ನೀರಿಗೆ ಸವಾಲೆಸೆದ ನೀರೆ

| ಅಕ್ಕಪ್ಪ ಮಗದುಮ್ಮ ಬೆಳಗಾವಿ

ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುತ್ತದೆ, ಉನ್ನತ ಶಿಕ್ಷಣಕ್ಕೆ ಹಿನ್ನಡೆಯಾಗುತ್ತದೆ, ಕ್ರೀಡಾ ಪಟುಗಳಿಗೆ ಭವಿಷ್ಯವೇ ಇಲ್ಲ ಎನ್ನುವುದು ಬಹುತೇಕ ಪಾಲಕರ ಭಾವನೆ. ಆದರೆ, ಇದಕ್ಕೆ ಅಪವಾದವೆಂಬಂತೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಯುವತಿ ಶ್ರೀದೇವಿ ಮಿರಜ್ಕರ್ ಶಿಕ್ಷಣದೊಂದಿಗೆ ಯೋಗ ಹಾಗೂ ಜಲಯೋಗದಲ್ಲಿ ಪ್ರಾವೀಣ್ಯತೆ ಹೊಂದಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆೆ.

10 ನಿಮಿಷಗಳಲ್ಲಿ ನೂರಾರು ಪ್ರಕಾರಗಳ ಯೋಗ ಹಾಗೂ ಜಲಯೋಗಗಳನ್ನು ಪ್ರದರ್ಶಿಸುವಲ್ಲಿ ಇವರು ನಿಸ್ಸೀಮರು. ಬಾಲ್ಯದಿಂದಲೂ ಯೋಗ ಮತ್ತು ಜಲಯೋಗಾಭ್ಯಾಸ ಕರಗತ ಮಾಡಿಕೊಂಡಿರುವ ಇವರು, ಮೈಮೂಳೆಗಳನ್ನು ಒಂದುಗೂಡಿಸಿ ನೋಡುಗರು ನಿಬ್ಬೆರಗಾಗುವಂತೆ 100ಕ್ಕೂ ಹೆಚ್ಚು ಯೋಗ ಪ್ರದರ್ಶನ ಮಾಡುತ್ತಾರೆ. ಈಜುಕೊಳಕ್ಕೆ ಇಳಿದರೆ 5-6 ತಾಸಿಗೂ ಹೆಚ್ಚು ಕಾಲ ಉಸಿರು ಹಿಡಿದಿಟ್ಟುಕೊಂಡು ನೀರಿನ ಮೇಲೆ ಬಿಳಿಹಾಳೆ ತೇಲಿದಂತೆ ಶರೀರವನ್ನು ತೇಲಿಬಿಟ್ಟು ಹಲವು ಬಗೆಯ ಜಲಯೋಗ ಮಾಡುತ್ತಾರೆ. ಜಲಯೋಗವು ಜಲ, ಜೀವ-ದೇವ ಮೂರರ ಸಂಯೋಜನೆ. ಸದೃಢ ಶರೀರ, ಮಾನಸಿಕ ನೆಮ್ಮದಿ, ಚುರುಕು ತನ, ಮನಸ್ಸು ಕೇಂದ್ರೀಕರಣ ಜಲಯೋಗದಿಂದ ಸಿದ್ಧಿ.

ಶ್ರೀದೇವಿ ಅವರು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿದ್ದಾರೆ. ಕಲಬುರಗಿಯ ಭರತ್ ಭೂಷಣ ಅವರ ಬಳಿ ಯೋಗ ಹಾಗೂ ಬೆಳಗಾವಿಯ ಕೆಎಲ್​ಇ ಸಂಸ್ಥೆಯ ಈಜು ತರಬೇತುದಾರ ಉಮೇಶ ಕಲಘಟಗಿ ಅವರಿಂದ ಜಲಯೋಗ ತರಬೇತಿ ಪಡೆದಿದ್ದು, ಸದ್ಯ ಬೆಳಗಾವಿ ಜಿಲ್ಲೆ ಚನ್ನಮ್ಮ ಕಿತ್ತೂರಿನ ಮಹಿಳಾ ಸೈನಿಕ ಶಾಲೆಯಲ್ಲಿ ಯೋಗ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದಾರೆ. ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ದರ್ಜೆ ಹಾಗೂ ಬಿಎ ಪದವಿಯಲ್ಲಿ ಶೇ.82 ಅಂಕ ಗಳಿಸುವ ಮೂಲಕ ಯೋಗಪಟು ಶ್ರೀದೇವಿ, ಕ್ರೀಡೆಯೊಂದಿಗೆ ವಿದ್ಯಾಭ್ಯಾಸದಲ್ಲೂ ಸಾಧನೆ ಮಾಡಿದ್ದಾರೆ.

ಯಾವ್ಯಾವ ಯೋಗಾಸನ? ಶ್ರೀದೇವಿ ಅವರು ದೃಷ್ಟಿಯೋಗ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಪ್ರತ್ಯಾಹಾರ, ಕುಂಡಲಿನಿ, ಗಂಡಭೇರುಂಡಾಸನ, ತ್ರಿಪುರಾಸನ, ಭೂಮಾಸನ, ಕೋಕಿಲ ಕಂಠಾಸನ, ಹನುಮವಾಲಿ ಕೀಲಾಸನ, ನಟರಾಜಾಸನ, ದೀಪಾಸನ, ಶಲಬಾಸನ, ಧನುರಾಸನ, ಹನುಮಜಾನು ಶೀರ್ಷಾಸನ, ಟಿಟ್ಟಿಭಾಸನ, ಯೋಗ ದಂಡ ಕೌಂಡ್ಯಾಸನ ಸೇರಿ ನೂರಕ್ಕೂ ಹೆಚ್ಚು ಯೋಗಾಸನಗಳ ಕರಗತ ಮಾಡಿಕೊಂಡಿದ್ದಾರೆೆ. ‘ಯೋಗದಿಂದ ರೋಗಮುಕ್ತ ಜೀವನ ನಡೆಸಬಹುದು. ಪ್ರತಿದಿನ ಯೋಗ ಮಾಡುವುದರಿಂದ ಸದೃಢ ಶರೀರ, ಮಾನಸಿಕ ನೆಮ್ಮದಿ, ಚುರುಕುತನ, ಲವಲವಿಕೆ, ಸಮಚಿತ್ತತೆ, ಮಾನಸಿಕ ಸ್ಥಿರತೆ ಜತೆಗೆ ಮನೋಲ್ಲಾಸಗೊಳ್ಳುತ್ತದೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ: 7892437680

ಯೋಗವೇ ನನ್ನ ಉಸಿರು. ಯೋಗ ಆರೋಗ್ಯ ಕಾಪಾಡಿದರೆ, ಜಲಯೋಗ ದೇಹವನ್ನು ಸಮತೋಲನದಿಂದ ರಕ್ಷಿಸುತ್ತದೆ. ಇವುಗಳಿಂದ ಮನುಷ್ಯನಲ್ಲಿ ಏಕಾಗ್ರತೆ ಹೆಚ್ಚುತ್ತದೆ. ನನ್ನಂತೆಯೇ ಮಕ್ಕಳೂ ಆರೋಗ್ಯಂತ ಜೀವನ ನಡೆಸಲಿ ಎನ್ನುವ ಉದ್ದೇಶದಿಂದ ಉಚಿತ ಯೋಗ ಮತ್ತು ಜಲಯೋಗ ತರಬೇತಿ ನೀಡುತ್ತಿದ್ದೇನೆ.

| ಶ್ರೀದೇವಿ ಮಿರಜ್ಕರ್ ಯೋಗ ಮತ್ತು ಜಲಯೋಗಪಟು

ಮಕ್ಕಳಿಗೆ ಉಚಿತ ತರಬೇತಿ

ಯೋಗ, ಜಲಕ್ರೀಡೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಶ್ರೀದೇವಿ ವಾರದ ನಾಲ್ಕು ದಿನ ಮಹಿಳಾ ಸೈನಿಕ ಶಾಲೆ ವಿದ್ಯಾರ್ಥಿನಿಯರಿಗೆ ಯೋಗ ಹಾಗೂ ಜಲಕ್ರೀಡೆ ತರಬೇತಿ ನೀಡುತ್ತಾರೆ.ಪ್ರತಿ ಶನಿವಾರ ಹಾಗೂ ಭಾನುವಾರ ವಿವಿಧ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಜಲಯೋಗ ತರಬೇತಿ ನೀಡುತ್ತಾರೆೆ. ಶಾಲೆಯ ರಜಾ ದಿನಗಳಲ್ಲಿ ಇಡೀ ದಿನ ಈಜುಕೊಳದಲ್ಲೇ ಬಿಜಿಯಾಗಿರುವ ಇವರು ಮಕ್ಕಳಿಗೆ ದಸ್ತಪಾದಾಂಗುಷ್ಠಾಸನ, ಉಷ್ಟ್ರಾಸನ, ಸೂರ್ಯ ನಮಸ್ಕಾರ, ಧುವಾಸನ, ಅನಂತಾಸನ, ಭ್ರೂಣಮಾಸನ, ಸಮಸ್ಥಿತಿ, ವಜ್ರಾಸನ, ಪದ್ಮಾಸನ, ಸುಪ್ತ ವಜ್ರಾಸನ, ಸಿದ್ಧಾಸನ, ಉತ್ಕಟಾಸನ, ಮತ್ಸಾ್ಯಸನ, ಅಧೋಮುಖಿ ಮತ್ಸಾ್ಯಸನ, ವೃಕಾಸನ ಸೇರಿ ಹಲವು ಜಲಯೋಗವನ್ನು ಕಲಿಸಿಕೊಡುತ್ತಾರೆ. ಇವರ ವಿದ್ಯಾರ್ಥಿಗಳು ಯೋಗ ಹಾಗೂ ಜಲಕ್ರೀಡೆಯಲ್ಲಿ ಪಾಲ್ಗೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ.