ಉಡುಪಿ: ಉಡುಪಿ ನಗರದಲ್ಲಿ ಅವಧಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ನಗರದ ಬಹುತೇಕ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಎರಡು ದಿನಕ್ಕೊಮ್ಮೆ ನೀರು ಬರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ವಾರ್ಡ್‌ನ ಜನಪ್ರತಿನಿಧಿಗಳಿಗೆ ಸ್ಥಳೀಯರು ಕರೆ ಮಾಡಿ ನೀರು ಬರುತ್ತಿಲ್ಲ ಎಂದು ದೂರು ನೀಡುತ್ತಿದ್ದಾರೆ. ನಗರದ ಎತ್ತರ ಪ್ರದೇಶ ಸೇರಿದಂತೆ ಕೆಲವು ವಾರ್ಡ್‌ಗಳಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ಮಣಿಪಾಲ ಈಶ್ವರನಗರ ವಾರ್ಡ್‌ನಲ್ಲಿ ರಾತ್ರಿ 12ರಿಂದ ಬೆಳಗ್ಗೆ 6ರವರೆಗೆ ಮಾತ್ರ ನೀರು ಬರುತ್ತಿದೆ. ಕೆಲವರಿಗೆ ಸಮಸ್ಯೆ ಗೊತ್ತಾಗದೆ ಒಂದೊಂದು ದಿನ ಬಳಕೆಗೆ ನೀರೇ ಸಿಕ್ಕಿಲ್ಲ. ಕುಂಜಿಬೆಟ್ಟು ವಾರ್ಡ್ ರವೀಂದ್ರ ಠಾಕೂರ್ ರಸ್ತೆ, ವಾದಿರಾಜ 3ನೇ ಅಡ್ಡರಸ್ತೆ, ಕಟ್ಟೆ ಆಚಾರ್ಯ ಮಾರ್ಗದಲ್ಲಿ ನಿಧಾನವಾಗಿ ಬರುತ್ತಿದೆ. ದೊಡ್ಡಣಗುಡ್ಡೆ ಪರಿಸರದಲ್ಲಿ ನೀರು ವ್ಯವಸ್ಥಿತವಾಗಿ ಬರುತ್ತಿಲ್ಲ ಎಂದು ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರ್ವಹಣೆ ವೈಫಲ್ಯ: ನೀರು ಪೂರೈಕೆ ಗುತ್ತಿಗೆ ಪಡೆದ ಸಂಸ್ಥೆ ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಹೀಗಾಗುತ್ತಿದೆ ಎಂದು ಜನಪ್ರತಿನಿಧಿಗಳು ದೂರಿದ್ದಾರೆ. ಆಪರೇಟಿಂಗ್ ವ್ಯವಸ್ಥೆ ಸರಿಯಾಗಿ ನಡೆಯದ ಬಗ್ಗೆ ಪೌರಾಯುಕ್ತರ ಬಳಿಯೂ ಚರ್ಚಿಸಿದ್ದಾರೆ. 20 ದಿನಗಳಿಂದ ಸಮಸ್ಯೆ ಇದೆ. ಬಜೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದು, ಇಷ್ಟು ಶೀಘ್ರ ಯಾಕೆ ನೀರು ಪೂರೈಕೆ ಕಡಿತಗೊಳಿಸುತ್ತಿರುವುದು ಎಂದು ಜನ ಪ್ರಶ್ನಿಸುತ್ತಿದ್ದಾರೆ. ಕಾರ್ಕಳ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಮಳೆಯಾದ್ದರಿಂದ ಕಾರ್ಕಳ, ಶಿರೂರು ಡ್ಯಾಂ ಮೂಲಕ ಬಜೆ ಡ್ಯಾಂವರೆಗೆ ಸ್ವರ್ಣ ನದಿ ಹರಿಯುವಿಕೆ ಇನ್ನೂ ನಿಂತಿಲ್ಲ. ಬಜೆ ಡ್ಯಾಂನಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ.
ವಿದ್ಯುತ್ ಸ್ಥಗಿತದಿಂದ ಸಮಸ್ಯೆ: ನಗರದಲ್ಲಿ ನೀರಿನ ಸಮಸ್ಯೆ ತಲೆದೋರಲು ಒಂದು ದಿನ ವಿದ್ಯುತ್ ಸ್ಥಗಿತಗೊಂಡಿರುವುದು ಕಾರಣ ಎನ್ನಲಾಗುತ್ತಿದೆ. ವಾರದ ಹಿಂದೆ ಮೆಸ್ಕಾಂ ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಳ್ಳುವ ಸಲುವಾಗಿ ಬಜೆ ಡ್ಯಾಂಗೆ ಬೆಳಗ್ಗೆ 9ರಿಂದ ಸಾಯಂಕಾಲ 6ರ ತನಕ ವಿದ್ಯುತ್ ಸ್ಥಗಿತಗೊಳಿಸಿತ್ತು. ಪರಿಣಾಮ ಒಂದು ದಿನ ನೀರು ಪಂಪಿಂಗ್ ನಡೆದಿರಲಿಲ್ಲ. ಇದು ಯಥಾಸ್ಥಿತಿಗೆ ಬರಲು ನಾಲ್ಕೈದು ದಿನ ಬೇಕಾಯಿತು. ಈ ಹಿನ್ನೆಲೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ನಗರಸಭೆ ಮೂಲಗಳಿಂದ ತಿಳಿದು ಬಂದಿದೆ.
ಬಜೆ ಡ್ಯಾಂ ಲೀಕೇಜ್ ?: ಕೆಲವು ದಿನಗಳಿಂದ ಬಜೆ ಡ್ಯಾಂ ಲೀಕೇಜ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿದಾಡುತ್ತಿದೆ. ಇದನ್ನು ನಗರಸಭೆ ಇಂಜಿನಿಯರ್‌ಗಳು ನಿರಾಕರಿಸಿದ್ದಾರೆ. ಕೆಳ ಬದಿಯಲ್ಲಿ ಬಜೆ ಡ್ಯಾಂಗೆ ಸಮೀಪದಲ್ಲಿರುವ ಖಾಸಗಿ ವಿದ್ಯುತ್ ಉತ್ಪಾದಿಸುವ ಸಂಸ್ಥೆಯೊಂದರ ಚೆಕ್‌ಡ್ಯಾಂನ ಹಲಗೆಗಳು ಮುರಿದು ನೀರು ಸೋರಿಕೆಯಾಗುತ್ತಿದೆ. ಇದನ್ನೇ ಬಜೆ ಡ್ಯಾಂ ಸೋರಿಕೆ ಎಂದು ಬಿಂಬಿಸಲಾಗುತ್ತಿದೆ. ಲೀಕೇಜ್ ಸರಿಪಡಿಸಲು ಆ ಸಂಸ್ಥೆಗೆ ಸೂಚಿಸಿದ್ದೆವು, ಅವರಿನ್ನೂ ಸರಿಪಡಿಸಿಲ್ಲ. ಅದನ್ನು ಸರಿಪಡಿಸಿದಲ್ಲಿ 3 ಅಡಿ ನೀರಿನ ಸಂಗ್ರಹ ಹೆಚ್ಚು ಸಿಗುತ್ತದೆ. ಅನಿವಾರ್ಯವಾಗಿ ನಾವೇ ಅದನ್ನು ಸರಿಪಡಿಸಲು ಮುಂದಾಗಿದ್ದೇವೆ ಎನ್ನುತ್ತಾರೆ ನಗರಸಭೆ ಇಂಜಿನಿಯರ್‌ಗಳು.
ಉಡುಪಿ ನಗರಕ್ಕೆ ನೀರಿನ ಪೂರೈಕೆಯಲ್ಲಾಗುತ್ತಿರುವ ಸಮಸ್ಯೆ ಬಗ್ಗೆ ಸದಸ್ಯರು, ಪೌರಾಯುಕ್ತರು ಸೇರಿ ಸಮಾಲೋಚನೆ ನಡೆಸಿದ್ದೇವೆ. ಈ ಬಗ್ಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಮೋಹನ್‌ರಾಜ್, ಇಂಜಿನಿಯರ್, ಉಡುಪಿ ನಗರಸಭೆ
ಉಡುಪಿ ನಗರ ವ್ಯಾಪ್ತಿಯಲ್ಲಿ ಎರಡು ತಿಂಗಳಿಂದ ಕುಡಿಯುವ ನೀರಿನ ನಿರ್ವಹಣಾ ವೈಫಲ್ಯದಿಂದ ಹಲವು ಭಾಗಗಳಲ್ಲಿ ನೀರು ಸರಬರಾಜು ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಪೌರಾಯುಕ್ತರಲ್ಲಿ ಚರ್ಚಿಸಲಾಗಿದ್ದು, ಶೀಘ್ರ ಸರಿಪಡಿಸುವ ಭರವಸೆ ನೀಡಿದ್ದಾರೆ.
ಮಂಜುನಾಥ ಮಣಿಪಾಲ, ನಗರಸಭೆ ಸದಸ್ಯ
ಕುಂಜಿಬೆಟ್ಟು ವಾರ್ಡ್‌ನಲ್ಲಿ 20 ದಿನಗಳಿಂದ ಸಮಸ್ಯೆ ಕಾಣಿಸಿಕೊಂಡಿದೆ. ದಿನಬಿಟ್ಟು ದಿನ ನೀರು ಬಿಡುವುದು, ಒತ್ತಡ ಇಲ್ಲದೆ ನಿಧಾನವಾಗಿ ಬರುತ್ತಿದೆ. ಸ್ಥಳೀಯರು ದಿನವೂ ಕರೆ ಮಾಡಿ ದೂರು ಹೇಳುತಿದ್ದಾರೆ.
ಗಿರೀಶ್ ಅಂಚನ್, ನಗರಸಭೆ ಸದಸ್ಯ