ನೀರಿನ ಸಂರಕ್ಷಣೆ, ಅಂತರ್ಜಲ ವೃದ್ಧಿ ಅವಶ್ಯಕ

ಬೆಳಗಾವಿ: ದೇಶದಲ್ಲಿ ನೀರಿನ ಕೊರತೆ ಉಂಟಾಗದಂತೆ ಮುಂಜಾಗ್ರತೆಯಾಗಿ ನೀರಿನ ಸಂರಕ್ಷಣೆ, ಅಂತರ್ಜಲ ಮಟ್ಟ ವೃದ್ಧಿಸುವ ಸಲುವಾಗಿ ಕೇಂದ್ರ ಸರ್ಕಾರ ಜುಲೈ 1 ರಿಂದ ದೇಶಾದ್ಯಂತ ಜಲ ಶಕ್ತಿ ಅಭಿಯಾನ ಆರಂಭಿಸಿದೆ ಎಂದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಜಿ ಸಿ. ಹೊಸೂರು ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಲಶಕ್ತಿ ಯೋಜನೆ ಅನುಷ್ಠಾನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆ ಸಂದರ್ಭದಲ್ಲಿ ನೀರನ್ನು ಸಂರಕ್ಷಣೆ ಮಾಡಿಕೊಂಡು ಬೇಸಿಗೆ ಸಮಯದಲ್ಲಿ ಬಳಕೆ ಮಾಡಲು ನೀರಿನ ರಕ್ಷಣೆಗಾಗಿ ಚೆಕ್ ಡ್ಯಾಂ, ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಅಳವಡಿಸುವುದು ಸೇರಿದಂತೆ ಇನ್ನಿತರ ಮಾಹಿತಿಗಾಗಿ ಜಲಜನಾಂದೋಲನ ಮಾಡಲಾಗುತ್ತಿದೆ ಎಂದರು.

ಈಗಾಗಲೇ 2019-20ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಜಲಶಕ್ತಿ ಯೋಜನೆಯಲ್ಲಿ ಕೇಂದ್ರದಿಂದ 257 ಜಿಲ್ಲೆಯಲ್ಲಿ ಅಭಿಯಾನ ಆರಂಭವಾಗಿದ್ದು , ವರ್ಷದ ಅಂತ್ಯದವರೆಗೆ ನಿರಂತರವಾಗಿ ನಡೆಯಲಿದೆ. ಈ ಅಭಿಯಾನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಎನ್‌ಜಿಒಗಳು, ಸಂಘ ಸಂಸ್ಥೆಗಳು, ಭೂ ವಿಜ್ಞಾನಿಗಳು ಸೇರಿದಂತೆ ಸರ್ಕಾರಗಳ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇರುವ ಹನಿ ನೀರಾವರಿ ಪ್ರದೇಶ ಮತ್ತು ಮುಂದಿನ 3 ವರ್ಷಗಳಲ್ಲಿ ಹನಿ ನೀರಾವರಿಗೆ ಒಳಪಡಿಸಬಹುದಾದ ಪ್ರದೇಶ, ಇದಕ್ಕಾಗಿ ಎಷ್ಟು ಖರ್ಚಾಗಲಿದೆ ಎಂಬುದರ ಕುರಿತು ಮಾಹಿತಿ ನೀಡಬೇಕು. ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಮತ್ತು ನೀರನ್ನು ಮಿತವಾಗಿ ಬಳಸಿಕೊಳ್ಳಲು ಯಾವ ಕಾರ್ಯಕ್ರಮ ರೂಪಿಸಲಾಗಿದೆ ಎಂಬುದರ ಕುರಿತು ಜಲಮಂಡಳಿ, ಗ್ರಾಮೀಣ ಕುಡಿಯುವ ನೀರಿನ ಇಲಾಖೆಗಳು ಸಮಗ್ರ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಕಚೇರಿ, ಶಾಲೆ, ಕಾಲೇಜುಗಳ ಕಟ್ಟಡಗಳಲ್ಲಿ ಹಾಗೂ ನಿವೇಶನಗಳಿಗೆ ಮಳೆ ನೀರು ಕೊಯ್ಲು ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು. ಅಂತರ್ಜಲಮಟ್ಟ ಹೆಚ್ಚಿಸುವ ಯೋಜನೆ ರೂಪಿಸುವ ವೇಳೆ ಸ್ಥಳೀಯ ರೈತರು, ಜನರ ಅಭಿಪ್ರಾಯ, ಸಲಹೆ ಪಡೆದುಕೊಳ್ಳಬೇಕು. ನೀರು ಉಳಿತಾಯಕ್ಕಾಗಿ ಎಲ್ಲ ಇಲಾಖೆಗಳು ಪ್ರತ್ಯೇಕ ಯೋಜನೆ ರೂಪಿಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಈಗಾಗಲೇ ನರೇಗಾ ಉದ್ಯೋಗ ಖಾತ್ರಿಯಲ್ಲಿಯೂ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯ ನಡೆಯುತ್ತಿವೆ. ನದಿ ಹೂಳೆತ್ತುವುದು. ಜಲಾಮೃತ ಯೋಜನೆ ಕೈಗೊಂಡು ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪಡೆಯಲಾಗಿದೆ.ಕೃಷಿ, ತೋಟಗಾರಿಕೆ ಇಲಾಖೆಗಳ ಮೂಲಕ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ. ಕೆರೆ, ಕಾಲುವೆಗಳನ್ನು ಅಭಿವೃದ್ಧಿ ಪಡಿಸಿ ಮಳೆ ನೀರು ಸಂಗ್ರಹ ಮಾಡಲಾಗುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಸಭೆಗೆ ವಿವರಿಸಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಕಬ್ಬು ಬೆಳೆಗೆ ಹನಿ ನೀರಾವರಿ ಅಳವಡಿಸಿದ್ದಲ್ಲಿ ನೀರು ಪೋಲಾಗುವುದನ್ನು ನಿಯಂತ್ರಿಸಬಹುದು. ಇಲ್ಲದಿದ್ದರೆ ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಅತಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ರಾಮದುರ್ಗ, ಸವದತ್ತಿ ಹಾಗೂ ಅಥಣಿ ತಾಲೂಕಿನ ಹೆಚ್ಚಾಗಿ ಕಾಮಗಾರಿ ಕೈಗೆತ್ತಿಗೊಳ್ಳಬೇಕು ಎಂದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಳೆ ನೀರು ಕೊಯ್ಲು ಮಾಡಿದ ಕಟ್ಟಡಗಳಿಗೆ ಸಿಸಿ ಕೊಡಬೇಡಿ. ಸ್ಥಳೀಯ ಸಂಸ್ಥೆಗಳು ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡುವ ವೇಳೆ ಮಳೆ ನೀರು ಕೊಯ್ಲು ಅಳವಡಿಕೆ ಬಗ್ಗೆ ಕಡ್ಡಾಯಗೊಳಿಸಿ ಅನುಮತಿ ಕೊಡಿಸಬೇಕು. ಬಹುಮಹಡಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸುವುದು ಅವಶ್ಯಕ ಎಂದು ಹೇಳಿದರು.

ಕೇಂದ್ರ ಸರ್ಕಾರದ ನೀರಾವರಿ ಇಲಾಖೆ ಇಂಜಿನಿಯರ್ ಸುಂದರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ, ಅರಣ್ಯ ಸಂರಕ್ಷಣಾ ಅಧಿಕಾರ ಅಮರನಾಥ, ಜಿಲ್ಲೆಯ ಎಲ್ಲ ತಾಪಂ ಇಒ, ತಾಲೂಕು ತಹಸೀಲ್ದಾರಗಳು , ಪ್ಯಾಸ್ ಫೌಂಡೇಷನ್ ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಜಲ ಸಂರಕ್ಷಣೆಗಾಗಿ ಸ್ಪರ್ಧೆಗಳು

ಜಲ ಸಂರಕ್ಷಣೆ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜು.15ರಿಂದ ಜಿಲ್ಲೆಯಲ್ಲಿನ ಎಲ್ಲ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ಚರ್ಚಾ ಕೂಟ ಆಯೋಜಿಸಬೇಕು. ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಸೆಪ್ಟೆಂಬರ್ 3 ರಿಂದ ನೀರಿನ ಸಂರಕ್ಷಣೆ ಕುರಿತು ಅಭಿಯಾನ ಆಯೋಜಿಸಿ ಹೆಚ್ಚು ಜನರು ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಡಿಡಿಪಿಐಗಳಿಗೆ ಜಂಟಿ ಕಾರ್ಯದರ್ಶಿ ಜಿ ಸಿ. ಹೊಸೂರು ಸೂಚಿಸಿದರು.

ಜಿಲ್ಲೆಯಲ್ಲಿ ಹಳೆ ಬಾವಿಗಳನ್ನು, ಕೆರೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ನಾಲಾಗಳು, ಕೆರೆ, ಬಾವಿಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಭವಿಷ್ಯದ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಇಂದಿನಿಂದಲೇ ನೀರಿನ ಸಂರಕ್ಷಣೆ ಅಭಿಯಾನ ನಡೆಯಬೇಕು.
| ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ

ನರೇಗಾ ಯೋಜನೆಯಡಿ ಕೈಗೊಳ್ಳುವ ರಸ್ತೆ, ಹೂಳೆತ್ತುವ ಇನ್ನಿತರರ ಕಾಮಗಾರಿಗಳು ಮುಗಿದ ಬಳಿಕ ಕಡ್ಡಾಯ ಸಸಿಗಳನ್ನು ನೆಡಬೇಕು. ಲಭ್ಯವಿರುವ ಸರ್ಕಾರದ ಜಮೀನುಗಳಲ್ಲಿ ಸಣ್ಣ ಹೊಂಡಗಳನ್ನು ನಿರ್ಮಿಸಿ ನೀರು ಸಂರಕ್ಷಣೆ ಮಾಡಬೇಕು.
| ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ