ನಂದಳಿಕೆ ಗ್ರಾಪಂನಲ್ಲಿ ಬತ್ತುತ್ತಿದೆ ಜಲಮೂಲ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್

ಬಿಸಿಲ ತಾಪ ಏರುತ್ತಿದ್ದಂತೆ ಕಾರ್ಕಳ ತಾಲೂಕಿನಲ್ಲಿ ಹಲವೆಡೆ ನೀರಿಗೆ ತತ್ವಾರ ಉಂಟಾಗಿದೆ. ನಂದಳಿಕೆ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಜಮೀನು ಒಟ್ಟು ಸೇರಿ ಸುಮಾರು 22ಕ್ಕೂ ಅಧಿಕ ಕೆರೆಗಳಿವೆ. ಆದರೆ ಎಲ್ಲ ಕೆರೆಗಳು ಸರಿಯಾದ ನಿರ್ವಹಣೆ ಇಲ್ಲದೆ ಈ ಬಾರಿ ಬಹುಬೇಗನೆ ಬತ್ತಿ ಹೋಗಿವೆ. ಈ ಹಿನ್ನೆಲೆಯಲ್ಲಿ ಆಗಿದೆ.

ನಂದಳಿಕೆ ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ಕೆರೆಗಳಿದ್ದು, ಸರಿಯಾದ ನಿರ್ವಹಣೆ ಮಾಡಿದಲ್ಲಿ ಇಡೀ ಗ್ರಾಮದ ನೀರಿನ ಸಮಸ್ಯೆಗೆ ಮುಕ್ತಿ ದೊರೆಯಲಿದೆ.

ನಂದಳಿಕೆ ಗ್ರಾಪಂ ವ್ಯಾಪ್ತಿಯ ಗೋಳಿಕಟ್ಟೆ, ಕಕ್ಕೆಪದವು, ಆರ್ಯಾಡ್, ಕೆದಿಂಜೆ ಪಕಲ, ಮಾವಿನಕಟ್ಟೆ ಪ್ರದೇಶಗಳಿಗೆ ಪ್ರತಿ ಬೇಸಿಗೆ ಕಾಲ ಹಾಗೂ ಮಳೆಗಾಲ ಸಂದರ್ಭ ಎರಡು ದಿನಕ್ಕೊಮ್ಮೆ ನೀರನ್ನು ಪಂಚಾಯಿತಿ ಪೂರೈಕೆ ಮಾಡುತ್ತಿದೆ. ಪ್ರತಿ ಮನೆ ಮನೆಗೆ ನಳ್ಳಿ ನೀರಿನ ಸಂಪರ್ಕ ಕಲ್ಪಿಸಿದ್ದರೂ ಎರಡು ದಿನಕೊಮ್ಮೆ ನೀರು ನೀಡುತ್ತಿದೆ. ಈಗ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದರೂ ಕೆಲವು ಸಂದರ್ಭದಲ್ಲಿ ಸರಿಯಾದ ವೇಳೆಯಲ್ಲಿ ಗ್ರಾಮಸ್ಥರಿಗೆ ನೀರು ಪೂರೈಕೆಯಾಗುತ್ತಿಲ್ಲ. ಕೆಲವೊಮ್ಮೆ ರಾತ್ರಿ 10 ಗಂಟೆಗೂ ನೀರು ಬರುತ್ತದೆ.
ಇತ್ತೀಚೆಗೆ ಮಾವಿನಕಟ್ಟೆಗೆ ನೀರು ಪೂರೈಸುವ ಬೋರ್‌ವೆಲ್‌ನಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿತ್ತು. ಕೂಡಲೇ ಎಚ್ಚೆತ್ತ ಸ್ಥಳೀಯಾಡಳಿತ ಮಾವಿನಕಟ್ಟೆ ಪರಿಸರಕ್ಕೆ ಸುಮಾರು 12 ದಿನಗಳಲ್ಲಿ ಟ್ಯಾಂಕರ್ ಮೂಲಕ ನೀರು ನೀಡಿದೆ. ಬಳಿಕ ನೂತನ ಬೋರ್‌ವೆಲ್ ನಿರ್ಮಿಸಿದ್ದು ನೀರಿನ ಸಮಸ್ಯೆಗೆ ಮುಕ್ತಿ ನೀಡಿದೆ. ಆದರೂ ಕೆಲವೊಂದು ಪ್ರದೇಶದಲ್ಲಿ ಬಹುಬೇಗನೇ ನೀರಿನ ಸಮಸ್ಯೆ ಕಾಡಲಿದ್ದು, ಪೂರ್ವಭಾವಿಯಾಗಿ ಪಂಚಾಯಿತಿ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸುತ್ತಿದೆ.

ನಿರ್ವಹಣೆ ಭಾಗ್ಯ ಕಾಣಬೇಕಾದ ಕೆರೆಗಳು: ನಂದಳಿಕೆ ಗ್ರಾಪಂ ವ್ಯಾಪ್ತಿಯ ಬಹುದೊಡ್ಡ ಕೆರೆಗಳ ಪೈಕಿ ಮಜಲಕೆರೆ ವಿಸ್ತಾರವಾಗಿದ್ದು, ನೀರಿನ ಒರತೆಯೂ ಹೆಚ್ಚಿದೆ. ಸುಮಾರು 12 ವರ್ಷಗಳ ಹಿಂದೆ ಹೂಳೆತ್ತುವ ಕಾರ್ಯ ಮಾಡಿದ್ದು, ಆ ಬಳಿಕ ಯಾವುದೇ ಕೆರೆಯ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಈಗ ಕೆರೆಯಲ್ಲಿ ಹೂಳು ತುಂಬಿದೆ. ಈ ಬಾರಿ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ. ಮಜಲ ಕೆರೆಯಿಂದಾಗಿ ಈ ಭಾಗದ ಕೃಷಿಕರಿಗೆ ಪ್ರಯೋಜನವಾಗಲಿದೆ. ಜತೆಗೆ ಪರಿಸರದ ಬಾವಿಗಳಲ್ಲಿ ನೀರಿನ ಒರತೆಯೂ ಹೆಚ್ಚಿದೆ. ಈ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ನಂದಳಿಕೆ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಯೋಜನೆಯನ್ನು ಇಲ್ಲಿ ಅಳವಡಿಸಬಹುದು. ನಂದಳಿಕೆ ಗೋಳಿಕಟ್ಟೆ ಬಳಿಯಲ್ಲಿರುವ ಗುರುಬೆಟ್ಟು ಕೆರೆ, ಕೆದಿಂಜೆ ಮುಜಲೊಟ್ಟು ಕೆರೆ ಈ ಬಾರಿ ಬಹುಬೇಗನೆ ಬತ್ತಿ ಹೋಗಿದೆ. ಇನ್ನು ಉಳಿದಂತೆ ಖಾಸಗಿ ಜಮೀನಿನಲ್ಲಿರುವ ಕೆರೆಗಳು ಕೂಡ ಸರಿಯಾದ ನಿರ್ವಹಣೆ ಕಂಡಲ್ಲಿ ಇಡೀ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ದೊರಕುತ್ತದೆ.
ನಂದಳಿಕೆ ಗ್ರಾಮದ ಸುತ್ತಮುತ್ತ ಎಲ್ಲೂ ನದಿ ಮೂಲಗಳು ಇಲ್ಲದಿರುವುದರಿಂದ ಕೊಳವೆ ಬಾವಿ, ತೆರದ ಬಾವಿ ಹಾಗೂ ಕೆರೆಗಳಿಂದ ಮಾತ್ರ ನೀರಿನ ಸಮಸ್ಯೆ ನೀಗಿಸಬಹುದು. ಇಡೀ ಗ್ರಾಮದಲ್ಲಿನ ಸಮಗ್ರ ಕೆರೆಗಳ ನಿರ್ವಹಣೆ ಹಾಗೂ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳು ಹಾಗೂ ಖಾಸಗಿ ಮಾಲೀಕರು ಮತ್ತು ಇಲಾಖಾಧಿಕಾರಿಗಳು ಗಮನ ಹರಿಸಬೇಕಾಗಿದೆ.


ಸ್ವಲ್ಪ ಪ್ರಮಾಣದಲ್ಲಿ ಅಲ್ಲಲ್ಲಿ ನೀರಿನ ಸಮಸ್ಯೆ ಇದೆ. ಪಂಚಾಯಿತಿ ವತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಸ್ಥರಿಗೆ ನೀರು ಪೂರೈಕೆಯಾಗುವಂತೆ ಮಾಡಲಾಗುತ್ತಿದೆ. ಇತ್ತೀಚೆಗೆ ಮಾವಿನಕಟ್ಟೆಯಲ್ಲೂ ನೀರಿನ ಸಮಸ್ಯೆ ಎದುರಾದಾಗ 12 ದಿನ ಟ್ಯಾಂಕರ್ ಮೂಲಕ ನೀರನ್ನು ನೀಡಿದ್ದೇವೆ. ಈಗ ಅಲ್ಲಿನ ನೀರಿನ ಸಮಸ್ಯೆ ದೂರವಾಗಿದೆ.
| ಜಯಂತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ನಮಗೆ ಮಳೆಗಾಲ, ಬೇಸಿ ೆಕಾಲ ಎರಡೂ ಸಂದರ್ಭ ಎರಡು ದಿನಗಳಿಗೊಮ್ಮೆ ನೀರು ಬರುತ್ತದೆ. ಆದರೂ ಹೆಚ್ಚಾಗಿ ನೀರು ಪೂರೈಕೆಯಾಗುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಮಾತ್ರ ಕೆಲವೊಮ್ಮೆ ನೀರು ಬರುವುದು ಅಪರೂಪವಾಗುತ್ತದೆ. ರಾತ್ರಿ ಹೊತ್ತಿನಲ್ಲಿ ನೀರು ಬಂದ ನಿದರ್ಶನಗಳು ಸಾಕಷ್ಟಿವೆ.
| ಗಣೇಶ್ ದೇವಾಡಿಗ, ಗ್ರಾಮಸ್ಥ