More

    ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ

    ಸೋಮವಾರಪೇಟೆ: ಸಕಲ ಜೀವರಾಶಿಗೂ ಅಗತ್ಯವಾಗಿರುವ ನೀರಿನ ಮಹತ್ವವನ್ನು ಎಲ್ಲರೂ ಅರಿತುಕೊಂಡು, ಅದರ ಸಂರಕ್ಷಣೆಗೆ ಮುಂದಾಗಬೇಕು ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಗೋಪಾಲಕೃಷ್ಣ ಕರೆ ನೀಡಿದರು.


    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯಿತಿ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಪೋಲು ಕಂಡುಬಂದರೆ ತಕ್ಷಣ ಸರಿಪಡಿಸಬೇಕು. ಸರ್ಕಾರಗಳು ಜಾರಿಗೊಳಿಸುವ ಕಾನೂನು ಹಾಗೂ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಜೀವ ಜಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.


    ವಕೀಲರಾದ ಎಚ್.ಎಸ್.ವೆಂಕಟೇಶ್ ಮಾತನಾಡಿ, ಜಲಮೂಲಗಳ ಸಂರಕ್ಷಣೆಯೊಂದಿಗೆ, ಹಸಿರೀಕರಣಕ್ಕೆ ಆದ್ಯತೆ ನೀಡಬೇಕು. ದಿನಬಳಕೆಯಲ್ಲಿ ನೀರಿನ ಮಿತವ್ಯಯ ಮಾಡಬೇಕು. ನೀರಿನ ಪುನರ್ಬಳಕೆಗೆ ಹೆಚ್ಚು ಒತ್ತು ನೀಡಬೇಕು. ಹಸಿರು ಉಳಿದರೆ ಮಾತ್ರ ನೀರು, ನೀರಿದ್ದರೆ ಮಾತ್ರ ಜೀವನ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.


    ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಮಾತನಾಡಿ, ನೀರಿನ ಮಾಲಿನ್ಯ ತಡೆಗಟ್ಟುವಲ್ಲಿ ಎಲ್ಲರೂ ಜವಾಬ್ದಾರಿ ತೋರಬೇಕು. ಕೆರೆ, ಹೊಳೆ, ನದಿ, ತೊರೆಗಳ ಸಂರಕ್ಷಣೆ ಆಗಬೇಕು. ಸರ್ಕಾರದ ಮಳೆ ನೀರು ಸಂಗ್ರಹ, ಕೆರೆ ನಿರ್ಮಾಣ, ಇಂಗು ಗುಂಡಿಯಂತಹ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಭಿಪ್ರಾಯಿಸಿದರು.


    ತಾಲೂಕು ತಹಸೀಲ್ದಾರ್ ನವೀನ್‌ಕುಮಾರ್ ಮಾತನಾಡಿ, ಜಲ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಎಂದು ಭಾವಿಸದೇ ಸಾರ್ವಜನಿಕರೂ ಸಹ ಸಾಮೂಹಿಕ ಜವಾಬ್ದಾರಿ ನಿರ್ವಹಿಸಬೇಕು ಎಂದರು.

    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts