ಚಿಕ್ಕಬಳ್ಳಾಪುರದಲ್ಲಿ ಜಲಾಸ್ತ್ರ

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣಾ ರಣಕಣವು ಜಿದ್ದಾಜಿದ್ದಿ ಹೋರಾಟದ ಸ್ವರೂಪ ಪಡೆದಿರುವುದರ ನಡುವೆ ಈ ಭಾಗದ ಜನರ ಮನವೊಲಿಕೆಗೆ ಆಂಧ್ರದ ಕೃಷ್ಣಾ ನದಿ ನೀರು ಪೂರೈಸುವ ಹೊಸ ಭರವಸೆಯ ಅಸ್ತ್ರ ಬಿಡಲಾಗಿದೆ.

ಹೌದು, 2009 ಲೋಕಸಭಾ ಚುನಾವಣೆ ವೇಳೆ ಪರಮಶಿವಯ್ಯ ವರದಿಯಾಧಾರಿತ ನೀರಾವರಿ ಯೋಜನೆ, 2013ರ ಲೋಕಸಭಾ ಚುನಾವಣೆಗೆ ಎತ್ತಿನ ಹೊಳೆ ಯೋಜನೆ ಮತ್ತು ಎಚ್.ಎನ್. ವ್ಯಾಲಿ ಯೋಜನೆ ಹೆಸರನ್ನು ಬಳಸಿ ಕೊಳ್ಳಲಾಗುತ್ತಿತ್ತು. ಆದರೆ, ಇದೀಗ ಆಂಧ್ರದ ಕೃಷ್ಣ ನದಿಯಿಂದ 10 ಟಿಎಂಸಿ ನೀರು ತರಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಎಂದಿನಂತೆ ಸಂಸದ ಎಂ. ವೀರಪ್ಪ ಮೊಯ್ಲಿ ನೀರಾವರಿಯ ಹೊಸ ಭರವಸೆ ನೀಡಿದ್ದಾರೆ. ಗಂಗೆಯಲ್ಲಿ ಮಿಂದು ಪುನೀತನಾಗಬೇಕೆಂಬ ಆಸೆ ಇಲ್ಲ. ಆದರೆ, ಈ ಭಾಗದಲ್ಲಿ ಶಾಶ್ವತ ನೀರಾವರಿ ಸೌಲಭ್ಯದಿಂದ ಹರಿಯುವ ನೀರಿನಲ್ಲಿ ಮಿಂದೇಳಬೇಕೆಂಬ ಆಶಯವಿದೆ ಎಂಬ ಮಾತನ್ನು ಹೇಳಿದ್ದಾರೆ. ಕಾಮಗಾರಿ ಭರದಿಂದ ನಡೆಯುತ್ತಿದ್ದರೂ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಎತ್ತಿನಹೊಳೆ ಯೋಜನೆ ತ್ವರಿತ ಅನುಷ್ಠಾನ ಸಾಧ್ಯವಾಗಲಿಲ್ಲ. ಇದರ ನಡುವೆ ಎಚ್.ಎನ್. ವ್ಯಾಲಿ ನೀರು ಪೂರೈಕೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಆದ್ದರಿಂದಲೇ ಎರಡು ಯೋಜನೆಗಳ ಜತೆಗೆ ಕೃಷ್ಣಾ ನದಿ, ಮೇಕೆದಾಟು ಸೇರಿ ಸಮಗ್ರ ನೀರಾವರಿ ಯೋಜನೆಗಳಿಂದ ಬಯಲುಸೀಮೆ ಜಿಲ್ಲೆಯನ್ನು ಹಸಿರುಮಯ ಮಾಡುವುದಾಗಿ ಮೊಯ್ಲಿ ಹೋದಲೆಲ್ಲ ಹೇಳುತ್ತಿದ್ದಾರೆ.

ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ, ಬಿಎಸ್ಪಿ ಅಭ್ಯರ್ಥಿ ಸಿ.ಎಸ್. ದ್ವಾರಕಾನಾಥ್ ಸಹ ನೀರಾವರಿ ವಿಚಾರ ಬಿಟ್ಟಿಲ್ಲ. ಗೆದ್ದ ತಕ್ಷಣ ಮೋದಿ ಮೇಲೆ ಒತ್ತಡ ಹೇರಿ, ಎತ್ತಿನಹೊಳೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲಾಗುವುದು ಎನ್ನುತ್ತಿದ್ದಾರೆ ಬಚ್ಚೇಗೌಡ. ಇನ್ನೂ ಚುನಾವಣಾ ಪ್ರಚಾರದಲ್ಲಿ ನೀರಾವರಿ, ನಿರುದ್ಯೋಗ ಸಮಸ್ಯೆಯ ಪರಿಹಾರವೇ ಪ್ರಮುಖ ವಿಚಾರ ಎಂಬ ಮಾತನ್ನು ದ್ವಾರಕಾನಾಥ್ ಹೇಳುತ್ತಿದ್ದಾರೆ.

ದಶಕಗಳಿಂದಲೂ ರಾಜಕೀಯ ಪಕ್ಷಗಳ ನಾಯಕರು ನೀರಾವರಿ ಸೌಲಭ್ಯದ ಜಪ ಮಾಡುತ್ತಿದ್ದಾರೆ. ಆದರೆ, ಇದುವರೆಗೂ ನೀರು ಬಂದಿಲ್ಲ. ನಮ್ಮ ಸಂಕಷ್ಟ ದೂರವಾಗಿಲ್ಲ.

| ನಂದಿ ಮುನೇಗೌಡ, ರೈತ, ಚಿಕ್ಕಬಳ್ಳಾಪುರ

ನೀರಾವರಿಯೇ ಪ್ರಮುಖ ಪ್ರಚಾರ ಸರಕು

ಈ ಭಾಗದಲ್ಲಿ ನೀರಾವರಿ ಯೋಜನೆಯೇ ಪ್ರತಿ ಚುನಾವಣೆಯ ಪ್ರಚಾರದ ಸರಕು. ಯಾವುದೇ ಪಕ್ಷ ಭೇದಭಾವವಿಲ್ಲದೇ ಪ್ರತಿ ಅಭ್ಯರ್ಥಿ ಬಾಯಲ್ಲೂ ನೀರಾವರಿ ಸೌಲಭ್ಯ ಕಲ್ಪಿಸುವ ನುಡಿಮುತ್ತುಗಳು ಉದುರುತ್ತಿರುತ್ತವೆ. ಆದರೆ, ಇಲ್ಲಿಯವರೆಗೂ ಈಡೇರಿಲ್ಲ. ಲೋಕಸಭೆ, ವಿಧಾನಸಭೆ, ವಿಧಾನಪರಿಷತ್, ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಗಂಭೀರ ಸಮಸ್ಯೆಯನ್ನು ಪ್ರಸ್ತಾಪಿಸಿ ಮತ ಕೇಳಲಾಗಿದೆ. ಮಳೆ ಅಭಾವದ ನಡುವೆ ಇಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ದಿನೇದಿನೆ ಕೃಷಿ ಚಟುವಟಿಕೆ ಕಳೆಗುಂದುತ್ತಿದೆ. ಆದಾಯ ಮತ್ತು ಉದ್ಯೋಗವಿಲ್ಲದೆ ಕೃಷಿಕರು, ಕಾರ್ವಿುಕರು ವಲಸೆ ಹೋಗುತ್ತಿದ್ದಾರೆ. ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಫ್ಲೋರೈಡ್ ನೀರು ಸೇವಿಸಿದ ಬಹುತೇಕ ಜನರು ಮೂಳೆ ಸವೆತ, ಕೀಲುನೋವು, ದಂತ ಕ್ಷಯ, ಅಂಗವೈಕಲ್ಯ ಸೇರಿ ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ. ಈ ಸಮಸ್ಯೆಗೆ ಎರಡು ದಶಕಗಳಿಂದಲೂ ನ್ಯಾಯಯುತ ಪರಿಹಾರ ಕ್ರಮ ಕೈಗೊಂಡಿಲ್ಲ.