ಮದಗದಕೆರೆ ಕಾಲುವೆ ನೀರು ದುರ್ಬಳಕೆ, ಐವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಕಡೂರು: ತಾಲೂಕಿನ ಮದಗದಕೆರೆ ಕಾಲುವೆಯ ನೀರಿನ ದುರ್ಬಳಕೆ ಕುರಿತು ಪ್ರಶ್ನಿಸಲು ಹೋದ ಜನರ ಮೇಲೆ ಲಕ್ಕೇನಹಳ್ಳಿ ಗ್ರಾಮದಲ್ಲಿ ನೂರಾರು ಜನ ಏಕಾಏಕಿ ಹಲ್ಲೆ ನಡೆಸಿದ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ.

ಹಲ್ಲೆಗೊಳಗಾದ ಪಟ್ಟಣದ ಸುಭಾಷ್​ನಗರ ವಾಸಿಗಳಾದ ಬಸವರಾಜ್(43), ಸುರೇಶ್(46), ಮಂಜುನಾಥ್(35), ಪರಮೇಶ್(43), ಹಳೇಪೇಟೆ ವಾಸಿಗಳಾದ ಶಿವಕುಮಾರ್(43), ಮೋಹನ್​ಕುಮಾರ್(43) ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲವರು ವಾಡಿಕೆ ನೀರನ್ನು ಬಳಸಿಕೊಳ್ಳುತ್ತಿದ್ದರು. ತೂಬನ್ನು ಎತ್ತಿದ ಬಳಿಕ ಆ ನೀರನ್ನೂ ಬಳಸಿಕೊಂಡಿದ್ದರು ಎನ್ನಲಾಗಿದ್ದು ಇದನ್ನು ಕಡೂರು-ಬೀರೂರು ಅಡಕೆ ಬೆಳೆಗಾರರ ಸಂಘದ ಸದಸ್ಯರು ಪ್ರಶ್ನಿಸಲು ಹೋದಾಗ ಘಟನೆ ನಡೆದಿದೆ. ಗುಂಪೊಂದು ಕಾರದಪುಡಿ, ದೊಣ್ಣೆ, ಕಲ್ಲು ಮತ್ತಿತರ ಆಯುಧಗಳಿಂದ ಹಲ್ಲೆ ನಡೆಸಿದೆ. ಮಹಿಳೆಯರೂ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ: ಉಪವಿಭಾಗಾಕಾರಿ ಬಿ.ಆರ್.ರೂಪಾ, ಶಾಸಕ ಬೆಳ್ಳಿಪ್ರಕಾಶ್, ತಹಸೀಲ್ದಾರ್ ಉಮೇಶ್, ಸಣ್ಣ ನೀರಾವರಿ ಎಇಇ ಆನಂದನ್ ಮತ್ತು ಕಡೂರು-ಬೀರೂರು ಅಡಕೆ ಬೆಳೆಗಾರರ ಸಂಘದ ಸದಸ್ಯರನ್ನು ಒಳಗೊಂಡ ಸಭೆ ಇತ್ತೀಚೆಗೆ ನಡೆದು, ಮಾ. 8ರಂದು ಮದಗದಕೆರೆ ತೂಬನ್ನು ತೆರೆದು ಒಂದೂಕಾಲು ಅಡಿ ನೀರನ್ನು ಕಾಲುವೆಗೆ ಹರಿಸಲು ಪ್ರಾರಂಭಿಸಲಾಯಿತು.

ಈ ಹಿನ್ನೆಲೆಯಲ್ಲಿ ಕಾಲುವೆಯ ನೀರನ್ನು ದುರ್ಬಳಕೆ ಮಾಡಿಕೊಳ್ಳದಂತೆ ಅಡಕೆ ಬೆಳೆಗಾರರ ಸಂಘದ ಸದಸ್ಯರು ಪಾಳಿಯ ಮೇಲೆ ಚಾನಲ್ ನೀರನ್ನು ಗಮನಿಸಲು ನಿರ್ಧರಿಸಿದ್ದರು. ಅದರ ಪ್ರಕಾರ ಭಾನುವಾರ ರಾತ್ರಿ ಸುಭಾಷ್ ನಗರದ ಸದಸ್ಯರು ಚಾನಲ್ ಹರಿಯುವ ಲಕ್ಕೇನಹಳ್ಳಿ ಗ್ರಾಮದಲ್ಲಿ ವೀಕ್ಷಣೆಗೆ ತೆರಳಿದಾಗ ಹಲ್ಲೆ ನಡೆಸಲಾಗಿದೆ.

ಚಾನಲ್ ಏರಿಯ ಮೇಲೆ ತೆಂಗಿನ ಗರಿ, ಟಾರ್ಪಲ್​ನಿಂದ ಮುಚ್ಚಿ ನೀರೆತ್ತುತ್ತಿದ್ದ ಮೋಟಾರ್ ಅನ್ನು ಬೆಳೆಗಾರರ ಸಂಘದ ಸದಸ್ಯರೊಬ್ಬರು ಗಮನಿಸಿ ಹಳ್ಳಕ್ಕೆ ಇಳಿದಿದ್ದಾರೆ. ನಾವು ಅಲ್ಲಿಗೆ ಹೋಗುವುದನ್ನು ಅರಿತಿದ್ದ ಜನರು ಕತ್ತಲೆಯಲ್ಲಿ ಅಲ್ಲಲ್ಲಿ ಅಡಗಿದ್ದರು. ಈ ಸಂದರ್ಭದಲ್ಲಿ ಮಾರಕಾಸ್ತ್ರಗಳನ್ನು ಹಿಡಿದ ಜನರು ಏಕಾಏಕಿ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಶಾಸಕ ಬೆಳ್ಳಿ ಪ್ರಕಾಶ್ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರ ಯೋಗಕ್ಷೇಮ ವಿಚಾರಿಸಿದರು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಡಾ. ಉಮೇಶ್​ಗೆ ತಿಳಿಸಿದ ಅವರು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬೇರೆ ಆಸ್ಪತ್ರೆಗೆ ಕಳುಹಿಸಿ ಎಂದು ಸೂಚಿಸಿದರು.

ಘಟನೆ ಬಳಿಕ ಲಕ್ಕೇನಹಳ್ಳಿ ಗ್ರಾಮದಲ್ಲಿ ರಾತ್ರಿಯಿಂದಲೆ ಪೊಲೀಸರ ಕಾವಲು ಹಾಕಲಾಗಿದೆ. ಲಕ್ಕೇನಹಳ್ಳಿ ಗ್ರಾಮದ ಕೆಲವರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಡಕೆ ಬೆಳೆಗಾರರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.