More

    ಜಿಲ್ಲಾಸ್ಪತ್ರೆಯಲ್ಲಿ ನೀರಿಲ್ಲದೆ ರೋಗಿಗಳ ಪರದಾಟ

    -ವಿಜಯವಾಣಿ ಸುದ್ದಿಜಾಲ ಉಡುಪಿ

    ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ನೀರಿನ ಕೊರತೆ ಎದುರಾಗಿದೆ. 100ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದ್ದರೂ, ಸಮಸ್ಯೆ ಪರಿಹಾರ ಕಂಡಿಲ್ಲ.

    ಪ್ರತಿದಿನ ಜಿಲ್ಲಾಸ್ಪತ್ರೆಗೆ 300ರಿಂದ 400 ಹೊರರೋಗಿಗಳು ಆಗಮಿಸುತ್ತಾರೆ. 100-130 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೊಂದಿಗೆ ರೋಗಿಗಳ ಸಂಬಂಧಿಕರೂ ಇರುತ್ತಾರೆ. ಇವರಿಗೆ ಶೌಚಗೃಹ, ಬಟ್ಟೆ ಒಗೆಯಲು, ಸ್ನಾನಕ್ಕೆ ನೀರು ಸಾಲುತ್ತಿಲ್ಲ. ಆಸ್ಪತ್ರೆಯ ಸ್ವಚ್ಛತೆ, ಸಿಬ್ಬಂದಿ ಬಳಕೆಗೂ ನೀರು ಅಗತ್ಯವಾಗಿದೆ.

    4 ಟ್ಯಾಂಕರ್‌ನಲ್ಲಿ ನೀರು

    ಜಿಲ್ಲಾಸ್ಪತ್ರೆಯಲ್ಲಿ ಒಂದು ಲಕ್ಷ ಲೀಟರ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೂರು ಲಕ್ಷ ಲೀ ಸಾಮರ್ಥ್ಯದ ಸಂಪ್ ನಿರ್ಮಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಜನವರಿಯಿಂದ ಟ್ಯಾಂಕರ್ ಮೂಲಕ ನೀರು ತರಿಸಲಾಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಎರಡು ಆಸ್ಪತ್ರೆಗೆ 12,000 ಲೀ. ನೀರು ಅಗತ್ಯವಾಗಿದ್ದು, ತಲಾ 4 ಬಾರಿ ಟ್ಯಾಂಕರ್‌ನಲ್ಲಿ ಪೂರೈಸಲಾಗುತ್ತಿದೆ. ಇ-ಟೆಂಡರ್ ಮೂಲಕ ಗುತ್ತಿಗೆ ಪಡೆದವರು ಪ್ರತಿ ಟ್ರಿಪ್ ನೀರಿಗೆ 1,300 ರೂ. ಶುಲ್ಕ ವಿಧಿಸುತ್ತಿದ್ದು, ಆಸ್ಪತ್ರೆಗೆ ದೊಡ್ಡ ಆರ್ಥಿಕ ಹೊರೆಯಾಗಿದೆ.

    Udupi Govt Hospital
    ಅಜ್ಜರಕಾಡು ಜಿಲ್ಲಾ ಆಸ್ಪತ್ರೆ.

    ಸರ್ಕಾರಿ ವ್ಯವಸ್ಥೆಯ ಇತಿಮಿತಿಯಲ್ಲಿ ಟೆಂಡರ್ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಆದರೆ ಟ್ಯಾಂಕರ್‌ನವರಿಗೂ ನೀರು ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ನೀರಿಗೆ ತೀವ್ರ ಬೇಡಿಕೆ ಉಂಟಾದ ಪರಿಣಾಮವಾಗಿ ಬೆಲೆಯೂ ಏರಿಕೆಯಾಗಿದೆ. ದಾನಿಗಳು ಜಿಲ್ಲಾಸ್ಪತ್ರೆಗೆ ನೀರು ದಾನವಾಗಿ ನೀಡಿದರೆ ಬಡ ರೋಗಿಗಳಿಗೆ ಅನುಕೂಲವಾದೀತು ಎನ್ನುತ್ತಾರೆ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ರೋಗಿಗಳ ಸಂಬಂಧಿಕರು.

    ಜಿಲ್ಲಾಧಿಕಾರಿ ಭೇಟಿ

    ಜಿಲ್ಲಾಧಿಕಾರಿ ಕೂರ್ಮಾ ರಾವ್ ಸೋಮವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ನೀರಿನ ಸಮಸ್ಯೆ ಬಗ್ಗೆ ರೋಗಿಗಳೊಂದಿಗೆ ಮಾತನಾಡಿದರು. ನಂತರ ಸಮರ್ಪಕವಾಗಿ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ‘ಕಳೆದ ಕೆಲವು ದಿನಗಳಿಂದ ಜಿಲ್ಲಾಸ್ಪತ್ರೆಗೆ ಸರಿಯಾಗಿ ಟ್ಯಾಂಕರ್ ನೀರು ಪೂರೈಕೆಯಾಗಿಲ್ಲ. ಹೀಗಾಗಿ ನಗರಸಭೆ ವತಿಯಿಂದ 12 ಸಾವಿರ ಲೀಟರ್ ಟ್ಯಾಂಕರ್ ನೀರು ನೀಡಿದ್ದೇವೆ’ ಎಂದು ಪೌರಾಯುಕ್ತ ರಮೇಶ್ ನಾಯ್ಕ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

    2.70 ಮೀ.ಗೆ ಇಳಿಕೆ

    ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಸ್ವರ್ಣಾ ನದಿಯ ಬಜೆ ಡ್ಯಾಂ ಮುಂಗಾರು ಪೂರ್ವ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಐದು ವರ್ಷದ ಬಳಿಕ ಬರಿದಾಗುತ್ತಿದ್ದು, ನಗರಸಭೆಯಿಂದ 3 ವಿಭಾಗಗಳಲ್ಲಿ ಮೂರು ದಿನಕ್ಕೊಮ್ಮೆ ನೀರು ವಿತರಿಸಲಾಗುತ್ತಿದೆ. ಸದ್ಯ ಬಜೆ ಡ್ಯಾಂನಲ್ಲಿ 2.70 ಮೀಟರ್ ನೀರು ಸಂಗ್ರಹವಿದ್ದು, ಸೋಮವಾರದಿಂದ 4 ವಾರ್ಡ್‌ಗಳಲ್ಲಿ ಸುಮಾರು 200 ಮನೆಗಳಿಗೆ, ಎತ್ತರದ ಪ್ರದೇಶಗಳಿಗೆ 6 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೆಚ್ಚಿನ ಟ್ಯಾಂಕರ್ ನೀರು ಅವಶ್ಯಬಿದ್ದರೆ ಮುಂಜಾಗೃತಾ ಕ್ರಮವಾಗಿ 4 ಬೋರ್‌ವೆಲ್‌ಗಳನ್ನು ಕೊರೆಯಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪೌರಾಯುಕ್ತ ರಮೇಶ್ ನಾಯ್ಕ ತಿಳಿಸಿದ್ದಾರೆ.

    ಅಂಬಲಪಾಡಿ ಬಳಿಯ ಸರ್ಕಾರಿ ಜಾಗದಲ್ಲಿರುವ ಬಾವಿಯಿಂದ ಪೈಪ್‌ಲೈನ್ ಮೂಲಕ ಜಿಲ್ಲಾಸ್ಪತ್ರೆಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಬಾರಿ ಮಳೆ ಬಾರದೆ ಇರುವುದರಿಂದ ಬಾವಿಯಲ್ಲೂ ನೀರಿಲ್ಲ. ಹೀಗಾಗಿ ಕಳೆದ ಕೆಲವು ದಿನಗಳಿಂದ ದಿನಕ್ಕೆ ನಾಲ್ಕು ಟ್ಯಾಂಕರ್‌ನಲ್ಲಿ ನೀರು ತರಿಸುತ್ತಿದ್ದೇವೆ. ಆದರೂ ಸಾಲುತ್ತಿಲ್ಲ. ನೀರನ್ನು ಎಲ್ಲರೂ ಮಿತವಾಗಿ ಬಳಸಿ ಎಂದು ಸೂಚನೆ ನೀಡಿದ್ದೇವೆ.

    -ಡಾ.ಸುದೇಶ್, ಜಿಲ್ಲಾ ಸರ್ಜನ್ (ಪ್ರಭಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts