ಆವರಿಸಿದೆ ಬರಗಾಲದ ಛಾಯೆ!

ಪುರುಷೋತ್ತಮ ಪೆರ್ಲ ಕಾಸರಗೋಡು
ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದೆ. ಹೊಳೆ, ಕೆರೆ, ಬಾವಿಗಳು ಬರಡಾಗಿದ್ದು, ಜೀವಜಲಕ್ಕೆ ಕೊಳವೆಬಾವಿಗಳನ್ನು ಮಾತ್ರ ಜನ ಆಶ್ರಯಿಸುವಂತಾಗಿದೆ. ವ್ಯಾಪಕಗೊಂಡ ಕೊಳವೆಬಾವಿ, ಜಲಸಂರಕ್ಷಣೆ ಬಗ್ಗೆ ಸರ್ಕಾರದ ನಿರ್ಲಕ್ಷೃ ಧೋರಣೆ, ನೀರಿನ ವ್ಯಾಪಕ ದುರ್ಬಳಕೆ ಬರದ ಛಾಯೆ ಆವರಿಸಲು ಪ್ರಮುಖ ಕಾರಣವಾಗುತ್ತಿದೆ.
ಮಳೆಗಾಲಕ್ಕೂ ಮೊದಲು ಜಲಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ನೀರು ಪೋಲಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಇದಾವುದಕ್ಕೂ ಮುಂದಾಗುತ್ತಿಲ್ಲ ಎಂಬ ದೂರು ಹೆಚ್ಚುತ್ತಿದೆ.

ಅಂತರ್ಜಲಕ್ಕೆ ಕನ್ನ: ಕೆಲವು ಕೃಷಿಕರು ತಮ್ಮ ತೋಟಗಳಿಗೆ ನಿರಂತರ ನೀರು ಹಾಯಿಸುವ ಮೂಲಕ ಅಂತರ್ಜಲಕ್ಕೆ ಕನ್ನ ಹಾಕುತ್ತಿದ್ದಾರೆ. ಮಾನದಂಡ ಉಲ್ಲಂಘಿಸಿ ಹೊಳೆ ಸಹಿತ ಜಲಮೂಲಗಳಿಂದ ಅನಧಿಕೃತವಾಗಿ ನೀರು ಪಂಪು ಮಾಡಲಾಗುತ್ತಿದೆ. ನೀರಿನ ಮಿತ ಬಳಕೆ ಹಾಗೂ ವೈಜ್ಞಾನಿಕ ರೀತಿಯಲ್ಲಿ ಸಿಂಪಡಿಸುವ ವಿಧಾನದ ಬಗ್ಗೆ ಸರ್ಕಾರ ಕೃಷಿಕರಿಗೆ ಮಾಹಿತಿ ನೀಡದಿರುವುದೂ ಸಮಸ್ಯೆಗೆ ಕಾರಣವಾಗುತ್ತಿದೆ. ಕೆಲವೆಡೆ ಇಂತಿಷ್ಟೇ ಪ್ರಮಾಣದ ನೀರು ಹಾಯಿಸಿದರೆ ಸಾಕೆಂಬ ಲೆಕ್ಕಾಚಾರವಿದ್ದರೂ, ಈ ಬಗ್ಗೆ ಮಾಹಿತಿಯಿಲ್ಲದೆ ಕೃಷಿಕರು ನಿರಂತರ ನೀರುಣಿಸುತ್ತಿದ್ದಾರೆ.

ಅಭಿವೃದ್ಧಿಪಡಿಸಿದಲ್ಲಿ ಭಾರಿ ಪ್ರಮಾಣದ ನೀರು ಸಿಗಬಹುದಾದ ಅನೇಕ ಜಲಾಶಯಗಳು ಜಿಲ್ಲೆಯಲ್ಲಿವೆ. ಇಂಥ ಜಲಾಶಯಗಳ ಪುನಃಶ್ಚೇತನಕ್ಕೂ ಸರ್ಕಾರ ಮುಂದಾಗುತ್ತಿಲ್ಲ ಎಂಬ ದೂರುಗಳೂ ಇವೆ. ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಜಲಪ್ರಾಧಿಕಾರ ಅಳವಡಿಸುವ ಪೈಪ್‌ಗಳಲ್ಲಿ ನೀರು ವ್ಯಾಪಕವಾಗಿ ಪೋಲಾಗುತ್ತಿದೆ. ಮತ್ತೊಂದೆಡೆ ವ್ಯಾಪಕ ಪ್ರಮಾಣದಲ್ಲಿ ಕಾಡು ನಾಶ, ಗುಡ್ಡ ಅಗೆತ, ಹೊಳೆಗಳಿಂದ ಮರಳು ಸಂಗ್ರಹವೂ ಅಂತರ್ಜಲ ಕುಸಿತಕ್ಕೆ ಕಾರಣವಾಗುತ್ತಿದೆ.

ಕಾಯಕಲ್ಪಕ್ಕೆ ಕಾಯುತ್ತಿವೆ ಕೆರೆ, ಮದಗಗಳು: ಸರ್ಕಾರದ ನಿರ್ಲಕ್ಷೃ ಧೋರಣೆಯಿಂದ ಜಿಲ್ಲೆಯ ಹಲವಾರು ಕೆರೆ, ಮದಗಗಳು ಶಿಥಿಲಾವಸ್ಥೆ ತಲುಪುತ್ತಿವೆ. ಜಲಸಂರಕ್ಷಣೆ ಬಗ್ಗೆ ಕೆಲವು ಸ್ಥಳೀಯಾಡಳಿತಗಳು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳ ಕೂಗಳತೆ ದೂರದಲ್ಲಿರುವ ನೀರಿನ ಮೂಲಗಳು ಶಿಥಿಲಾವಸ್ಥೆ ತಲುಪುತ್ತಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ವಿಪರ್ಯಾಸ.
ಕಡುಬೇಸಿಗೆಯಲ್ಲೂ ನೀರು ಹಿಡಿದಿಟ್ಟುಕೊಳ್ಳುವ ಅಪೂರ್ವ ಕೆರೆಯೊಂದು ಮಧೂರು ಗ್ರಾಪಂ ವ್ಯಾಪ್ತಿಯ ಪರಕ್ಕಿಲದಲ್ಲಿದ್ದು, ಅದು ಅವನತಿಯ ಅಂಚಿಗೆ ತಲುಪಿದೆ. ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ವಿಶಾಲ ಕೆರೆಗೆ ಶತಮಾನದ ಇತಿಹಾಸವಿದ್ದು, ಪ್ರಸಕ್ತ ಹೂಳು ತುಂಬಿಕೊಂಡು ತನ್ನ ಒಡಲಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಅತಿ ವಿಸ್ತಾರದ ಈ ಕೆರೆ ಜಲಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ನಿರಂತರ ನೀರಿನಿಂದ ತುಂಬಿ ತುಳುಕುತ್ತಿದ್ದ ಈ ಕೆರೆ ಕೃಷಿಕರ ಪಾಲಿಗೆ ಜೀವನಾಡಿಯಾಗಿದ್ದರೂ, ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷೃ ಧೋರಣೆಗೆ ಸಾಕ್ಷಿಯಾಗಿ ನಿಂತಿದೆ. ಪರಕ್ಕಿಲ ಕೆರೆ ನೀರಿನಿಂದ ತುಂಬಿಕೊಂಡಿದ್ದರೆ, ಆಸುಪಾಸಿನ ಬಾವಿ, ಕೆರೆಗಳಲ್ಲೂ ಅಂತರ್ಜಲ ಮಟ್ಟ ಹೆಚ್ಚುತ್ತದೆ.

ಹೂಳು ತೆಗೆದರೆ ಹೊಮ್ಮಲಿದೆ ನೀರು: ಶತಮಾನ ಕಂಡ ಪರಕ್ಕಿಲ ಕೆರೆ ಕಾಯಕಲ್ಪಕ್ಕೆ ಕಾಯುತ್ತಿದೆ. ಭಾರಿ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಸಂಗ್ರಹವೂ ಕುಸಿದಿದೆ. ನಾಲ್ಕೂ ಬದಿಯಿಂದ ಆವರಣ ಗೋಡೆ ನಿರ್ಮಿಸುವುದರ ಜತೆಗೆ ಮಳೆ ನೀರಿನೊಂದಿಗೆ ಹೂಳು ಹರಿದು ಬರದಂತೆ ತಡೆಗಟ್ಟಬೇಕಾಗಿದೆ. ಜಿಲ್ಲೆಯಲ್ಲಿ ಹಲವಾರು ಕೆರೆಗಳು, ಮದಕಗಳು ಅಭಿವೃದ್ಧಿ ಕಾಣದೆ ಶಿಥಿಲಾವಸ್ಥೆಯಲ್ಲಿದೆ. ಇವುಗಳಲ್ಲಿ ಪೈವಳಿಕೆ ಬಾಯಿಕಟ್ಟೆ, ಪುತ್ತಿಗೆಯ ಅನೋಡಿಪಳ್ಳ, ಎಣ್ಮಕಜೆಯ ಬೆದ್ರಂಪಳ್ಳ ಮದಗ ಪ್ರಮುಖವಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ವಯ ಕಾರ್ಮಿಕರನ್ನು ಜಲಸಂರಕ್ಷಣೆ, ಕೃಷಿಪರ ಚುಟುವಟಿಕೆಗಳಲ್ಲಿ ಇಂತಹ ಕೃಷಿಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಜನ ಆಗ್ರಹಿಸಿದ್ದಾರೆ.

ಪಂಚಾಯಿತಿಗೆ ಸೀಮಿತ ಅನುದಾನ ಇರುವುದರಿಂದ ಮಧೂರು ಪರಕ್ಕಿಲ ಕೆರೆಯ ಅಭಿವೃದ್ಧಿ ಕಾರ್ಯದ ಹೊಣೆಯನ್ನು ಕಿರು ನೀರಾವರಿ ಇಲಾಖೆ ಅಥವಾ ಜಿಲ್ಲಾ ಪಂಚಾಯಿತಿ ವಹಿಸಿಕೊಳ್ಳುವುದು ಅನಿವಾರ್ಯ. ಎರಡು ವರ್ಷಗಳಿಂದಲೂ ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಕೆರೆಯ ನೀರನ್ನು ಕೃಷಿಗೆ ಬಳಸಿಕೊಳ್ಳುವುದರ ಜತೆಗೆ ಜಲಸಂರಕ್ಷಣಾ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು.
ಮಾಲತಿ ಸುರೇಶ್ ಅಧ್ಯಕ್ಷೆ ಮಧೂರು ಗ್ರಾಮ ಪಂಚಾಯಿತಿ

ನೀರಿನ ದುರುಪಯೋಗ ತಡೆಯಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ. ಇದರ ಹೊಣೆಯನ್ನು ಕೃಷಿ ಇಲಾಖೆ, ನೀರಾವರಿ ಇಲಾಖೆ ಅದಿಕಾರಿಗಳಿಗೆ ನೀಡಲಾಗಿದೆ. ಬರಪೀಡಿತ ಪ್ರದೇಶವೆಂದು ಸರ್ಕಾರ ಆದೇಶ ನೀಡಿದರೆ ಮಾತ್ರ ಎಸ್‌ಡಿಆರ್‌ಎಫ್ ನಿಧಿ ಬಳಕೆ ಸಾಧ್ಯ. ಕಳೆದ ವರ್ಷ ನಡೆಸಿದ ರೀತಿ ಜಿಪಿಎಸ್ ಅಳವಡಿಸಿದ ವಾಹನಗಳಲ್ಲಿ ಕುಡಿಯುವ ನೀರು ವಿತರಿಸುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಡಾ.ಡಿ.ಸಜಿತ್ ಬಾಬು ಕಾಸರಗೋಡು ಜಿಲ್ಲಾಧಿಕಾರಿ