ಪಡುಬೆಳ್ಳೆ-ಪಾಂಬೂರಲ್ಲೂ ನೀರಿಗೆ ತತ್ವಾರ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ
ಕಾಪು ತಾಲೂಕು ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಂಬೂರು, ದಿಂದೊಟ್ಟು, ಹೊಸ ಒಕ್ಕಲು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಪಾಂಬೂರು ಧರ್ಮಶ್ರೀ, ರಕ್ಷಾಪುರ, ಮಧ್ವ ಮತ್ತು ಶಿವಗಿರಿ ಕಾಲನಿಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಿದೆ. ಕಾಲನಿಗಳಿಗೆ ಲಭ್ಯ ನೀರನ್ನು ಮೂರು ದಿನಕ್ಕೊಮ್ಮೆ, ಕೆಲವೆಡೆ ವಾರಕ್ಕೊಮ್ಮೆ ಬಿಡಲಾಗುತ್ತಿದೆ. ಈ ಪ್ರದೇಶದ ಜನರು ನೀರಿನ ಬರದಿಂದ ಸಮಸ್ಯೆ ಅನುಭವಿಸುವಂತಾಗಿದೆ.

ಈ ಬಾರಿ ನೀರಿನ ತೀವ್ರ ಕೊರತೆ ಉಂಟಾಗಿದ್ದು ಗ್ರಾಮ ಪಂಚಾಯಿತಿ ಲಭ್ಯ ನೀರು ಹಂಚಿಕೆ ಮಾಡುತ್ತಿದೆ. ಪ್ರಸ್ತುತ ಸಮಸ್ಯೆ ತೀವ್ರಗೊಂಡಿದ್ದು ಇಲ್ಲಿನ ಜನರು ನೀರಿಗಾಗಿ ಆಶ್ರಯಿಸಿರುವ ಕೆಲವು ಖಾಸಗಿ ಮನೆಗಳ ನೀರಿನ ಮೂಲಗಳೂ ಬರಿದಾಗುವ ಮಟ್ಟಕ್ಕೆ ತಲುಪಿವೆ. ಗ್ರಾಪಂ ನೀರಿನ ಇತರ ಮೂಲಗಳಿಂದ ಈ ಭಾಗಕ್ಕೆ ಟ್ಯಾಂಕರ್ ಮೂಲಕ ನೀರುವ ಸರಬರಾಜು ಮಾಡಬೇಕಾದ ಅನಿವಾರ‌್ಯತೆ ಉಂಟಾಗಿದೆ.

ಧರ್ಮಶ್ರೀ ಕಾಲನಿಯಲ್ಲಿ ಪ್ರಸ್ತುತ ಮೂರು ದಿನಕ್ಕೊಮ್ಮೆ ಗ್ರಾಪಂ ಬಣಕೆರೆ ಬಾವಿಯಿಂದ ನೀರು ಪೂರೈಕೆ ಮಾಡುತ್ತಿದೆ. ಈ ಕಾಲನಿಯಲ್ಲಿ 45 ಮನೆಗಳಿದ್ದು ಇಲ್ಲಿನ ಜನರೇ ಸೇರಿ ಬಾವಿ ತೋಡಿದ್ದು ಅಡಿಭಾಗದಲ್ಲಿ ದೊಡ್ಡ ಕಲ್ಲು ಬಂದಿದ್ದರಿಂದ ಅದು ಕೂಡ ನಿಷ್ಟ್ರಯೋಜಕವಾಗಿದೆ. ಇಲ್ಲಿರುವ ಶುದ್ಧ ನೀರಿನ ಘಟಕ ಜನರು ಸದ್ಬಳಕೆ ಮಾಡುತ್ತಿದ್ದು ಅದಕ್ಕೂ ನೀರಿನ ಕೊರತೆ ಉಂಟಾಗಿದೆ.

ಶಿವಗಿರಿ ಕಾಲನಿಗೂ ಬಣಕೆರೆಯಿಂದ ನೀರು ಪೂರೈಕೆಯಾಗುತ್ತಿದ್ದು ಇಲ್ಲಿ 65 ಮನೆಗಳಿವೆ. ಇವರಿಗೆ ಪ್ರಸ್ತುತ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಶಿವಗಿರಿ ಕಾಲನಿಯಲ್ಲಿ ಉತ್ತಮ ನೀರಿರುವ ಎರಡು ಹ್ಯಾಂಡ್ ಪಂಪ್‌ಗಳು ಬಳಕೆಯಿಲ್ಲದೆ ನಿಷ್ಪ್ರಯೋಜಕವಾಗಿವೆ.

ವಾರ ಬಿಟ್ಟು ನೀರು ಪೂರೈಕೆ: ರಕ್ಷಾಪುರ ಕಾಲನಿಯಲ್ಲಿ 19 ಮನೆಗಳಿದ್ದು ಕಳೆದ ವಾರ ಬಂದಿದ್ದ ನೀರು ಮತ್ತೆ ಈ ವಾರ ಬಂದಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಪ್ರಸ್ತುತ ಪಡುಬೆಳ್ಳೆ ನದಿ ಬಳಿಯ ಬಾವಿಯಿಂದ ನೀರು ಪೂರೈಕೆಯಾಗುತ್ತಿದೆ. ಮಧ್ವ ಕಾಲನಿಯಲ್ಲಿ ಸುಮಾರು 50 ಮನೆಗಳಿದ್ದು ರಸ್ತೆ ಬದಿಯ ಮನೆಗಳಿಗೆ ನೀರು ನಿರಂತರ ಪೂರೈಕೆಯಾದರೆ ಒಳಗಿನ ಮನೆಗಳಿಗೆ ಮೂರು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.
ಕಾಲನಿಗಳಲ್ಲಿ ನೀರಿನ ಮೂಲಗಳನ್ನು ಸೃಜಿಸಲು, ಮುಖ್ಯವಾಗಿ ಬೋರ್‌ವೆಲ್ ಕೊರೆಯಲು ನೀರಿನ ಪಾಯಿಂಟ್ ಲಭ್ಯವಾಗದಿರುವುದೇ ಅಡ್ಡಿಯಾಗಿದೆ. ಇರುವ ನೀರಿನ ಮೂಲಗಳಿಂದಲೇ ನೀರು ಪೂರೈಸುವ ಅನಿವಾರ‌್ಯವಿದ್ದು, ಬರಿದಾದದಲ್ಲಿ ಹೊರಗಿನ ಮೂಲಗಳನ್ನು ಅವಲಂಬಿಸಬೇಕಿದೆ.

ಹೊಸ ಬೋರ್‌ವೆಲ್ ಇದ್ದರೂ!: ಪಾಂಬೂರು ಮತ್ತು ಪಡುಬೆಳ್ಳೆ ಭಾಗದ ಕಾಲನಿಗಳ ನೀರಿನ ತೀವ್ರ ಸಮಸ್ಯೆ ನೀಗಿಸಬಲ್ಲ ದಿಂದೊಟ್ಟು ರಸ್ತೆಯಲ್ಲಿ ಹೊಸದಾಗಿ ಕೊರೆದ ಬೋರ್‌ವೆಲ್ ಇದ್ದರೂ ಅದಕ್ಕೆ ಪಂಪ್ ಅಳವಡಿಸಲು ಅನುದಾನ ಇಲ್ಲ ಎಂಬ ನೆಪವೊಡ್ಡಲಾಗುತ್ತಿದೆ. ನೀರಿನ ಅಭಾವದ ತುರ್ತು ಪರಿಸ್ಥಿತಿಯಲ್ಲಿ ಈ ಬಗ್ಗೆ ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕಿದೆ. ಪಡುಬೆಳ್ಳೆಯಲ್ಲಿ ನೀರಿನ ಮೂಲ ಬರಿದಾಗುತ್ತಿದ್ದರೂ ಪಾಪನಾಶಿನಿ ನದಿಯಲ್ಲಿ ನೀರಿರುವುದು ವಿಶೇಷ. ಈ ನೀರು ಶುದ್ಧೀಕರಿಸಿ ಪೂರೈಕೆ ಮಾಡುವ ಬಗ್ಗೆಯೂ ಆಡಳಿತ ಗಮನ ನೀಡಬಹುದು.

ಪಡುಬೆಳ್ಳೆಯ ಮನೆಗಳಲ್ಲಿ, ಕಾಲನಿಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಿದೆ. ಜಲಮೂಲಗಳು ಬತ್ತಿವೆ. ಖಾಸಗಿಯಾಗಿ ನೀರು ತರಿಸಿಕೊಳ್ಳುವ ಪ್ರಮೇಯ ಬಂದಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಲ್ಲಿ ಸ್ಥಳೀಯಾಡಳಿತ, ತಾಲೂಕು ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕಿದೆ.
-ಆರ್.ಡಿ. ಪಾಂಬೂರು, ಸ್ಥಳೀಯ ನಿವಾಸಿ

ಗ್ರಾಪಂ ಉಪಾಧ್ಯಕ್ಷರು, ಗ್ರಾಪಂ ಪಂಪ್ ಚಾಲಕರು ವಿಶೇಷ ಆಸ್ಥೆಯಿಂದ ಲಭ್ಯ ನೀರನ್ನು ಪೂರೈಕೆ ಮಾಡುತ್ತಿದ್ದಾರೆ. ಪಡುಬೆಳ್ಳೆಯ ಜಲಮೂಲಗಳಲ್ಲಿ ನೀರು ಸಾಕಾಗದೆ ಇರುವುದಿಂದ ಇಲ್ಲಿನ ಜನರಿಗೆ ಕುಡಿಯುವ ನೀರಿನ ಪರ‌್ಯಾಯ ವ್ಯವಸ್ಥೆ ಮಾಡುವುದು ತೀರ ಅತ್ಯಗತ್ಯವಾಗಿದೆ.
– ಶೇಖರ, ಕಾಲನಿ ನಿವಾಸಿ

Leave a Reply

Your email address will not be published. Required fields are marked *