ಮೊಗೇರಡ್ಕ ಶಾಲೆಯಲ್ಲಿ ಜೀವಜಲಕ್ಕೆ ಹಾಹಾಕಾರ

ಕಡಬ: ತಾಲೂಕಿನ ಕೊಂಬಾರು ಗ್ರಾಮದ ಮೊಗೇರಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ವಾರಗಳಿಂದ ಜೀವಜಲಕ್ಕೆ ಪರದಾಡುವ ಪರಿಸ್ಥಿತಿಯಿದೆ. ಶೀಘ್ರ ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿಗೆ ಸೂಚಿಸಿದ್ದರೂ ಸಮಸ್ಯೆ ನಿವಾರಣೆಯಾಗಿಲ್ಲ.

ತಾಲೂಕಿನ ಗಡಿ ಭಾಗದಲ್ಲಿರುವ ಶಾಲೆಯಲ್ಲಿ ಕೂಲಿ ಕಾರ್ಮಿಕರ, ಮಧ್ಯಮ ವರ್ಗ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಶಿಕ್ಷಕರ, ವಿದ್ಯಾರ್ಥಿಗಳ ಕೊರತೆಯಿಲ್ಲ. ಆದರೆ ಮೂಲಸೌಕರ್ಯಗಳಾದ ಕೊಠಡಿ, ಪ್ರಯೋಗ ಪರಿಕರ, ಶಾಲಾ ಆವರಣ ಇಲ್ಲ. ಈ ನಡುವೆ ಕುಡಿಯುವ ನೀರಿನ ಸಮಸ್ಯೆಯೂ ಬಿಗಾಡಾಯಿಸಿದೆ.
ಫೆಬ್ರವರಿ ಆರಂಭದಲ್ಲಿ ಶಾಲಾ ಆವರಣದಲ್ಲಿದ್ದ ತೆರದ ಬಾವಿ ಬತ್ತಿದೆ. ಬಳಿಕ ಕೈಪಂಪು ಅಳವಡಿಕೆಯ ಕೊಳವೆ ಬಾವಿ ಕೈಕೊಟ್ಟಿತ್ತು. ಇದನ್ನು ದುರಸ್ತಿ ಮಾಡಿ ಅಥವಾ ಹೊಸ ಕೊಳವೆಬಾವಿ ನಿರ್ಮಿಸಿ ಎಂದು ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿಗೂ ಮನವಿ ಮಾಡಿದ್ದರೂ ಫಲ ನೀಡಿಲ್ಲ.

ಮನವಿ ನೀಡಿ ಫಲ ಸಿಗದೆ ಬೇಸತ್ತ ವಿದ್ಯಾಭಿಮಾನಿಗಳು ಸ್ಥಳೀಯ ಸಾಮಾಜಿಕ ಮುಂದಾಳು ರಾಮಕೃಷ್ಣ ಹೊಳ್ಳಾರು ನೇತೃತ್ವದಲ್ಲಿ ತಾಲೂಕು ಪಂಚಾಯತಿ ಸದಸ್ಯೆ ಆಶಾ ಲಕ್ಷ್ಮಣ ಸಹಿತ ಫೆ.11ರಂದು ಜಿಲ್ಲಾಧಿಕಾರಿ ಭೇಟಿ ಮಾಡಿ ಅಹವಾಲು ಸಲ್ಲಿಸಿದರು. ಜಿಲ್ಲಾಧಿಕಾರಿಯವರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕರೆ ಮಾಡಿ ಬತ್ತಿ ಹೋದ ಕೊಳವೆ ಬಾವಿ ತಕ್ಷಣ ದುರಸ್ತಿ ಮಾಡಿ ವಿದ್ಯುತ್ ಪಂಪು ಅಳವಡಿಸಿ, ಶಾಲಾ ವಠಾರದಲ್ಲಿ ನೂತನ ಕೊಳವೆ ಬಾವಿ ಕೊರೆದು ಶಾಶ್ವತವಾಗಿ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದರು.
ಈ ಬಗ್ಗೆ ಕ್ರಮದ ಭರವಸೆ ದೊರೆತಿದ್ದರೂ ಇದುವರೆಗೂ ಬದಲಾವಣೆ ಆಗಿಲ್ಲ. ವಿದ್ಯಾರ್ಥಿಗಳು, ಅಕ್ಷರ ದಾಸೋಹ ಸಿಬ್ಬಂದಿ ಶಾಲಾ ಅನತಿ ದೂರದಿಂದ ನೀರು ಹೊತ್ತು ತರುತ್ತಿದ್ದಾರೆ. ಶೌಚಗೃಹ ನಿರ್ವಹಣೆ, ಕುಡಿಯುವ ನೀರು, ಅಕ್ಷರ ದಾಸೋಹ ಅಡುಗೆ, ಪಾತ್ರೆ ತೊಳೆಯಲು ಬಕೆಟ್, ಬಿಂದಿಗೆಗಳಲ್ಲಿ ನೀರು ಹೊತ್ತು ತರುವ ಅನಿವಾರ್ಯತೆಯಿದೆ.

ಮತಗಟ್ಟೆ ಕೇಂದ್ರ: ಕೊಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡ್ಯ ಪಿಲಿಕಜೆ ಮತ್ತು ಮೋಗೆರಡ್ಕ ಸರ್ಕಾರಿ ಶಾಲೆ ಮತಗಟ್ಟೆ ಕೇಂದ್ರವಾಗಿದೆ. ಮುಂದಿನ ಲೋಕಸಭಾ ಚುನಾವಣೆ ಸಂದರ್ಭ ನೀರಿನ ಅಭಾವ ಇನ್ನಷ್ಟು ಬಿಗಡಾಯಿಸುುವ ಹಂತಕ್ಕೆ ತಲುಪಲಿದೆ. ಗುಂಡ್ಯ ಪಿಲಿಕಜೆ ಶಾಲೆಯಲ್ಲೂ ಸದ್ಯ ನೀರಿನ ಸಮಸ್ಯೆ ತಲೆದೋರುವ ಲಕ್ಷಣವಿದೆ. ಇಲ್ಲಿಗೂ ಶಾಶ್ವತ ಪರಿಹಾರ ಬೇಕು ಎಂಬುದು ಶಿಕ್ಷಣ ಪ್ರೇಮಿಗಳ ಆಗ್ರಹ.

ಮೂರು ವಾರದಿಂದ ಶಾಲೆಯಲ್ಲಿ ನೀರಿನ ಸಮಸ್ಯೆಯಿದೆ. ತೆರೆದ ಬಾವಿ ಬತ್ತಿ ಹೋಗಿದೆ. ಕೆಟ್ಟುಹೋದ ಕೊಳವೆ ಬಾವಿ ದುರಸ್ತಿ ಮಾಡಿ ಅಥವಾ ನೂತನ ಕೊಳವೆ ಬಾವಿ ಕೊರೆದು ಕುಡಿಯುವ ನೀರಿನ ಸಮಸ್ಯೆ ಪರಿಸಹರಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸಮಸ್ಯೆ ಪರಿಹರಿಸಲು ಸೂಚನೆ ನೀಡಿದ್ದಾರೆ. ಸದ್ಯ ಕೊಳವೆಬಾವಿಗಾಗಿ ಮೂರು ಕಡೆ ಜಾಗ ಗುರುತಿಸಲಾಗಿದೆ.
ರಾಮಕೃಷ್ಣ ಡಿ.ಹೊಳ್ಳಾರು
ಸಾಮಾಜಿಕ ಕಾರ‌್ಯಕರ್ತ

ಮೊಗೇರಡ್ಕ ಶಾಲೆ ನೀರಿನ ಸಮಸ್ಯೆ ನಿವಾರಿಸಲು ಪಂಚಾಯಿತಿ ವತಿಯಿಂದ ಪ್ರಯತ್ನ ನಡೆಸಲಾಗುತ್ತಿದೆ. ತಾಲೂಕು ಕಾರ‌್ಯನಿರ್ವಹಣಾದಿಕಾರಿ ಸೂಚನೆ ಮೇರೆಗೆ ಕೊಳವೆ ಬಾವಿ ಮೂರು ಕಡೆ ಜಾಗ ಗುರುತಿಸಲಾಗಿದೆ. ಮೊಗೇರಡ್ಕ ಮತ್ತು ಗುಂಡ್ಯ ಪಿಲಿಕಜೆ ಶಾಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಶೀಘ್ರದಲ್ಲಿ ಕ್ರಮಕೈಗೊಳ್ಳಲಾಗುವುದು.
ರಾಘವೇಂದ್ರ ಗೌಡ
ಪಿಡಿಒ ಕೊಂಬಾರು ಗ್ರಾಮ