ಹೊಸಹಳ್ಳಿಯಲ್ಲಿ ಐದು ದಿನದಿಂದ ನೀರಿಲ್ಲ

ಅಜ್ಜಂಪುರ: ಸಮೀಪದ ಎಂ.ಹೊಸಹಳ್ಳಿಯಲ್ಲಿ 5 ದಿನಗಳಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.

ಜಿಪಂ ಅನುದಾನದಡಿ ಗ್ರಾಮದಲ್ಲಿ ಪೈಪ್​ಲೈನ್ ಕಾಮಗಾರಿ ಕೈಗೊಂಡಿದ್ದ ಸಂದರ್ಭದಲ್ಲಿ ಹಳೇ ಪೈಪ್​ಲೈನ್​ಗೂ ಹಾನಿ ಮಾಡಿರುವುದರಿಂದ ನೀರು ಪೂರೈಸಲು ಸಾಧ್ಯವಾಗದೆ ಸಮಸ್ಯೆ ಬಿಗಡಾಯಿಸಿದೆ.

ಕಾಮಗಾರಿ ಇನ್ನೂ ಮೂರ್ನಾಲ್ಕು ದಿನ ಮುಂದುವರಿಯಲಿದ್ದು ಪೂರ್ಣಗೊಳ್ಳುವವರೆಗೆ ನೀರು ಪೂರೈಕೆ ಸಾಧ್ಯವಿಲ್ಲ. ಅನಿವಾರ್ಯವಾಗಿ ತೋಟಗಳು, ಖಾಸಗಿ ಜಮೀನುಗಳಿಂದ ಟ್ರ್ಯಾಕ್ಟರ್, ಎತ್ತಿನ ಗಾಡಿಗಳ ಮೂಲಕ ನೀರು ತರುವ ಪರಿಸ್ಥಿತಿ ನಿರ್ವಣವಾಗಿದೆ.

ಮೇಯಲು ಹೋದ ಜಾನುವಾರುಗಳಿಗೂ ಹೊರಗೆಲ್ಲೂ ನೀರು ಸಿಗುತ್ತಿಲ್ಲ. ಅವು ಕೂಡ ಮನೆಗೆ ಬಂದು ಕುಡಿಯಬೇಕು. ಜಾನುವಾರುಗಳ ಸ್ಥಿತಿ ಹೇಳತೀರದು. ಕಚೇರಿ ಒಳಗೆ ಕುಳಿತಿರುವ ಅಧಿಕಾರಿಗಳಿಗೆ ನಮ್ಮ ಪರಿಸ್ಥಿತಿ ಅರ್ಥವಾಗುವುದು ಹೇಗೆ ಎಂಬುದು ಗ್ರಾಮಸ್ಥರ ಪ್ರಶ್ನೆ.

ಈ ಬಗ್ಗೆ ಪಿಡಿಒ ಅವರನ್ನು ಪ್ರಶ್ನಿಸದರೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎನ್ನುತ್ತಾರೆ. ನೀರಿಲ್ಲದೆ ಐದು ದಿನಗಳಾಗಿದ್ದು ಇನ್ನೂ ಮೂರ್ನಾಲ್ಕು ದಿನ ನೀರು ಬರುವುದಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಕೇಳಿದರೆ ಪರಿಶೀಲಿಸುತ್ತೇವೆ ಎಂಬುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.