107 ತಾಲೂಕುಗಳಲ್ಲಿ ತೀವ್ರ ಬರ: ನೀರಿನ ಕೊರತೆ ಸಮಸ್ಯೆ ಗಂಭೀರ

ರಾಜ್ಯದಲ್ಲಿ ಬೇಸಿಗೆ ಬೇಗೆಯ ಜತೆ ಬರವೂ ಕಾಡಲಾರಂಭಿಸಿದ್ದು 107 ತಾಲೂಕುಗಳಲ್ಲಿ ತೀವ್ರ ಬರ ಉಂಟಾಗಿದೆ. ಮತ್ತೊಂದೆಡೆ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆಯೂ ಕಾಣಿಸಿಕೊಂಡಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ಜನಜೀವನ ಬಿಗಡಾಯಿಸಲಿದೆ.

| ಶಿವಾನಂದ ತಗಡೂರು, ಬೆಂಗಳೂರು

107 ತಾಲೂಕುಗಳು ತೀವ್ರ ಬರದಲ್ಲಿರುವುದಲ್ಲದೆ 49 ತಾಲೂಕುಗಳು ಪಾರ್ಶ್ವ ಬರದಲ್ಲಿದ್ದು, ಅಂತರ್ಜಲ ಸಮಸ್ಯೆ ತೀವ್ರಗೊಳ್ಳಬಹುದೆಂಬ ಆತಂಕವಿದೆ. ಮಳೆ ನೀರನ್ನು ಭೂಮಿಯಲ್ಲಿ ಇಂಗಿಸುವುದೊಂದೇ ನೀರಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎನ್ನುವುದನ್ನು ಮನಗಂಡ ಸರ್ಕಾರ, ಜಲ ಸಾಕ್ಷರತಾ ಆಂದೋಲನ ನಡೆಸಲು ಪ್ರಯತ್ನಿಸಿದೆ. ಸಾಕ್ಷರತಾ ಆಂದೋಲನದ ರೀತಿಯಲ್ಲೇ ಗ್ರಾಮೀಣಾಭಿವೃದ್ಧಿ ಇಲಾಖೆ

ಮೂಲಕ ಜಲ ಸಾಕ್ಷರತಾ ಆಂದೋಲನ ಪ್ರಾರಂಭಿಸುವ ಯೋಜನೆ ರೂಪಿಸಲಾಗುತ್ತಿದೆ. ಕೆರೆ- ಕಟ್ಟೆಗಳ ನಿರ್ವಣ, ಹೂಳು ತೆಗೆಯುವಿಕೆ, ನಾಲಾ ಬಂಡ್, ತಡೆಗೋಡೆ, ಗಲ್ಲಿಪ್ಲಗ್ ಮುಂತಾದ ಅಂತರ್ಜಲ ಕೃತಕ ಮರು ಪೂರೈಕೆ ರಚನೆಗಳನ್ನು ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

ನದಿ ಪಾತ್ರದಲ್ಲೂ ನೀರಿಲ್ಲ: ನದಿಪಾತ್ರಗಳಲ್ಲೂ ನೀರು ಇಲ್ಲವಾಗಿದ್ದು, ನದಿಗಳಿಗೂ ಚೆಕ್ ಡ್ಯಾಂ ನಿರ್ವಿುಸಲು ಚಿಂತಿಸಲಾಗುತ್ತಿದೆ. ನದಿ ಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಚೆಕ್ ಡ್ಯಾಂ, ಪಿಕಪ್, ಬಾಂದಾರ ಮತ್ತು ಬ್ರಿಡ್ಜ್ ಕಂ ಬಾಂದಾರ ಕಾಮಗಾರಿ ಕೈಗೆತ್ತಿಕೊಳ್ಳಲು ಹೆಚ್ಚುವರಿ ಅನುದಾನ ನೀಡಲು ಉದ್ದೇಶಿಸಲಾಗಿದೆ.

ಜಲಾಶಯಗಳು ಖಾಲಿ: ಕಾವೇರಿ ಮತ್ತು ಕೃಷ್ಣ ಕಣಿವೆಯ ಜಲಾಶಯಗಳು ನೀರಿಲ್ಲದೆ ಬಣಗುಟ್ಟುತ್ತಿವೆ. ಕೆಆರ್​ಎಸ್ ಜಲಾಶಯದಲ್ಲಿ ಬೇಸಿಗೆ ನಿಭಾಯಿಸಲು 11 ಟಿಎಂಸಿ ನೀರಿದೆ. ಇನ್ನು ಹಾರಂಗಿಯಲ್ಲಿ 1.5, ಹೇಮಾವತಿಯಲ್ಲಿ 4.91 ಮತ್ತು ಕಬಿನಿಯಲ್ಲಿ 7 ಟಿಎಂಸಿ ನೀರು ಸಂಗ್ರಹವಿದೆ. ಇರುವ ನೀರಿನಲ್ಲೇ ಬೇಸಿಗೆ ನಿಭಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ತುಂಗಾಭದ್ರ ಜಲಾಶಯದಲ್ಲಿ 3.022 ಟಿಎಂಸಿ ಮಾತ್ರವೇ ನೀರಿದ್ದು, ಕುಡಿಯುವ ನೀರಿಗೂ ಕಷ್ಟವಾಗಿದೆ. ಘಟಪ್ರಭದಲ್ಲಿ 6, ಮಲಪ್ರಭದಲ್ಲಿ 5 ಟಿಎಂಸಿ ನೀರಿದೆ. 123 ಟಿಎಂಸಿ ಸಾಮರ್ಥ್ಯದ ಆಲಮಟ್ಟಿಯಲ್ಲಿ 26, ಭದ್ರದಲ್ಲಿ 20, ನಾರಾಯಣಪುರದಲ್ಲಿ 14 ಟಿಎಂಸಿ ನೀರು ಸಂಗ್ರಹವಿದೆ. ಈಗಿರುವ ನೀರಿನಲ್ಲಿ ನಾಲೆಗಳಿಗೆ ಮತ್ತು ನದಿ ಪಾತ್ರಗಳಿಗೆ ನೀರು ಕೊಡುವುದು ಕಷ್ಟ. ಕೃಷ್ಣ ಕಣಿವೆಯಲ್ಲೂ ನೀರಿನ ಬರ ತಾಂಡವವಾಡುತ್ತಿದೆ.

ಕೆರೆ-ಕಟ್ಟೆ, ಬಾವಿಗಳನ್ನು ಪುನರುಜ್ಜೀವನಗೊಳಿಸಲು ಹೂಳೆತ್ತಿಸುವುದು, ಮಳೆ ನೀರನ್ನು ಭೂಮಿಯಲ್ಲಿ ಇಂಗಿಸುವುದು ಪರಿಹಾರ ಮಾರ್ಗ. ಈ ನಿಟ್ಟಿನಲ್ಲಿ ಜಲಸಾಕ್ಷರತಾ ಕಾರ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ.

| ಎಲ್.ಕೆ.ಅತೀಕ್ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ.

ಅಂತರ್ಜಲ ಪಾತಾಳಕ್ಕೆ

ಸತತ ಬರದಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಇಳಿದಿದ್ದು, ಎಲ್ಲೆಡೆಯೂ ಸಮಸ್ಯೆ ಉಲ್ಬಣಿಸಿದೆ. ಅಂತರ್ಜಲ ಮಟ್ಟ ಇನ್ನೂ ಪಾತಾಳಕ್ಕೆ ಕುಸಿದರೆ ಫ್ಲೋರೈಡ್ ಸೇರಿ ಹತ್ತು ಹಲವು ಸಮಸ್ಯೆ ಎದುರಾಗಲಿದ್ದು, ಪರಿಸ್ಥಿತಿ ಇನ್ನೂ ಗಂಭೀರವಾಗಲಿದೆ. ಬೋರ್​ವೆಲ್​ಗಳನ್ನು ಕೊರೆಸುವುದಕ್ಕೆ ಸರ್ಕಾರ ನಿರ್ಬಂಧ ವಿಧಿಸಿದ್ದರೂ, ಅದು ಕಡತದಲ್ಲಷ್ಟೇ ಇದೆ. ಸರ್ಕಾರದ ಆದೇಶ ಪಾಲಿಸಲು ಜಿಲ್ಲಾಡಳಿತಗಳೇ ಮೀನ-ಮೇಷ ಎಣಿಸುತ್ತಿವೆ.

ಬೋರ್​ವೆಲ್​ಗಾಗಿ ಸಾಹಸ

ನೀರಿಗಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಜನರು ಮತ್ತೆ ಮತ್ತೆ ಬೋರ್​ವೆಲ್ ಕೊರೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. 30 ತಾಲೂಕಿನಲ್ಲಿ ಬೋರ್​ವೆಲ್ ಕೊರೆಸುವುದುನ್ನು ನಿಷೇಧಿಸಿದ್ದರೂ ಪ್ರಯೋಜನವಾಗಿಲ್ಲ. ಒಂದು ಬೋರ್​ವೆಲ್ ಬಾವಿಯಲ್ಲಿ ನೀರು ವಿಫಲವಾಗುತ್ತಿದ್ದಂತೆ ಮತ್ತೊಂದು ಕೊಳವೆ ಬಾವಿ ಕೊರೆಸಿ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಕುಡಿಯುವ ನೀರು ಪೂರೈಸಲು ಸರ್ಕಾರವೂ ಬೋರ್​ವೆಲ್ ಕೊರೆಸುತ್ತಲೇ ಇದೆ.

ತಾತ್ಕಾಲಿಕ ಗೋಶಾಲೆ

ಬೆಂಗಳೂರು: ಬರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಟ್ಟು 21 ತಾತ್ಕಾಲಿಕ ಗೋಶಾಲೆಗಳನ್ನು ತೆರೆಯಲಾಗಿದ್ದು, 14,816 ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ ಎಂದು ಸರ್ಕಾರ ಮಂಗಳವಾರ ಹೈಕೋರ್ಟ್​ಗೆ ಮಾಹಿತಿ ನಿಡಿದೆ.

ರಾಜ್ಯ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುಜಾತಾ ಹಾಗೂ ನ್ಯಾ.ಎಸ್.ಜಿ. ಪಂಡಿತ್ ಅವರಿದ್ದ ರಜಾಕಾಲದ ಪೀಠಕ್ಕೆ ಸರ್ಕಾರ ಈ ಕುರಿತು ವರದಿ ಸಲ್ಲಿಸಿದೆ.

21 ಗೋಶಾಲೆ, 183 ಮೇವು ಬ್ಯಾಂಕ್: ಮೇವು ಕೊರತೆ ಹೆಚ್ಚಾಗಿರುವ ಪ್ರದೇಶದಲ್ಲಿ ತಾತ್ಕಾಲಿಕ ಗೋಶಾಲೆ ಆರಂಭಿಸಲಾಗಿದ್ದು, ಈ ಕುರಿತು ಸ್ಥಳೀಯ ಮಟ್ಟದಲ್ಲಿ ಜಿಲ್ಲಾಡಳಿತ ವ್ಯಾಪಕ ಪ್ರಚಾರ ನೀಡಿದೆ. ಗೋಶಾಲೆಯಲ್ಲಿರುವ ಜಾನುವಾರು ಸಂಖ್ಯೆಗಳಿಗೆ ಅನುಗುಣವಾಗಿ ಉಚಿತವಾಗಿ ಕುಡಿಯುವ ನೀರು ಮತ್ತು ಮೇವು ಒದಗಿಸಲಾಗುತ್ತದೆ. 2019ರ ಮೇ 17ರವರೆಗೆ ಒಟ್ಟು 21 ತಾತ್ಕಾಲಿಕ ಗೋಶಾಲೆ ಆರಂಭಿಸಿದ್ದು, 14,816 ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಗೋಶಾಲೆಗಳಲ್ಲಿ 897.34 ಟನ್ ಮೇವು ದಾಸ್ತಾನು ಮಾಡಲಾಗಿದ್ದು, ಈಗಾಗಲೇ 306.03 ಟನ್ ಮೇವು ಪೂರೈಸಲಾಗಿದೆ. ಮೇವಿನ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತ ನಿತ್ಯ ಮೇಲ್ವಿಚಾರಣೆ ನಡೆಸುತ್ತಿದೆ. ಗೋಶಾಲೆಗಳಿರುವ ಜಾನುವಾರುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಲಾಗಿದೆ. 2019ರ ಮಾರ್ಚ್ 1ರವರಗೆ ರಾಜ್ಯದಲ್ಲಿ 20 ಮೇವು ಬ್ಯಾಂಕ್​ಗಳಿದ್ದವು. ಬರದ ಹಿನ್ನೆಲೆಯಲ್ಲಿ ಅದನ್ನು 183ಕ್ಕೆ ಹೆಚ್ಚಿಸಲಾಗಿದೆ. ಅದರಲ್ಲಿ 9,270.02 ಟನ್ ಮೇವು ದಾಸ್ತಾನು ಮಾಡಲಾಗಿದ್ದು, 6,879.92 ಟನ್ ಮೇವನ್ನು ಈಗಾಗಲೇ ಅಗತ್ಯವಿರುವ ರೈತರಿಗೆ ಸಬ್ಸಿಡಿ ದರದಲ್ಲಿ ಪ್ರತಿ ಕೆ.ಜಿ.ಗೆ 2 ರೂ. ನಂತೆ ವಿತರಿಸಲಾಗಿದೆ. ಅಗತ್ಯವಿದ್ದರೆ ಮತ್ತಷ್ಟು ಮೇವು ಬ್ಯಾಂಕ್ ಆರಂಭಿಸಲಾಗುವುದು ಎಂದು ವರದಿಯಲ್ಲಿ ವಿವರಿಸಲಾಗಿದೆ. ವರದಿ ದಾಖಲಿಸಿ ಕೊಂಡ ನ್ಯಾಯಪೀಠ, ಅದನ್ನು ಪರಿಶೀಲಿಸಿ ಉತ್ತರಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ಮೇ 29ಕ್ಕೆ ವಿಚಾರಣೆ ಮುಂದೂಡಿತು.

ನೀರು-ಮೇವು ಕೊರತೆ ನೀಗಿಸಿ

ಬೆಂಗಳೂರು: ರಾಜ್ಯದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು-ಮೇವು ಕೊರತೆ ನೀಗಿಸುವುದರ ಜತೆಗೆ ಕಳೆದ ಮುಂಗಾರಲ್ಲಿ ಬೆಳೆ ನಷ್ಟ ಪರಿಹಾರ ಪಾವತಿಸುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸೂಚನೆ ನೀಡಿದ್ದಾರೆ. ರಾಜ್ಯದ ಮಳೆ-ಬೆಳೆ, ಬರ ಪರಿಸ್ಥಿತಿ ಬಗ್ಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿದ ಅವರು ಈ ಮಾಹಿತಿ ನೀಡಿದ್ದಾರೆ. ಹೊಸ ಬೋರ್​ವೆಲ್ ಬದಲು ಖಾಸಗಿ ಬೋರ್​ವೆಲ್ ಬಾಡಿಗೆ ಪಡೆಯಲು, ಮೇವು ಬ್ಯಾಂಕ್ ತೆರೆಯಬೇಕು. ಹಸಿರು ಮೇವು ಖರೀದಿ ದರ ಪ್ರತಿ ಟನ್​ಗೆ 3 ಸಾವಿರಕ್ಕೆ ಹೆಚ್ಚಿಸಲಾಗಿದೆ. ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಕುರಿ-ಮೇಕೆಗಳಿಗೆ ಜಂತುನಾಶಕ ಮತ್ತು ಲವಣ ಮಿಶ್ರಣ ಔಷಧ ಖರೀದಿಗಾಗಿ 5 ಕೋಟಿ, ವಿಜಯಪುರ ಜಿಲ್ಲೆಗೆ ತುರ್ತು ಬರ ಪರಿಹಾರಕ್ಕೆ ಎಸ್​ಡಿಆರ್​ಎಫ್ ನಿಧಿಯಿಂದ 10 ಕೋಟಿ ಹಾಗೂ ಬಾಗಲಕೋಟೆಯ ಬ್ಯಾರೇಜ್ ಗೇಟ್ ನಿರ್ವಹಣೆಗೆ ಸಣ್ಣ ನೀರಾವರಿ ಇಲಾಖೆಯಿಂದ -ಠಿ;15 ಲಕ್ಷ ನೀಡಲು ನಿರ್ಧರಿಸಲಾಗಿದೆ ಎಂದರು.

ತಹಸೀಲ್ದಾರರಿಗೆ ಅಧಿಕಾರ

ಬೆಳೆ ಹಾನಿ ಹೊಂದಿದ ಜಮೀನಿನ ರೈತರು ಮರಣ ಹೊಂದಿದ್ದಲ್ಲಿ, ಫಲಾನುಭವಿ ರೈತರ ಸಕ್ಷಮ ವಾರಸು ದಾರರಿಗೆ ಇನ್​ಪುಟ್ ಸಬ್ಸಿಡಿ ವಿತರಿಸಲು ಸಂಬಂಧಪಟ್ಟ ತಹಸೀಲ್ದಾರರಿಗೆ ಅಧಿಕಾರ ನೀಡಲಾಗಿದೆ ಎಂದರು.

Leave a Reply

Your email address will not be published. Required fields are marked *