More

    160 ಹಳ್ಳಿಗಳಲ್ಲಿ ಜಲ ಸಮಸ್ಯೆ

    ಭೀಮಸಮುದ್ರ ರಂಗನಾಥ ಕಾನಹೊಸಹಳ್ಳಿ
    ಗುಡೇಕೋಟೆ ಮತ್ತು ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯ 22 ಕೆರೆಗಳ ಪೈಕಿ ಬಹುತೇಕ ಕೆರೆಗಳು ಬತ್ತಿ ಹೋಗಿದ್ದರಿಂದ 160 ಹಳ್ಳಿಗಳ ಪೈಕಿ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

    ಗುಡೇಕೋಟೆ ಹೋಬಳಿಯ 5 ಕೆರೆಗಳಲ್ಲಿ ಮಾತ್ರ ಸ್ವಲ್ಪ ನೀರು ಉಳಿದಿದ್ದು, ಬಹುತೇಕ ಕಡೆ ಅಂತರ್ಜಲ ಪ್ರಮಾಣ ಕಡಿಮೆಯಾಗಿದ್ದರಿಂದ ನೂರಾರು ಕೊಳೆವೆಬಾವಿ ಬತ್ತಿ ಹೋಗಿವೆ. ಹಳ್ಳ-ಕೊಳ್ಳಗಳು ಒಣಗಿದ್ದರಿಂದ ಬಹುತೇಕ ಗ್ರಾಮಗಳ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ಜನ ನೀರಿಗಾಗಿ ಹಪಹಪಿಸುತ್ತಿದ್ದರೆ, ದಾಹ ತಾಳದೆ ಮೂಕರೋದನೆ ಮಾಡುತ್ತಿರುವ ದನಗಳ ಗೋಳು ಕೇಳುವವರಿಲ್ಲದಂತಾಗಿದೆ.

    160 ಹಳ್ಳಿಗಳಲ್ಲಿ ಜಲ ಸಮಸ್ಯೆ
    ಗಂಡಬೊಮ್ಮಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದೆ.

    ಎರಡೂ ಹೊಬಳಿಗಳ ವ್ಯಾಪ್ತಿಯಲ್ಲಿ 20 ಗ್ರಾಪಂಗಳಿವೆ. ಕೊಳವೆಬಾವಿಗಳ ಮೂಲಕ ಹಳ್ಳಿಗಳಿಗೆ ನೀರು ಪೊರೈಕೆ ಮಾಡುವ ಜವಾಬ್ದಾರಿಯನ್ನು ಕುಡಿವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆ ಎಲ್ಲ ಗ್ರಾಪಂಗಳಿಗೆ ವಹಿಸಿದೆ. ಆದರೆ, ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯೆ ಮತ್ತು ಸರ್ಮಪಕ ವಿದ್ಯುತ್ ಪೂರೈಕೆಯ ಕೊರೆತೆಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಪೊರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

    ಅಂತರ್ಜಲ ಕುಸಿತದಿಂದಾಗಿ ಕೊಳವೆಬಾವಿಗಳು ಬತ್ತಿಹೋಗಿರುವ ಕಾರಣ ಹೊಸ ಕೊಳವೆಬಾವಿ ಕೊರೆಯಿಸಲು ಅನುಮತಿಯಿಲ್ಲ. ಆದ್ದರಿಂದ ಕೆಲವೊಂದು ಗ್ರಾಪಂಗಳು ಖಾಸಗಿ ಬೋರ್‌ವೇಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸುವ ಅನಿವಾರ್ಯತೆ ಇದೆ. ಆಲೂರು ಗ್ರಾಪಂ ವ್ಯಾಪ್ತಿಯ ಆಲೂರು, ಮಾಲೂರು, ಗೊಲ್ಲರಹಟ್ಟಿ, ಕಾನಾಮಡುಗು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಆದ್ದರಿಂದ 5 ವರ್ಷಗಳಿಂದ ಖಾಸಗಿ ಬೊರ್‌ವೇಲ್ ನೀರನ್ನೇ ಪೂರೈಸಲಾಗುತ್ತಿದೆ.

    ಎರಡೂ ಹೋಬಳಿಗಳ ವ್ಯಾಪ್ತಿಯ ಬಹುತೇಕ ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ, ಬಹುತೇಕ ಗ್ರಾಮಗಳಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ಘಟಕಗಳು ಸ್ಥಗಿತವಾಗಿವೆ. ಕೋಟಿಗಟ್ಟಲೇ ಖರ್ಚು ಮಾಡಿದ ಹಣ ಪ್ರಯೋಜನಕ್ಕೆ ಬಾರದಂತಾಗಿದೆ. ಉಳಿದಂತೆ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶವಿರುವ ಕಾರಣ ಪ್ರಾಣಜಲವೇ ವಿಷವಾಗಿದೆ. ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ್ದರೂ 4-5 ವರ್ಷಗಳಿಂದ ಕೆಟ್ಟುಹೋಗಿವೆ. ದುರಸ್ತಿ ಮಾಡಿಸದ ಕಾರಣ ಕುಡಿಯುವನೀರು ವಿಷಯುಕ್ತವಾಗಿದೆ.

    160 ಹಳ್ಳಿಗಳಲ್ಲಿ ಜಲ ಸಮಸ್ಯೆ
    ಪೂಜಾರಹಳ್ಳಿ ಗ್ರಾಮದ ಕೆರೆ ನೀರು ಬತ್ತಿ ಹೋಗಿದೆ.

    ಫ್ಲೋರೈಡ್ ಪ್ರಮಾಣ ಅಧಿಕ
    ಎಲ್ಲ ಹಳ್ಳಿಗಳ ಅಂತರ್ಜಲ ನೀರಲ್ಲಿ ಅಧಿಕ ಪ್ರಮಾಣದ ಫ್ಲೋರೈಡ್ ಇದೆ. ಹೊಸಹಟ್ಟಿ ನೀರಿನಲ್ಲಿ 3.98 ಪಿಪಿಎಂ, ಗೆದ್ದಲಗಟ್ಟೆ 3.91, ಅಡವಿಸೂರವ್ವನಹಳ್ಳಿ 3.96, ಕೆಂಚಮ್ಮನಹಳ್ಳಿ 3.91, ಟಿ.ಕಲ್ಲಹಳ್ಳಿ 3.79,ಮಾಳೆಹಳ್ಳಿ3.71, ಯರ‌್ರೋಬನಹಟ್ಟಿ3.39, ಅರ್ಜುನಚಿನ್ನನಹಳ್ಳಿ3.31, ಬಣವಿಕಲ್ಲು3.01, ನರಸಿಂಹಗಿರಿ3.13, ಕರಡಿಹಳ್ಳಿ 3.11, ಚಿಕ್ಕಕುಂಬಳಗುಂಟೆ 3.83, ಓಬಳಾಪುರ 3.08, ಜುಮ್ಮೋಬನಹಳ್ಳಿ 3.39, ಮಾಕನಡಕು 3.10ಪಿಪಿಎಂ ನಷ್ಟು ಫ್ಲೋರೈಡ್ ಅಂಶ ಇದೆ. ಇನ್ನುಳಿದ ಎಲ್ಲ ಹಳ್ಳಿಗಳಲ್ಲಿ ಸಿಗುವ ನೀರಿನಲ್ಲೂ ಪ್ಲೋರೈಡ್ ಅಂಶ ಸರಾಸರಿ 2 ಪಿಪಿಎಂ ನಷ್ಟಿದೆ ಎಂದು ವರದಿಯಲ್ಲಿದೆ. ಇಂತಹ ನೀರಿನ ಸೇವನೆಯಿಂದ ಬಹುತೇಕ ಹಳ್ಳಿಗಳ ಜನ ಒಂದಲ್ಲೊಂದು ರೋಗಗಳಿಂದ ಬಳಲುತ್ತಿದ್ದಾರೆ. ಬೇಸಿಗೆಯಲ್ಲಿ ಈ ಫ್ಲೋರೈಡ್ ನೀರು ಪಡೆಯಲೂ ಪರದಾಟಬೇಕಾದ ಪರಿಸ್ಥಿತಿ ಬಂದಿದೆ.

    ಸಮಸ್ಯೆ ಉಂಟಾಗುವ ಸಂಭವ ಅಧಿಕ
    ಕಾನಹೊಸಹಳ್ಳಿ ಹೋಬಳಿಯ ವ್ಯಾಪ್ತಿ ಮಾಕನಡುಕು ಗ್ರಾಪಂನ ಮಾಕನಡಕು, ಚಿಕ್ಕಜೋಗಿಹಳ್ಳಿ, ಜರ್ಮಲಿ ಗ್ರಾಪಂ ವ್ಯಾಪ್ತಿಯ ಜರ್ಮಲಿ, ಗೆದ್ದಲಗಟ್ಟೆ. ಬೆಳಗಟ್ಟೆ ಗ್ರಾಪಂ ವ್ಯಾಪ್ತಿಯ ಬೆಳಗಟ್ಟೆ, ಹುಲಿಕುಂಟೆ, ರಾಮದುರ್ಗ ಗ್ರಾಪಂ ವ್ಯಾಪ್ತಿಯ ಚಂದ್ರಶೇಖರಪುರ., ಗಂಡಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ರಾಮಸಾಗರಹಟ್ಟಿ, ಮಾರಮ್ಮನಹಳ್ಳಿ. ಗುಂಡುಮುಣುಗು ಗ್ರಾಪಂ ವ್ಯಾಪ್ತಿಯ ಗುಂಡುಮುಣುಗು, ಸಿದ್ದಾಪುರ, ವಡ್ಡರಹಟ್ಟಿ, ಕಡಾಕೊಳ್ಳ, ಜುಮ್ಮೋಬನಹಳ್ಳಿ ಗ್ರಾಪಂ ವ್ಯಾಪ್ತಿಯ ಜುಮ್ಮೋಬನಹಳ್ಳಿ, ಲೋಕಿಕೆರೆ, ಹುಡೇಂ ಗ್ರಾಪಂ ವ್ಯಾಪ್ತಿಯ ಹುಡೇಂ, ತಾಯಕನಹಳ್ಳಿ, ಪೂಜಾರಹಳ್ಳಿ ಗ್ರಾಪಂ ವ್ಯಾಪ್ತಿಯ ಪೂಜಾರಹಳ್ಳಿ, ಟಿ.ಕಲ್ಲಹಳ್ಳಿ ಹಾಗೂ ಆಲೂರು, ಕಾನಾಮಡುಗು, ಮಾಲೂರು ಪಿಚ್ಚಾರಹಟ್ಟಿ, ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಂಭವವಿದೆ ಎನ್ನಲಾಗಿದೆ.

    160 ಹಳ್ಳಿಗಳಲ್ಲಿ ಜಲ ಸಮಸ್ಯೆ
    ಭೀಮಸಮುದ್ರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸದರಿಯಾಗಿ ನಿಂತಿರುವ ಕೈಗಾಡಿ ಜತೆ ಖಾಲಿ ಕೊಡಗಳು.

    ಅಂರ್ಜಲ ವೃದ್ಧಿಗೆ ಕ್ರಮ
    ಶಾಸಕ ಎನ್.ವೈ.ಗೋಪಾಲಕೃಷ್ಣ ಮಾಡಿದ ಮುಂದಾಲೋಚನೆ ಕ್ರಮವಾಗಿ ಗುಡೇಕೋಟೆ, ಕಾನಹೊಸಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ 5 ವರ್ಷಗಳಲ್ಲಿ ತಿಪ್ಪೇಹಳ್ಳಿ, ಹುಡೇಂ, ತಾಯಕನಹಳ್ಳಿ, ಚಂದ್ರೇಖರಪುರ, ಭೀಮಸಮುದ್ರ, ಮಾಕನಡಕು, ಲಿಂಗನಹಳ್ಳಿ ತಾಂಡಾ, ಚೆಕ್ಕೆಮಂಡಿ, ಶಿಡ್ಲಹಳ್ಳ, ಹುರುಳಿಹಾಳ್, ಮಾರಮ್ಮನಹಳ್ಳಿ, ಗುಡೇಕೋಟ, ಯರ‌್ರೋಬನಹಟ್ಟಿ, ನಾಗರಹುಣಸೆ, ಶ್ರೀಕಂಠಾಪುರ, ಹುರುಡಿಹಳ್ಳಿ, ಅಪ್ಪೇನಹಳ್ಳಿ, ಅರ್ಜುನಚಿನ್ನಹಳ್ಳಿ, ಬೆಳ್ಳಗಟ್ಟೆ, ಚಿರತುಗುಂಡು ಕೋಟ್ಯಂತರ ವೆಚ್ಚದಲ್ಲಿ 40ಕ್ಕೂ ಹೆಚ್ಚು ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಅಲ್ಲದೆ ಚಿಕ್ಕಜೋಗಿಹಳ್ಳಿ ತಾಂಡಾದ ಬಳಿ 5.75 ಕೋಟಿ ರೂ. ವೆಚ್ಚದಲ್ಲಿ 2 ಹೊಸ ಕೆರೆಗಳನ್ನು ನಿರ್ಮಾಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ.

    12 ಬೋರ್‌ವೆಲ್‌ನಿಂದ ಸರಬರಾಜು
    ಕಾನಹೊಸಹಳ್ಳಿ ಪಟ್ಟಣದಲ್ಲಿ ಅಂದಾಜು 10 ಸಾವಿರ ಜನಸಂಖ್ಯೆ ಇದೆ. ಪಟ್ಟಣದಲ್ಲಿನ 15 ಕೊಳವೆಬಾವಿಗಳ ಪೈಕಿ 12ರ ಮೂಲಕ ಕುಡಿವ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆಸ್ಪತ್ರೆ ಮತ್ತು ಶಾಲೆಗೆ ಸಮಸ್ಯೆ ಬಾರದಂತೆ ಕ್ರಮವಹಿಸಿಲಾಗಿದೆ. ಪಟ್ಟಣದಲ್ಲಿ ಮೂರು ಶುದ್ಧ ಕುಡಿವನೀರಿನ ಘಟಕಗಳಿದ್ದರೂ ಚಾಲನೆ ಸಿಕ್ಕಿಲ್ಲ. ಆದ ಕಾರಣ ಸಾರ್ವಜನಿಕರು ಇಂದಿಗೂ ಅಶುದ್ಧ ಮತ್ತು ಫ್ಲೋರೈಡ್‌ಯುಕ್ತ ನೀರನ್ನೇ ಕುಡಯುವಂತಾಗಿದೆ.

    ಬಹುಗ್ರಾಮ ಕುಡಿವ ನೀರಿನ ಪೂರೈಕೆಯ ಕಾಮಗಾರಿ ಪ್ರಗತಿಯಲ್ಲಿದ್ದು ವರ್ಷ ಅಂತ್ಯಕ್ಕೆ ಪೂರ್ಣಗೊಳಲಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವುದುನ್ನು ತಪ್ಪಿಸಲು ಯೋಜನೆ ರೂಪಿಸಲಾಗಿದೆ. ತೀವ್ರ ಸಮಸ್ಯೆ ಉದ್ಭವಿಸದರೆ ಖಾಸಗಿ ಬೊರ್‌ವೇಲ್ ಖರೀದಿಸಿ ನೀರು ಪೂರೈಸಲಾಗುವುದು. ಅಲ್ಲದೆ, ಮುಂದಿನ 15 ದಿನಗಳ ಒಳಗೆ ದುರಸ್ತಿಗೆ ಬಂದಿರುವ ಶುದ್ಧ ನೀರಿನ ಘಟಕಗಳ ದುರಸ್ತಿ ಮಾಡಿಸಿ ಕುಡಿಯುವ ಯೋಗ್ಯ ನೀರಿನ ಪೂಕೈಕೆ ಕ್ರಮ ಕೈಗೊಳ್ಳಲಾಗುವುದು.
    ಬಿ.ಆರ್.ಪ್ರಸನ್ನ, ಕುಡಿವನೀರು ಮತ್ತು ನೈರ್ಮಲ್ಯೀಕರಣ ಇಲಾಖೆ ಎಇಇ, ಕೂಡ್ಲಿಗಿ

    ಅಂತರ್ಜಲ ಕುಸಿದಿದ್ದು ಸಹಜವಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುವುದು. ಬೇಸಿಗೆ ಮುಗಿಯುವರೆಗೂ ಸಮರ್ಪಕವಾಗಿ ನೀರು ಪೂರೈಸಲು ಸೂಕ್ತ ಮುಂಜಾಗೃತ ಕ್ರಮ ಕೈಗೊಳ್ಳವಂತೆ ಎಲ್ಲ ಇಒ, ಕುಡಿಯುವ ನೀರಿನ ಇಲಾಖೆ ಎಇಇ ಮತ್ತು ಎಲ್ಲ ಗ್ರಾಪಂ ಅಧಿಕಾರಿ ಸಭೆಯ ಮೂಲಕ ತಿಳಿಸಲಾಗಿದೆ.
    ಜಗದೀಶ್, ಕೂಡ್ಲಿಗಿ ತಹಸೀಲ್ದಾರ್

    ಆಲೂರು ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ 5 ವರ್ಷದಿಂದ ಇದೆ. ಎಲ್ಲ ಹಳ್ಳಿಗಳಲ್ಲಿರುವ ಕೊಳವೆಬಾವಿಗಳು ಬತ್ತಿಹೋಗಿವೆ. ಹೀಗಾಗಿ ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅದರೂ ವಿದ್ಯುತ್ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ನೀರು ಸಿಗುವುದಿಲ್ಲ. ಹೀಗಾಗಿ ಸಮರ್ಪಕವಾಗಿ ನೀರು ಪೂರೈಸಬೇಕು.
    ಕೆ.ಜಿ.ಬಸವರಾಜ್, ಕೆಂಚಮಲ್ಲನಹಳ್ಳಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts