ಕಂದಾವರಕ್ಕೆ ಕಾಡಲಿದೆ ನೀರು ಸಮಸ್ಯೆ

ಧನಂಜಯ ಗುರುಪುರ

ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದಿನ 15 ದಿಗಳ ಬಳಿಕ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಪ್ರಸಕ್ತ ಸುಡು ಬಿಸಿಲಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಒಂದೇ ಸಮನೆ ಅಂತರ್ಜಲ ಕುಸಿಯಲಾರಂಭಿಸಿದ್ದು, ಇಲ್ಲಿ ಕೊರೆಯಲಾಗಿರುವ ಬಹುತೇಕ ಎಲ್ಲ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

ಕಂದಾವರ ಗ್ರಾಪಂ ವ್ಯಾಪ್ತಿಯಲ್ಲಿ ಅದ್ಯಪಾಡಿ, ಕೊಳಂಬೆ ಗ್ರಾಮಗಳು ಒಳಗೊಂಡಿವೆ. ಗ್ರಾಮಕ್ಕೆ ಗುರುಪುರ ಫಲ್ಗುಣಿ ನದಿಯಿಂದ ಗಂಜಿಮಠ ಕೈಗಾರಿಕೋದ್ಯಮ ಪ್ರದೇಶಕ್ಕೆ ಪೂರೈಕೆಯಾಗುತ್ತಿರುವ ನೀರಿನ ಪೈಪ್‌ಲೈನ್‌ನಿಂದ ಒಂದು ಸಂಪರ್ಕ ಪಡೆಯಲಾಗಿದೆ. ಇದರಂತೆ, ಈ ಪೈಪ್‌ಲೈನ್‌ನಿಂದ ಗುರುಪುರ ಗ್ರಾಪಂ, ಗಂಜಿಮಠ ಮತ್ತು ಮೂಡುಪೆರಾರ ಗ್ರಾಪಂಗೆ ನೀರಿನ ಸಂಪರ್ಕ ಪಡೆಯಲಾಗಿದೆ. ಅಲ್ಲದೆ ಕಂದಾವರ ಗ್ರಾಪಂಗೆ ಮಳವೂರು ಕಿಂಡಿ ಅಣೆಕಟ್ಟಿನ ಪೈಪ್‌ಲೈನಿಂದಲೂ ಒಂದು ಸಂಪರ್ಕ ಪಡೆಯಲಾಗಿದೆ.

90 ಸಾವಿರ ಲೀಟರ್ ನೀರು ಪೂರೈಕೆ: ಗ್ರಾಮಕ್ಕೆ ಎರಡು ಕಡೆಯಿಂದ ನೀರಿನ ಸಂಪರ್ಕ ಪಡೆಯಲಾಗಿದ್ದರೂ, ಬೇಸಿಗೆಯಲ್ಲಿ ಎರಡೂ ಕಡೆಯ ಪೈಪ್‌ಲೈನ್‌ನಿಂದ ನೀರಿನ ಪೂರೈಕೆ ಕಡಿಮೆಯಾಗಿರುತ್ತದೆ. ಸದ್ಯ ಲಭ್ಯವಿರುವ ನೀರು ಸಮಾನವಾಗಿ ಹಂಚಲಾಗುತ್ತಿದೆ. ಮಳವೂರು ಡ್ಯಾಂನ ಪೈಪ್‌ಲೈನಿಂದ ಪ್ರತಿದಿನ ಗ್ರಾಮಕ್ಕೆ 1.5ಲಕ್ಷ ಲೀಟರ್ ಪೂರೈಸುವಂತೆ ಕೋರಿದ್ದೇವೆ. ಆದರೆ ಈಗ ಕೇವಲ 90 ಸಾವಿರ ಲೀಟರ್ ನೀರು ಪೂರೈಕೆಯಾಗುತ್ತಿದೆ. ನಿವಾಸಿ ಸೈಟುಗಳು ಹೆಚ್ಚಾದ ಕಾರಣ ನೀರಿನ ಬೇಡಿಕೆ ಹೆಚ್ಚಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರೂ ಇದುವರೆಗೆ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಬೇಸರ ವ್ಯಕ್ತಪಡಿಸಿದರು.

ಪಂಚಾಯಿತಿಯಲ್ಲಿ ಅನುದಾನವಿಲ್ಲ: ಮಳವೂರು ಅಣೆಕಟ್ಟಿನಿಂದ ಆರಂಭದಲ್ಲಿ ದಿನಕ್ಕೆ 75 ಸಾವಿರ ಲೀಟರ್ ನೀರು ಪೂರೈಕೆಯಾಗುತ್ತಿತ್ತು. ಇಲ್ಲಿ ಒಂದು ಕೊಳವೆಬಾವಿ ಕೊರೆಯಲು 1.80 ಲಕ್ಷ ರೂ.ಅಗತ್ಯವಿದೆ. ಇದರಲ್ಲಿ ಗ್ರಾಪಂಗೆ ಕೇವಲ 90 ಸಾವಿರ ರೂ.ಅನುದಾನ ಸಿಗುತ್ತದೆ. ಉಳಿದಂತೆ ವಿದ್ಯುತ್, ಪಂಪ್ ಹಾಗೂ ನಿರ್ವಹಣೆಗೆ ಪಂಚಾಯಿತಿಯೇ ಹಣ ಭರಿಸಬೇಕಾಗಿದೆ. ಪಂಚಾಯಿತಿಯಲ್ಲಿ ಅನುದಾನವಿಲ್ಲ. ಹೀಗಾಗಿ ಹೊಸ ಕೊಳವೆಬಾವಿ ಕೊರೆಯುವುದು ಕಷ್ಟ ಎಂದು ಹೇಳುತ್ತಾರೆ.

ಗಂಜಿಮಠಕ್ಕೆ ಪೂರೈಕೆಯಾಗುತ್ತಿರುವ ಕೊಳವೆಯಿಂದ ಈಗ ಪ್ರತಿನಿತ್ಯ ನೀರು ಪೂರೈಕೆಯಾಗುವುದಿಲ್ಲ. ಅವರಿಗೆ ನೀರು ಸಂಗ್ರಹವಾದ ಮೇಲೆ, ಉಳಿದವರಿಗೆ(ಗ್ರಾಪಂಗಳಿಗೆ) ನಾಲ್ಕೈದು ದಿನಕ್ಕೊಂದು ಬಾರಿ ನೀರು ಪೂರೈಸುತ್ತಾರೆ. ಪ್ರಶ್ನಿಸಿದರೆ ಗುರುಪುರದಲ್ಲಿ ಜಾಕ್ವೆಲ್ ದುರಸ್ತಿಯಾಗುತ್ತಿದೆ. ಈ ವಿಷಯ ಶಾಸಕರ ಗಮನಕ್ಕೂ ತರಲಾಗಿದೆ. ಕಳೆದ ಒಂದು ತಿಂಗಳಿಂದ ಇಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವ ಸ್ಥಳಗಳ ಪಟ್ಟಿ ಮಾಡಿಕೊಡುವಂತೆ ಜಿಲ್ಲಾಡಳಿತ ಕೇಳಿದೆ. ಪಟ್ಟಿ ನೀಡಲಾಗಿದೆ. ಇಲ್ಲಿ ಕಳೆದ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಪೂರೈಸಲಾಗಿದ್ದು, ಇದುವರೆಗೂ ಜಿಲ್ಲಾಡಳಿತದಿಂದ ನಯಾ ಪೈಸೆ ಬಂದಿಲ್ಲ. ಹಾಗಾಗಿ ಈ ಬಾರಿ ಟ್ಯಾಂಕರಿನವರು ನೀರು ಸರಬರಾಜಿಗೆ ಮುಂದೆ ಬರಲಾರರು.
| ವಿಜಯಾ ಜಿ.ಸುವರ್ಣ, ಕಂದಾವರ ಗ್ರಾಪಂ ಅಧ್ಯಕ್ಷೆ

ಹಿಂದೆ ಗ್ರಾಮದ ಕೌಡೂರು ಭಾಗದಲ್ಲಿ ಅರ್ಭಿಯ ನೀರಿನ ಒರತೆ ಇತ್ತು. ಕೆಲವು ವರ್ಷಗಳಿಂದ ಇಲ್ಲಿ ಮನೆಗಳು ಹೆಚ್ಚಾದಂತೆ, ಸಾಕಷ್ಟು ಕೊಳವೆಬಾವಿ ಕೊರೆಯಲಾಗಿದ್ದು, ಅರ್ಬಿ ನೀರು ನಿಂತು ಹೋಗಿದೆ. ಕೊಳವೆಬಾವಿಗಳಲ್ಲಿಯೂ ನೀರಿಲ್ಲ. ಬಾವಿಗಳು ತಳ ಹಿಡಿದಿವೆ. ಇನ್ನು 15 ದಿನದಲ್ಲಿ ಮಳೆಯಾಗದಿದ್ದರೆ ಮುಂದೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಗ್ಯಾರಂಟಿ.
| ಫ್ರಾನ್ಸಿಸ್, ಕೌಡೂರು ನಿವಾಸಿ