ನೀರಿನ ಬಾಟಲಿಗಳಲ್ಲಿರುತ್ತವೆ ರೋಗಕಾರಕ ಬ್ಯಾಕ್ಟೀರಿಯಾ !

ದಿನಕ್ಕೆ ಮೂರು ಲೀಟರ್​ ನೀಡು ಕುಡಿದರೆ ಆರೋಗ್ಯದಿಂದ ಇರಬಹುದು. ಹಾಗಾಗಿ ಹೊರಗೆ ಹೋಗುವಾಗ, ಕೆಲಸಕ್ಕೆ ಹೋಗುವಾಗ ಒಂದು ಬಾಟಲಿ ಕಾಯಂ ಇರಲೇ ಬೇಕು. ಅಲ್ಲಿಇಲ್ಲಿ ನೀರು ಕುಡಿದರೆ ಮತ್ತೆ ಆರೋಗ್ಯ ಕೆಡಬಹುದು ಎಂದುಕೊಳ್ಳುತ್ತೇವೆ. ಆದರೆ ಬಾಟಲಿಗಳಿಂದ ಕುಡಿಯುವ ನೀರಿನಿಂದಲೂ ರೋಗ ಬರಬಹುದು.

ಪ್ಲಾಸ್ಟಿಕ್​ ಬಾಟಲಿಗಳಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ತೊಂದರೆ ಎಂಬುದು ತಿಳಿದಿದೆ. ಆದರೆ ಸ್ಟೀಲ್​, ಗಾಜಿನ ಬಾಟಲಿಗಳಲ್ಲಿ ಸಹ ರೋಗಕಾರಕ ಅಂಶಗಳು ಸೇರುತ್ತವೆ.

ಹೆಚ್ಚಿನ ಜನರು ನೀರಿನ ಬಾಟಲಿಯನ್ನು ದಿನವೂ ತೊಳೆಯುವುದಿಲ್ಲ. ಖಾಲಿಯಾದಂತೆ ತುಂಬಿಸಿಕೊಂಡು ಕುಡಿಯುತ್ತಾರೆ. ಇನ್ನೂ ಕೆಲವರಂತೂ ಸುಮ್ಮನೆ ನೀರು ಹಾಕಿ ಕುಲುಕಿ ಚೆಲ್ಲಿ ಮತ್ತೆ ಕುಡಿಯುವ ನೀರು ತುಂಬಿಸಿಕೊಳ್ಳುತ್ತಾರೆ. ಆದರೆ ಈ ಕ್ರಮ ಕಾಯಿಲೆಯನ್ನು ತರಬಹುದು.

ನೀರಿನ ಬಾಟಲಿಗಳು ಯಾವಾಗಲೂ ಆರ್ಧ್ರವಾಗಿರುವುದರಿಂದ ಬ್ಯಾಕ್ಟೀರಿಯಾಗಳು ಹುಲುಸಾಗಿ ಬೆಳೆಯುತ್ತವೆ. ಈ ಬ್ಯಾಕ್ಟೀರಿಯಾಗಳು ಅತಿಸಾರ, ವಾಂತಿಗೆ ಕಾರಣವಾಗುತ್ತವೆ. ಇದರಲ್ಲಿ ಬೆಳೆಯುವ ಇ ಕೋಲಿಯಂಥ ಬ್ಯಾಕ್ಟೀರಿಯಾಗಳು ಕರುಳಿನ ಉರಿಯೂತ ಉಂಟುಮಾಡುವುದಲ್ಲದೆ, ಫುಡ್​ ಪಾಯ್ಸನಿಂಗ್​ ಆಗಬಹುದು.

ಹಾಗಾಗಿ ಬಳಸುತ್ತಿರುವ ಬಾಟಲಿಯನ್ನು ಪ್ರತಿನಿತ್ಯ ಶುದ್ಧವಾಗಿ ತೊಳೆಯಬೇಕು. ಬಾಟಲಿ ಸ್ವಚ್ಛಗೊಳಿಸಲು ಅನುಕೂಲವಾಗುವಂತೆ ಬ್ರಷ್​ಗಳು ಸಿಗುತ್ತವೆ. ಅದರಿಂದಲೇ ಶುದ್ಧಗೊಳಿಸಿ. ಅದರಲ್ಲೂ ಬಿಸಿನೀರು, ಡಿಶ್​ ವಾಶ್​ ಲಿಕ್ವಿಡ್​ಗಳಿಂದ ತೊಳೆಯಬೇಕು. ಬಾಟಲಿಯ ಮುಚ್ಚಲಗಳನ್ನೂ ಸರಿಯಾಗಿ ಕ್ಲೀನ್ ಮಾಡಲೇಬೇಕು. ವಿನಗರ್​ ಕೂಡ ಬಳಸಬಹುದು.