ಬಜೆ ಕೆಳಗಿನ ಅಣೆಕಟ್ಟು ನೀರು ಸೋರಿಕೆ!

ಗೋಪಾಲಕೃಷ್ಣ ಪಾದೂರು ಉಡುಪಿ
ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸ್ವರ್ಣಾ ನದಿ ಬಜೆ ವಿದ್ಯುತ್ ಘಟಕದ ಖಾಸಗಿ ಅಣೆಕಟ್ಟಿನಲ್ಲಿ ನೀರು ಸೊರಿಕೆಯಾಗುತ್ತಿದ್ದು, ಜಲಾಶಯದಲ್ಲಿ ಒಂದು ಮೀಟರ್‌ನಷ್ಟು ನೀರು ಇಳಿಕೆಯಾಗಿದೆ.

ನಗರಸಭೆ ವತಿಯಿಂದ ಉಡುಪಿ ನಗರಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ ಕಟ್ಟಲಾಗಿರುವ ಅಣೆಕಟ್ಟಿನ ಕೆಳಗೆ ಖಾಸಗಿ ಉದ್ಯಮಿ ಕಿರು ವಿದ್ಯುತ್ ಘಟಕ ನಡೆಸಲು ಅಣೆಕಟ್ಟು ಕಟ್ಟಿದ್ದಾರೆ. ಮೇಲಿನ ಅಣೆಕಟ್ಟಿನಲ್ಲಿ ಭರ್ತಿಯಾದ ನೀರು ಕೆಳಗಿನ ವಿದ್ಯುತ್ ಘಟಕಕ್ಕೆ ಹರಿಯುತ್ತದೆ. ಆದರೆ, ಖಾಸಗಿ ಡ್ಯಾಂನ ಹಲಗೆ ಹಾಳಾಗಿರುವುದರಿಂದ ನೀರು ಸೋರಿಕೆಯಾಗುತ್ತಿದೆ. ಮಳೆಗಾಲ ಮುಗಿದ ಬಳಿಕವೂ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಹೋಗಿದೆ. ಹಲಗೆಗಳನ್ನು ಸಮರ್ಪಕವಾಗಿ ದುರಸ್ತಿ ಮಾಡದಿರುವುದರಿಂದ ನಗರಕ್ಕೆ ನೀರು ಪೂರೈಕೆಯಲ್ಲಿ ತೊಡಕಾಗುವ ಸಂಭವವಿದೆ.

ಭಾರಿ ನೀರು ಸೋರಿಕೆ: ಖಾಸಗಿ ಅಣೆಕಟ್ಟೆಗೆ 18 ಗೇಟುಗಳಿವೆ. ಅದರಲ್ಲಿ 1, 5 ಮತ್ತು 18ನೇ ಗೇಟುಗಳು ಮಳೆಗಾಲದಲ್ಲಿ ಮರದ ದಿಮ್ಮಿಗಳು ಸಿಲುಕಿ ಹಾನಿಗೊಂಡಿವೆ. 1 ಮತ್ತು 18ನೇ ಗೇಟುಗಳನ್ನು ಸರಿಪಡಿಸಲಾಗಿದ್ದರೂ, 5ನೇ ಗೇಟನ್ನು ಸರಿಪಡಿಸಿಲ್ಲ. ಆದ್ದರಿಂದ ನಗರಸಭೆಗೆ ಪೂರೈಕೆ ಆಗಬೇಕಾದ ನೀರು ಕಳೆದ 2 ತಿಂಗಳಿಂದ ಈ ಗೇಟಿನ ಮೂಲಕ ಭಾರಿ ಪ್ರಮಾಣದಲ್ಲಿ ಹೊರಗೆ ಹೋಗುತ್ತಿದೆ. ಪರಿಣಾಮ ಈಗಾಗಲೇ 0.30 ಮೀಟರಿನಷ್ಟು ನೀರಿನ ಕೊರತೆಯಾಗಿದೆ. ಈ ಗೇಟನ್ನು ಮುಚ್ಚಿದರೆ 1 ಮೀಟರಿನಷ್ಟು ಹೆಚ್ಚು ನೀರು ಸಂಗ್ರಹಿಸುವ ಅವಕಾಶ ಇದೆ.

 5.30 ಮೀ. ನೀರು ಸಂಗ್ರಹ: ಬಜೆ ಅಣೆಕಟ್ಟೆಯಲ್ಲಿ 6.20 ಮೀಟರಿನಷ್ಟು ನೀರಿನ ಸಂಗ್ರಹ ಮಾಡಬಹುದು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಜೆ ಜಲಾಶಯದಲ್ಲಿ 5.60 ಮೀಟರ್ ನೀರಿತ್ತು. ಆದರೆ ಈ ಬಾರಿ 5.30 ಮೀಟರ್ ಮಾತ್ರ ನೀರು ಸಂಗ್ರಹವಿದೆ. ಆದರೆ ಜಲಾಶಯಕ್ಕೆ ಒಳಹರಿವು ನಿಂತಿಲ್ಲ. ಪಶ್ಚಿಮ ಘಟ್ಟದ ಮೇಲಿನಿಂದ ಜಲಾಶಯಕ್ಕೆ ನಿರಂತರ ನೀರು ಹರಿದು ಬರುತ್ತಿದೆ. ಆದರೆ ಅದನ್ನು ಸಮರ್ಪಕವಾಗಿ ಸಂಗ್ರಹಿಸದೇ ಇದರುವುದರಿಂದ ಸಮಸ್ಯೆ ತಲೆದೋರಿದೆ.

ನೀರಿಲ್ಲದಿದ್ದರೂ ವಿದ್ಯುತ್ ಉತ್ಪಾದನೆ: ಖಾಸಗಿ ವಿದ್ಯುತ್ ಕೇಂದ್ರಕ್ಕೆ ಅಣೆಕಟ್ಟೆಯಲ್ಲಿ ಹೆಚ್ಚುವರಿ ನೀರಿದ್ದರೇ ಮಾತ್ರ ಅದನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವುದಕ್ಕೆ ಅನುಮತಿ ಇದೆ. ಆದರೇ ಪ್ರಸ್ತುತ ಅಣೆಕಟ್ಟೆಯಲ್ಲಿ ನಿಗದಿತ ಮಟ್ಟಕ್ಕಿಂತ ಕಡಿಮೆ ನೀರಿದೆ. ಆದರೂ ಈ ವಿದ್ಯುತ್ ಕೇಂದ್ರದಲ್ಲಿ ರಾತ್ರಿ ಹೊತ್ತು ವಿದ್ಯುತ್ ಉತ್ಪಾದನೆ ನಡೆಯುತ್ತಿದೆ ಎಂದು ಸ್ಥಳೀಯ ರೈತರು ದೂರಿದ್ದಾರೆ.

ಹೆಚ್ಚು ನೀರು ಸಂಗ್ರಹಿಸುವ ನಿಟ್ಟಿನಲ್ಲಿ ನಗರಸಭೆಯ ಡ್ಯಾಂ ಏರಿಕೆ ಬಗ್ಗೆ ಚಿಂತಿಸಲಾಗಿತ್ತು. ಆದರೆ ಅಡಿಪಾಯ ಸಾಮರ್ಥ್ಯ ಸಾಲದು ಎಂದು ತಜ್ಞರು ವರದಿ ನೀಡಿದ್ದರಿಂದ ಯೋಜನೆ ಕೈಬಿಡಲಾಯಿತು. ಖಾಸಗಿ ಡ್ಯಾಂನಲ್ಲಿ ನೀರು ಪೋಲಾಗುತ್ತಿರುವುದರಿಂದ ಸ್ಯಾಂಡ್‌ಬ್ಯಾಗ್‌ಗಳನ್ನು ಇಟ್ಟು ಸೋರಿಕೆ ತಡೆಯಲು ನಿರ್ಧರಿಸಲಾಗಿದೆ.
| ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ನಗರಸಭೆ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ