗೆ ವಿವಿಧೆಡೆಗಳಿಗೆ ಒದಗಿಸಲಾಗಿದೆ. ಖಾಸಗಿ ಟ್ಯಾಂಕರ್‌ಗಳ ನೀರು ಪೂರೈಕೆ ಎಂದಿನಂತೆ ಇತ್ತು. ರೇಷನಿಂಗ್ ಕುರಿತು ಸಾರ್ವಜನಿಕರಿಗೆ ಮಾಹಿತಿ ಇದ್ದುದರಿಂದ ಹಾಗೂ ನೀರು ಸಂಗ್ರಹಿಸಿ ಇಟ್ಟಿದ್ದರಿಂದ ಮೊದಲ ದಿನ ಸಮಸ್ಯೆಯಾಗಿಲ್ಲ. ಜಿಲ್ಲಾದ್ಯಂತ ಮಳೆಯಾಗಿದ್ದರೂ, ನದಿಯಲ್ಲಿ ನೀರು ಹರಿಯುವಷ್ಟು ಸುರಿದಿಲ್ಲ, ಆದ್ದರಿಂದ ನೀರು ರೇಷನಿಂಗ್ ವೇಳಾಪಟ್ಟಿ ಸದ್ಯಕ್ಕೆ ಬದಲಾಗದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.