ಸೋರುತ್ತಿದೆ ವಾಣಿಜ್ಯ ಸಂಕೀರ್ಣ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್

ಹೊರಗಿನಿಂದ ನೋಡುವಾಗ ಸುಸಜ್ಜಿತ ಕಟ್ಟಡ, ಆದರೆ ಒಳಗೆ ನುಗ್ಗಿದರೆ ಯಾವುದೋ ಪಾಳು ಕಟ್ಟಡಕ್ಕೆ ಪ್ರವೇಶಿಸಿದ ಅನುಭವ, ಅಲ್ಲಲ್ಲಿ ಬಿರುಕುಬಿಟ್ಟ ಛಾವಣಿ, ಹೊರಚಾಚಿರುವ ಕಬ್ಬಿಣದ ರಾಡುಗಳು… ಇಲ್ಲಿನ ಪರಿಸ್ಥಿತಿ ಯಾವುದೇ ಸಂದರ್ಭದಲ್ಲೂ ಅಪಾಯ ಎದುರಾಗುವ ಸಾಧ್ಯತೆಗಳತ್ತ ಬೊಟ್ಟು ಮಾಡುತ್ತಿವೆ.

ಇದು ಬೆಳ್ಮಣ್ ಗ್ರಾಪಂ ವ್ಯಾಪ್ತಿಯ ಬೆಳ್ಮಣ್ ಪೇಟೆ ಬಸ್‌ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದ ದುಸ್ಥಿತಿ. ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕುಬಿಟ್ಟಿದ್ದು, ಜೋರು ಮಳೆ ಬಂದರೆ ಬಿರುಕು ಬಿಟ್ಟ ಜಾಗದಲ್ಲಿ ಕಟ್ಟಡದೊಳಗೆ ನೀರು ಸೋರಿಕೆಯಾಗುತ್ತದೆ.

ಕಟ್ಟಡದ ಕೆಳಭಾಗದಲ್ಲಿ ಮೂರು ಅಂಗಡಿ ಹಾಗೂ ಪ್ರಯಾಣಿಕರ ತಂಗುದಾಣವಿದ್ದರೆ, ಮೊದಲ ಮಹಡಿಯಲ್ಲಿ ಐದು ಅಂಗಡಿಗಳಿವೆ. ಕೆಲವೇ ವರ್ಷಗಳ ಹಿಂದೆ ಈ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು, ಕಳಪೆ ಕಾಮಗಾರಿಯ ನಿಜ ದರ್ಶನ ಪ್ರಸಕ್ತ ಅರಿವಿಗೆ ಬರುತ್ತಿದೆ. ಸ್ವಲ್ಪ ಮಳೆ ಬಂದರೂ ಕಟ್ಟಡ ಮೇಲ್ಭಾಗದಲ್ಲಿ ನೀರು ಶೇಖರಣೆಗೊಂಡು ಬಿರುಕು ಬಿಟ್ಟ ಜಾಗದಿಂದ ಒಳಕ್ಕೆ ಇಳಿಯುತ್ತದೆ.

ಬಿರುಕು ಬಿಟ್ಟ ತಡೆ ಗೋಡೆ: ವಾಣಿಜ್ಯ ಸಂಕೀರ್ಣದ ಮೇಲ್ಬಾಗದ ಅಂಗಡಿ ಕೋಣೆಗಳ ಮುಂಭಾಗ ಸುರಕ್ಷತೆಗಾಗಿ ತಡೆ ಗೋಡೆ ನಿರ್ಮಿಸಿದ್ದು ಪ್ರಸಕ್ತ ಈ ತಡೆಗೊಡೆ ಅಲ್ಲಲ್ಲಿ ಬಿರುಕು ಬಿಟ್ಟು ಸಿಮೆಂಟ್ ಸ್ಲಾಬ್‌ಗಳು ಎದ್ದು ಹೋಗಿ ಕಬ್ಬಿಣದ ಸರಳುಗಳು ಗೋಚರಿಸುತ್ತಿವೆೆ. ಕಟ್ಟಡದ ಮೆಟ್ಟಿಲ ಪಕ್ಕದಲ್ಲಿಯೂ ಕಬ್ಬಿಣದ ರಾಡುಗಳು ಎದ್ದು ಹೋಗಿರುವ ಪರಿಣಾಮ ತುಂಬಾನೇ ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಮೆಟ್ಟಿಲುಗಳು ೆ ಜಾರುತ್ತಿದ್ದು ಒಂದು ವೇಳೆ ಜಾರಿ ಬಿದ್ದರೆ ಈ ರಾಡುಗಳು ಚುಚ್ಚುವ ಸಾಧ್ಯತೆ ಹೆಚ್ಚಿದೆ. ಪ್ರತೀ ಮೂರು ವರ್ಷಕೊಮ್ಮೆ ಏಲಂ ನಡೆಸಿ ಬಾಡಿಗೆ ಪಡೆಯುತ್ತಾರೆ. ಆದರೆ ಈ ಕಟ್ಟಡ ನಿರ್ಮಾಣಗೊಂಡ ಬಳಿಕ ಇಲ್ಲಿವರೆಗೂ ನಿರ್ವಹಣೆ ನಡೆದಿಲ್ಲ.

ಗೋಡೆಯಲ್ಲೇ ಹರಿಯುತ್ತಿದೆ ನೀರು: ಬಿರುಕು ಹಾಗೂ ಕಳಪೆ ಕಾಮಗಾರಿಯಿಂದ ಮಳೆ ನೀರು ಗೋಡೆಯಲ್ಲಿ ಹರಿಯುತ್ತದೆ. ಇಡೀ ಕಟ್ಟಡಕ್ಕೆ ವಿದ್ಯುತ್ ಪೂರೈಸುವ ಮೀಟರ್ ಬಾಕ್ಸ್ ಇರುವ ಕೋಣೆಯಲ್ಲಿ ನೀರು ಅತ್ಯಂತ ಹೆಚ್ಚಾಗಿ ಗೋಡೆಯಲ್ಲೇ ಹರಿಯುತ್ತಿದ್ದು ಯಾವುದೇ ಸಂದರ್ಭ ವಿದ್ಯುತ್ ಅವಘಡ ಸಾಧ್ಯತೆಗಳಿವೆ. ಇಡೀ ಗೋಡೆ ಸಹಿತ ವಿದ್ಯುತ್ ಮೀಟರ್‌ಗಳು ಮಳೆ ನೀರಿನಲ್ಲಿ ಒದ್ದೆಯಾಗುತ್ತಿದೆ. ಇದರಿಂದ ಇಲ್ಲಿಗೆ ಬರುವ ಗ್ರಾಹಕರು ಹಾಗೂ ಅಂಗಡಿ ಮಾಲೀಕರು ನಿತ್ಯ ಭಯದ ನೆರಳಲ್ಲೇ ದಿನ ಕಳೆಯುವಂತಾಗಿದೆ.

ಶೌಚಗುಂಡಿ ದುರ್ನಾತ: ಈ ಕಟ್ಟಡಲ್ಲೇ ಸಾರ್ವಜನಿಕ ಶೌಚಗೃಹವಿದ್ದು ಇದರ ಹೊಂಡವು ಪದೇ ಪದೇ ತುಂಬಿ ಗಬ್ಬೆದ್ದು ನಾರುತ್ತದೆ. ಇಡೀ ಬಸ್ಸು ನಿಲ್ದಾಣ ದುರ್ನಾತಬೀರುತ್ತಿದ್ದು ಪ್ರಯಾಣಿಕರು ಹಾಗೂ ಅಂಗಡಿ ವರ್ತಕರು ಮೂಗುಮುಚ್ಚಿ ಕುಳಿತುಕೊಳ್ಳುವಂತಾಗಿದೆ. ಶೌಚಗೃಹದ ಹೊಂಡದಿಂದ ತುಂಬಿದ ತ್ಯಾಜ್ಯ ನೀರು ಮಳೆ ನೀರಿನ ಜತೆ ಬಸ್ಸು ನಿಲ್ದಾಣದಲ್ಲಿ ಹರಿದಾಡುತ್ತಿದ್ದರೂ ಸ್ಥಳಿಯಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ.ವಾಣಿಜ್ಯ ಸಂಕೀರ್ಣದ ಮೇಲ್ಛಾವಣಿಯಲ್ಲಿ ಕೊಳಚೆ ನೀರು ಶೇಖರಣೆಯಾಗಿ ದುರ್ನಾತ ಬೀರುತ್ತಿದೆ. ಕೊಳಚೆ ನೀರಿನಲ್ಲಿ ಹುಳಗಳು ಉತ್ಪತ್ತಿಯಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ.

ಈ ಕಟ್ಟಡದಲ್ಲಿ ನಿಲ್ಲುವುದೇ ಅಪಾಯಕಾರಿ. ತಡೆಗೋಡೆಗಳು ಸಂಪೂರ್ಣ ಬಿರುಕು ಬಿಟ್ಟಿದ್ದು ತುಳಿದರೆ ಸಿಮೆಂಟ್‌ಗಳು ಉದುರುತ್ತಿವೆ.ಕೊಳಚೆಯಿಂದ ಕೂಡಿದ ಕಟ್ಟಡದ ಸುತ್ತ ಶುಚಿತ್ವದ ಅಗತ್ಯವಿದೆ. ಕೂಡಲೇ ಸ್ಥಳಿಯಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ.
ಸನತ್ ಕುಮಾರ್, ಗ್ರಾಹಕರು.

ಇಡೀ ಕಟ್ಟಡದಲ್ಲಿ ಮಳೆ ನೀರು ನೇರವಾಗಿ ಒಳಭಾಗದಲ್ಲಿ ಗೋಡೆಯಲ್ಲಿ ಹರಿಯುತ್ತಿದೆ. ವಿದ್ಯುತ್ ಮೀಟರ್‌ಗಳು ನೀರಿನಲ್ಲೇ ಇದೆ. ಅವಘಡ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡರೇ ಉತ್ತಮ.
ಉಮೇಶ್ , ಸ್ಥಳಿಯರು.

ವಾಣಿಜ್ಯ ಸಂಕೀರ್ಣದಲ್ಲಿನ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಮೆಟ್ಟಿಲುಗಳ ಸಮೀಪ ತಗಡು ಶೀಟು ಅಳವಡಿಸುವ ಯೋಜನೆ ಇದೆ. ಕೂಡಲೇ ಸ್ಪಂದಿಸುತ್ತೇವೆ
ಪ್ರಕಾಶ್ , ಗ್ರಾ.ಪಂ ಅಭಿವೃದ್ಧ್ದಿ ಅಧಿಕಾರಿ. ಬೆಳ್ಮಣ್

Leave a Reply

Your email address will not be published. Required fields are marked *