ಕೆಂಬೈಲು ಗದ್ದೆಗೆ ಹರಿಯಿತು ನೀರು!
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕೃಷಿ ಅಧಿಕಾರಿಗಳ ಸ್ಪಂದನೆ >

ಕೆಂಬೈಲು: ನೀರಿಲ್ಲದೆ ನಾಟಿ ಮಾಡಿ 15 ದಿನದಲ್ಲಿ ಒಣಗುತ್ತಿದ್ದ ಭತ್ತದ ಗದ್ದೆ ಬಯಲಿಗೆ ಸೌಪರ್ಣಿಕಾ ನದಿ ನೀರು ಹರಿದು ಬಂದಿದ್ದು, ರೈತರ ಮೊಗದಲ್ಲಿ ಸಂತಸದ ನಗು ಅರಳಿಸಿದೆ.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕೆಂಬೈಲು ಭತ್ತದ ಕೃಷಿ ನೀರಿನ ಸಮಸ್ಯೆ ಪರಿಹಾರ ಮಾಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ್ದಾರೆ. ಅನಂತರ ಸೌಪರ್ಣಿಕಾ ಏತ ನೀರಾವರಿ ಯೋಜನೆ ಮೂಲಕ ಚಾನಲ್‌ನಲ್ಲಿ ನೀರು ಹರಿಸಿದ್ದು, ಒಣಗುತ್ತಿದ್ದ ಭತ್ತದ ಗದ್ದೆಯಲ್ಲಿ ಯಥೇಚ್ಛ ನೀರು ಸಂಗ್ರಹವಾಗಿದೆ. ಗದ್ದೆಗೆ ನೀರು ಹರಿದು ಬಂದಿದ್ದರಿಂದ ರೈತರಲ್ಲಿ ನೀರಿಕ್ಷೆಯ ಚಿಗುರೊಡೆದಿದೆ.

ಕೆಂಬೈಲು ಹಾಗೂ ಸೌಪರ್ಣಿಕಾ ಅಚ್ಚುಕಟ್ಟು ಪ್ರದೇಶಕ್ಕೆ ಶುಕ್ರವಾರ ಅಧಿಕಾರಿಗಳು ಭೇಟಿ ನೀಡಿ, ಹೆಮ್ಮುಂಜೆ ಬಳಿ ವ್ಯರ್ಥವಾಗಿ ಪೋಲಾಗುವ ನೀರು ಕೆಳಕ್ಕೆ ಹರಿಯುವಂತೆ ಮಾಡಿದ್ದಾರೆ. ಶನಿವಾರ ರಾತ್ರಿ ಚಾನಲ್ ಮೂಲಕ ಹರಿದು ಬಂದ ನೀರು ಕೆಂಬೈಲು ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿದ್ದು, ರೈತರು ನೀರು ಗದ್ದೆಗೆ ಹರಿಸಿದ್ದಾರೆ. ಸಂಗ್ರವಾಗಿದ್ದ ನೀರು ನೂರಾರು ಎಕರೆ ಭತ್ತದ ಗದ್ದೆಗೆ ಸಾಕಷ್ಟು ಹರಿಸಲಾಗಿದೆ.

ವಿಜಯವಾಣಿ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ: ‘ಕೆಂಬೈಲು ಭತ್ತದ ಪೈರು ಕೆಂಬಣ್ಣಕ್ಕೆ’ ಎಂಬ ತಲೆ ಬರಹದಲ್ಲಿ ವಿಜಯವಾಣಿ ಸುದ್ದಿ ಪ್ರಕಟಿಸಿದ್ದು, ಸುದ್ದಿ ನೋಡಿದ ಜಿಲ್ಲಾಧಿಕಾರಿ ಕೃಷಿ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರ ಮಾಡುವಂತೆ ಸೂಚಿಸಿದ್ದರು. ಅಲ್ಲದೆ ‘ವಿಜಯವಾಣಿ’ ಜತೆ ದೂರವಾಣಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕೆಂಬೈಲು ಕೃಷಿ ನೀರಿನ ಸಮಸ್ಯೆ ಪರಿಹಾರ ಮಾಡುವ ಜತೆ ಕೃಷಿ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ಕೊಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು.

ಶೆಡ್ ದುಸ್ತಿಗೆ ಆಗ್ರಹ: ಕೆಂಬೈಲು ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹವಾದರೂ ಹಲಗೆ ಜೋಡಿಸುವ ಶೆಡ್ ಅಪಾಯಕಾರಿಯಿದ್ದು, ಶೆಡ್ ದುರಸ್ತಿ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಕೆಂಬೈಲು ಕಿಂಡಿ ಆಣೆಕಟ್ಟು ಬದಿಯಲ್ಲಿ ನಿರ್ಮಿಸಿದ ಶೆಡ್‌ನ ತಳಪಾಯ ದೊಡ್ಡ ಗಾತ್ರದಲ್ಲಿ ಬಿರುಕು ಬಿಟ್ಟಿದೆ. ಗೋಡೆಗಳಿಗೆ ಸಿಮೆಂಟ್ ಗಿಲಾಯಿ ಮಾಡದೆ ಹಾಗೆ ಉಳಿಸಿಕೊಂಡಿದ್ದು, ನೆಲಕ್ಕೆ ಬೆಡ್ ಹಾಕದೆ ಬಿಟ್ಟಿದ್ದರಿಂದ ಹಲಗೆಗೆ ಗೆದ್ದಲು ಹಿಡಿದು ಹಾಳಾಗುವ ಸಂಭವವಿದೆ ಕೂಡಲೆ ದುರಸ್ತಿಗೊಳಿಸುವಂತೆ ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.