ಬಂಟ್ವಾಳ ಜನರಿಗೆ ಅಶುದ್ಧ ನೀರು?

ಸಂದೀಪ್ ಸಾಲ್ಯಾನ್ ಬಂಟ್ವಾಳ
ಜಕ್ರಿಬೆಟ್ಟು ಬಳಿ ನೇತ್ರಾವತಿ ನದಿಯಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದನ್ನು ಪ್ರತಿದಿನ ಕಾಣಬಹುದು. ಇದೇ ಸನ್ನಿವೇಶ ನದಿಯುದ್ದಕ್ಕೂ ಇದೆ. ಈಗಂತೂ ನೀರಿನ ಹರಿವೇ ನಿಂತಿದೆ. ಬ್ಯಾಕ್ಟೀರಿಯಾ, ವೈರಸ್ ಮೊದಲಾದ ಸೂಕ್ಷ್ಮಾಣು ಜೀವಿಗಳನ್ನು ಹೊಂದಿರುವ ಈ ನೀರು ಶುದ್ಧವಲ್ಲ ಎನ್ನುವುದು ಸ್ಪಟಿಕದಷ್ಟೇ ಸ್ಪಷ್ಟ. ಇಂಥ ಅರೆಬರೆ ಶುದ್ಧಗೊಳಿಸಿದ ನೀರನ್ನು ಬಂಟ್ವಾಳ ಪುರಸಭೆ ತನ್ನ ವ್ಯಾಪ್ತಿಯ ನಾಗರಿಕರಿಗೆ ನೀಡುತ್ತಿದೆಯೇ?
ಹೌದೆನ್ನುತ್ತವೆ ಮೂಲಗಳು. ನೇತ್ರಾವತಿ ನದಿಯಿಂದ ಜಕ್ರಿಬೆಟ್ಟು ಶುದ್ಧೀಕರಣ ಘಟಕಕ್ಕೆ ಬರುವ ನೀರು ಸಮರ್ಪಕವಾಗಿ ಸಂಸ್ಕರಣೆಯಾಗದೆ ಕೇವಲ ಬ್ಲೀಚಿಂಗ್ ಪೌಡರ್ ಹಾಕಿ ತಿಳಿಗೊಳಿಸಲ್ಪಟ್ಟು ಪೂರೈಕೆಯಾಗುತ್ತಿದೆ. ಅಗತ್ಯವಾಗಿ ಬಳಸಬೇಕಾಗಿರುವ ಕ್ಲೋರಿನ್ ಅನಿಲ ರಹಿತವಾಗಿ ನೀರು ಮನೆಮನೆ ಸೇರುತ್ತಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ.
ಕ್ಲೋರಿನ್ ಗ್ಯಾಸ್ ಮುಗಿದು ಹಲವು ತಿಂಗಳು ಕಳೆದಿದೆ. ಈಗ ಸರಬರಾಜಾಗುವ ನೀರು ಶುದ್ಧ ಎಂದು ಪುರಸಭೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸ್ಥಳೀಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಕ್ಲೋರಿನ್ ಅನಿಲ ಬಳಸದೆ ಪೂರೈಕೆಯಾಗುವ ನೀರು ಅರ್ಧ ಶುದ್ಧೀಕರಣಗೊಂಡ ನೀರು ಎಂದು ಪ್ರಯೋಗಾಲಯ ತಜ್ಞರು ಅಭಿಪ್ರಾಯಪಡುತ್ತಾರೆ.

ಇಲಾಖೆಗಳ ಹಗ್ಗಜಗ್ಗಾಟ: 52.79 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಜಕ್ರಿಬೆಟ್ಟು ಬಳಿ ನೇತ್ರಾವತಿ ನದಿಯಲ್ಲಿ ಜಾಕ್‌ವೆಲ್ ನಿರ್ಮಿಸಲಾಗಿದೆ. ಅಲ್ಲಿಂದ ಲಿಫ್ಟ್ ಆದ ನೀರನ್ನು 24.16 ಎಂಎಲ್‌ಡಿ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕದಲ್ಲಿ ಐದು ಹಂತಗಳಲ್ಲಿ ಶುದ್ಧ ಮಾಡಿ ಜನರಿಗೆ ಸರಬರಾಜು ಮಾಡಬೇಕು.
ಆರಂಭದಿಂದಲೂ ಯೋಜನೆ ಅನುಷ್ಠಾನಗೊಳಿಸಿದ ನಗರ ನೀರು ಸರಬರಾಜು ಮಂಡಳಿ ಮತ್ತು ಪುರಸಭೆ ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಯೋಜನೆ ಇನ್ನೂ ಹಸ್ತಾಂತರವಾಗಿಲ್ಲ ಎಂಬುದು ಪುರಸಭೆ ವಾದವಾದರೆ, ನೀರು ಶುದ್ಧೀಕರಣಕ್ಕೆ ಬೇಕಾದ ಮೂಲ ವ್ಯವಸ್ಥೆಗಳನ್ನು ಕಲ್ಪಿಸುವುದು ಪುರಸಭೆಯ ಕರ್ತವ್ಯ ಎನ್ನುವುದು ಮಂಡಳಿ ವಾದ. ಈ ಹಗ್ಗಜಗ್ಗಾಟದಿಂದ ಜಲ ಶುದ್ಧೀಕರಣಕ್ಕೆ ಕ್ಲೋರಿನ್ ಅನಿಲ ಪೂರೈಕೆಯಾಗುತ್ತಿಲ್ಲ.

ಕ್ಲೋರಿನ್ ಗ್ಯಾಸ್ ಬಳಕೆ ಕಡ್ಡಾಯ: ನೀರು ಶುದ್ಧೀಕರಣದ ಪೂರ್ವದಲ್ಲಿ ಮಣ್ಣಿನ ಅಂಶ ನೋಡಿಕೊಂಡು ಅದಕ್ಕೆ ತಕ್ಕಂತೆ ಸ್ಪಟಿಕವನ್ನು ಸೇರಿಸಿಕೊಂಡು ಕ್ಲೋರಿನೇಶನ್ ಮಾಡಲಾಗುತ್ತದೆ. ನೀರು ಶುದ್ಧೀಕರಣದ ನಂತರ ಗ್ರಾಹಕರಿಗೆ ಪೂರೈಸುವ ಸಂದರ್ಭದಲ್ಲೂ ಮತ್ತೊಂದು ಹಂತದ ಕ್ಲೋರಿನೇಶನ್ ಮಾಡಲಾಗುತ್ತದೆ. ನೀರಿನ ಬ್ಯಾಕ್ಟಿರಿಯಾಗಳನ್ನು ತೆಗೆದು ಹಾಕಲು ಇದು ಸಹಕಾರಿ. ನೀರು ಶುದ್ಧೀಕರಣಗೊಂಡು ಗ್ರಾಹಕರಿಗೆ ತಲುಪಿದಾಗ ನೀರಿನಲ್ಲಿ 0.2 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಕ್ಲೋರಿನ್ ಅಂಶ ಇರಲೇಬೇಕೆಂಬುದು ಪಬ್ಲಿಕ್ ಹೆಲ್ತ್ ಪ್ಯಾನಲ್ ಮಾನದಂಡ. ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ ಸಿಲಿಂಡರ್ ಮಾದರಿಯಲ್ಲಿ 100 ಕೆ.ಜಿ.ಯ ಕ್ಲೋರಿನೇಶನ್ ಗ್ಯಾಸ್‌ಗಳಿರುತ್ತವೆ. ಅವುಗಳು ಖಾಲಿಯಾಗದಂತೆ ನೀರು ಪೂರೈಕೆ ನಿರ್ವಹಿಸಬೇಕು. ನೀರಿನಲ್ಲಿನ ಬ್ಯಾಕ್ಟಿರಿಯಾಗಳನ್ನು ಕೊಲ್ಲಲು ಕ್ಲೋರಿನೇಶನ್ ಇರಲೇಬೇಕೆಂದು ಬೆಂಗಳೂರು ಜಲಮಂಡಳಿ ತಜ್ಞರ ಅಭಿಪ್ರಾಯ.

ತಿಳಿ ನೀರು ಶುದ್ಧವಲ್ಲ!: ಜಾಕ್‌ವೆಲ್‌ನಿಂದ ಮೇಲೆತ್ತಲ್ಪಟ್ಟ ನೀರು ಶುದ್ಧೀಕರಣ ಘಟಕದಲ್ಲಿ ಐದು ಹಂತಗಳಲ್ಲಿ ಶುದ್ಧೀಕರಣಗೊಳ್ಳಬೇಕು. ಸದ್ಯಕ್ಕೆ ಇಲ್ಲಿ ಬ್ಲೀಚಿಂಗ್ ಪೌಡರ್ ಮತ್ತು ಪಿಎಸಿ ಪೌಡರ್‌ಗಳನ್ನು ಹಾಕಿ ವಿವಿಧ ಹಂತಗಳಲ್ಲಿ ನೀರು ಸಂಸ್ಕರಣೆ ಮಾಡಲಾಗುತ್ತಿದೆ. ತಜ್ಞರ ಪ್ರಕಾರ ಈ ರೀತಿ ಮಾಡುವುದರಿಂದ ಶೇ.50 ಮಾತ್ರ ಶುದ್ಧವಾಗುವುದು. ಇದರಿಂದ ನೀರು ತಿಳಿಗೊಳ್ಳುತ್ತದೆಯೇ ಹೊರತು ಶುದ್ಧೀಕರಣಗೊಳ್ಳುವುದಿಲ್ಲ. ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಬೇಕಾದರೆ ಕ್ಲೋರಿನ್ ಅನಿಲ ಬಳಸಲೇಬೇಕು.

ಜಕ್ರಿಬೆಟ್ಟುವಿನಲ್ಲಿ ನೇರವಾಗಿ ನದಿಯಿಂದ ನೀರು ಮೇಲೆತ್ತಲಾಗುತ್ತಿಲ್ಲ. ಬದಲಿಗೆ ನದಿಯಲ್ಲಿರುವ ಎರಡು ಬಾವಿಗಳಿಂದ ಜಾಕ್‌ವೆಲ್‌ಗೆ ನೀರು ಸರಬರಾಜು ಮಾಡಿ ಬಳಿಕ ಶುದ್ಧೀಕರಣ ಘಟಕದಲ್ಲಿ ಶುದ್ಧ ಮಾಡಲಾಗುತ್ತದೆ. ಕ್ಲೋರಿನ್ ಬದಲು ಬ್ಲೀಚಿಂಗ್ ಪೌಡರ್ ಮತ್ತು ಪಿಎಸಿ ಬಳಸಲಾಗುತ್ತಿದೆ. ಈ ನೀರನ್ನು ಪರೀಕ್ಷೆ ನಡೆಸಿದಾಗ ಕುಡಿಯಲು ಯೋಗ್ಯ ಎಂಬ ವರದಿ ಬಂದಿದೆ.
– ಡೊಮಿನಿಕ್ ಡಿಮೆಲ್ಲೊ, ಕಿರಿಯ ಇಂಜಿನಿಯರ್, ಬಂಟ್ವಾಳ ಪುರಸಭೆ

ಕ್ಲೋರಿನ್ ಅನಿಲ ಇಲ್ಲದೆ ಇದ್ದರೂ ಬ್ಲೀಚಿಂಗ್ ಪೌಡರ್, ಆಲಂ ಮಿಶ್ರಣದಿಂದ ನೀರಿನ ಶುದ್ಧತೆಗೆ ತೊಂದರೆಯಾಗುವುದಿಲ್ಲ. ಬ್ಲೀಚಿಂಗ್ ಪೌಡರ್‌ನಲ್ಲೇ ಕ್ಲೋರಿನ್ ಇದೆ. ಮೊದಲು ನಗರ ನೀರು ಸರಬರಾಜು ಮಂಡಳಿ ಕ್ಲೋರಿನ್ ಅನಿಲ ಒದಗಿಸಿತ್ತು. ಪ್ರಸಕ್ತ ಘಟಕ ಪುರಸಭೆಗೆ ಹಸ್ತಾಂತರವಾಗಿರುವುದರಿಂದ ಇದನ್ನು ಪುರಸಭೆಯವರೇ ನೋಡಿಕೊಳ್ಳಬೇಕು.
– ಶೋಭಾಲಕ್ಷ್ಮಿ, ಇಂಜಿನಿಯರ್, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ

ಕ್ಲೋರಿನ್ ಗ್ಯಾಸ್ ಹಾಗೂ ಬ್ಲೀಚಿಂಗ್ ಪೌಡರ್‌ನ ಪರಿಣಾಮಗಳು ಬೇರೆಬೇರೆ ಇರುತ್ತವೆ. ಗ್ಯಾಸ್‌ನ ಪರಿಣಾಮ ಜಾಸ್ತಿ. ಏಕೆಂದರೆ ಅದರಲ್ಲಿ ಕ್ಲೋರಿನ್ ಪ್ರಮಾಣ ಹೆಚ್ಚು. ನೀರು ಶುದ್ಧ ಮಾಡಲು ಅನಿಲ ಬದಲು ಬ್ಲೀಚಿಂಗ್ ಪೌಡರ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದನ್ನು ನೀರಿನ ಪರೀಕ್ಷೆ ಮಾಡಿದರಷ್ಟೇ ಕಂಡುಕೊಳ್ಳಬಹುದು.
– ಆನಂದ್, ಮಂಗಳೂರು ಬಯೋಟೆಕ್ ಲ್ಯಾಬ್ ತಜ್ಞ

Leave a Reply

Your email address will not be published. Required fields are marked *