ನೀರು ಕೊರತೆ ನಡುವೆಯೇ ಕಾಲೇಜು ಆರಂಭ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನೀರಿನ ಕೊರತೆಯ ನಡುವೆಯೇ ನಿಗದಿಯಂತೆ ಸೋಮವಾರ ಪದವಿಪೂರ್ವ ಕಾಲೇಜುಗಳು ಪುನರಾರಂಭಗೊಂಡವು.
ದ.ಕ. ಜಿಲ್ಲೆಯಲ್ಲಿ ಸರ್ಕಾರಿ ಪಿಯು ಕಾಲೇಜುಗಳೆಲ್ಲವೂ ಪುನರಾರಂಭಗೊಂಡರೂ ಕೆಲವು ಖಾಸಗಿ ಕಾಲೇಜುಗಳು ಮಾತ್ರ ನೀರಿನ ಬವಣೆ ಹಿನ್ನೆಲೆಯಲ್ಲಿ ಬೇಸಿಗೆ ರಜೆಯನ್ನು ವಿಸ್ತರಣೆ ಮಾಡಿವೆ.
ಮಂಗಳೂರಿನಲ್ಲಿ ಅಲೋಶಿಯಸ್ ಪಿಯು ಕಾಲೇಜು ಹಾಗೂ ಶಾರದಾ ಪಿಯು ಕಾಲೇಜಿನ ಆಡಳಿತ ತರಗತಿ ಪುನರಾರಂಭದ ದಿನವನ್ನು ಇನ್ನೊಂದು ವಾರ ಕಾಲ ಮುಂದೂಡಿವೆ. ಅಲೋಶಿಯಸ್ ಪಿಯು ಕಾಲೇಜು ಆರಂಭದ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ.
ಶಾರದಾ ಪಿಯು ಕಾಲೇಜು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಕಳೆದ ವಾರದವರೆಗೆ ರಜಾ ಕಾಲದ ತರಗತಿ ನಡೆಸಿದೆ. ದ್ವಿತೀಯ ಪಿಯುಸಿಗೆ ಮೇ 27ರವರೆಗೆ ರಜೆ ವಿಸ್ತರಿಸಿದೆ. ಪ್ರಥಮ ಪಿಯುಸಿ ತರಗತಿಗಳು ಮೇ 28ರಂದು ಆರಂಭಗೊಳ್ಳಲಿದೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.
ದ.ಕ.ಜಿಲ್ಲೆಯಲ್ಲಿ ಪಿಯುಸಿ ತರಗತಿಗಳು ಪುನರಾರಂಭಗೊಂಡಿವೆ. ಇಲ್ಲಿ ಯಾವುದೇ ಗೊಂದಲಗಳು ಇಲ್ಲ. ಕೆಲವು ಕಾಲೇಜುಗಳು ಪುನಾರಂಭಗೊಂಡಿಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಎಲ್ಲ ಸರ್ಕಾರಿ ಪಿಯು ಕಾಲೇಜುಗಳ ತರಗತಿ ಆರಂಭವಾಗಿದೆ ಎಂದು ಡಿಡಿಪಿಯು ಕುಶರಾವತಿ ತಿಳಿಸಿದ್ದಾರೆ.

ಬೆಳಗ್ಗೆ ಮಾತ್ರ ತರಗತಿ:  ಉಡುಪಿ: ನೀರಿನ ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ಸೋಮವಾರ ಕೆಲವು ಕಾಲೇಜುಗಳು ಬೆಳಗ್ಗಿನ ತರಗತಿ ಮಾತ್ರ ನಡೆಸಿವೆ. ನಗರದ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿಯೂ ನೀರಿನ ಸಮಸ್ಯೆಯಿಂದಾಗಿ ಬೆಳಗ್ಗಿನ ತರಗತಿಗಳನ್ನು ಮಾತ್ರ ನಡೆಸಲಾಗಿದೆ. ಕಾಲೇಜಿಗೆ ರಜೆ ನೀಡಿಲ್ಲ, ಬೆಳಗ್ಗಿನ ತರಗತಿ ನಡೆಸಿ ವಿದ್ಯಾರ್ಥಿಗಳನ್ನು ಕಳುಹಿಸಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಕೆಲವು ಕಾಲೇಜುಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಪರ್ಯಾಯ ವ್ಯವಸ್ಥೆ ಮಾಡಿಕೊಂಡು, ಸುಧಾರಿಸುವಂತೆ ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಯಾವ ಕಾಲೇಜಿಗೂ ರಜೆ ನೀಡಿಲ್ಲ. ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುಬ್ರಹ್ಮಣ್ಯ ಜೋಷಿ ವಿಜಯವಾಣಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *