ನೀರಿನ ಸಭೆ ನಡೆಸದಿದ್ದಕ್ಕೆ ಅಸಮಾಧಾನ, ಜಿಪಂ ಸದಸ್ಯರ ಕೋಪ ತಣಿಸಲು ಯತ್ನ

ಚಿಕ್ಕಮಗಳೂರು: ಲೋಕಸಭೆ ಚುನಾವಣೆಯ ದೀರ್ಘ ಅವಧಿ ನೀತಿ ಸಂಹಿತೆ ಕಾರಣ ಜಿಲ್ಲಾ ಪಂಚಾಯಿತಿ ಅಧಿಕಾರ ಆಡಳಿತಾಧಿಕಾರಿ ಕೈಯಲ್ಲಿ ಉಳಿದಿದ್ದು ಈ ಅವಧಿಯಲ್ಲಿ ಸಿಇಒ ಪ್ರಮುಖ ನಿರ್ಧಾರಗಳನ್ನು ಏಕ ಸ್ವಾಮ್ಯದಿಂದ ಕೈಗೊಳ್ಳುತ್ತಿದ್ದಾರೆಂಬ ಸದಸ್ಯರ ಕೋಪ-ತಾಪ ತಣಿಸಲು ಸಿಇಒ ಎಸ್​ಅಶ್ವಥಿ ಮುಂದಾಗಿದ್ದಾರೆ.

ಕುಡಿಯುವ ಟ್ಯಾಂಕರ್ ನೀರು ಸರಬರಾಜಿನ ಟೆಂಡರ್ ನೀಡುವಾಗ, ಬೋರ್​ವೆಲ್ ಕೊರೆಸುವಾಗ ತಮ್ಮ ಅಭಿಪ್ರಾಯ ಕೇಳಿಲ್ಲವೆಂದು ಮುನಿಸಿಕೊಂಡಿರುವ ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರ ಅಸಮಾಧಾನದ ಬಗ್ಗೆ ವಿಜಯವಾಣಿ ಮೇ 3 ರಂದು ವರದಿ ಪ್ರಕಟ ಮಾಡಿತ್ತು.

ಇದರಿಂದ ಎಚ್ಚೆತ್ತುಕೊಂಡ ಜಿಪಂ ಸಿಇಒ ಎಸ್.ಅಶ್ವಥಿ ಅವರು, ಕೂಡಲೆ ಎಲ್ಲ ಸದಸ್ಯರನ್ನೂ ಕಾರ್ಯದರ್ಶಿಗಳ ಮೂಲಕ ಸಂರ್ಪಸಿ ತಮ್ಮ ವ್ಯಾಪ್ತಿಯ ಕುಡಿಯುವ ನೀರು ಮತ್ತು ಇತರೆ ಸಮಸ್ಯೆಗಳ ಮಾಹಿತಿ ಪಡೆಯುತ್ತಿದ್ದಾರೆ. ಈ ಸಂದರ್ಭ ಅನೇಕ ಸದಸ್ಯರು ಸಿಇಒ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ನೀತಿ ಸಂಹಿತೆ ಮುಗಿಯುವ ಮೇ 23ರ ನಂತರ ನಾವು ಜಿಪಂ ಕಚೇರಿ ಹೊರ ಭಾಗವೇ ನಿಂತು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಜತೆಗೆ ಸಿಇಒ ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರಮುಖ ನಿರ್ಧಾರ ಮಾಡುತ್ತಿರುವ ಬಗ್ಗೆ ಜಿಪಂ ಅಧ್ಯಕ್ಷರೂ ಬೇಸರ ವ್ಯಕ್ತಪಡಿಸಿದ್ದಾರೆ.

ಕಾನೂನು ತೋರಿಸಿ ಆಡಳಿತ ನಡೆಸಲೆತ್ನಿಸಿದ ಸಿಇಒ ಅವರ ಬಗ್ಗೆ ಪ್ರಾರಂಭದಲ್ಲಿಯೇ ಅಪಸ್ವರ ಕೇಳಿ ಬಂದಿದೆ. ಲೋಕಸಭೆ ಚುನಾವಣೆ ಮುನ್ನ ಮಾರ್ಚ್​ನಲ್ಲಿ ದಾವಣಗೆರೆ ಜಿಲ್ಲೆಯಿಂದ ಕಾಫಿನಾಡಿಗೆ ಬಂದ ಸಿಇಒ ಎಸ್.ಅಶ್ವಥಿ ಅವರಿಗೆ ಸದಸ್ಯರ ಪರಿಚಯವೇ ಇನ್ನೂ ಆಗಿಲ್ಲ. ಇವರು ಬಂದ ವಾರದಲ್ಲಿಯೇ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಯಾವುದೇ ಸಭೆ ಸಮಾರಂಭ ನಡೆಯಲಿಲ್ಲ. ಹೀಗಾಗಿ ಜಿಪಂ ಅಧ್ಯಕ್ಷರಾದಿಯಾಗಿ ಯಾವುದೇ ಸದಸ್ಯರ ಜತೆ ಜಿಪಂ ವ್ಯಾಪ್ತಿಯ ಸಮಸ್ಯೆ ಬಗ್ಗೆ ಅನೌಪಚಾರಿಕವಾಗಿಯೂ ಚರ್ಚೆ ಮಾಡಲಿಲ್ಲ.

ಈ ಹಿಂದಿನ ಸಿಇಒ ಅವರೂ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲ ಎಂಬ ಅಪವಾದಕ್ಕೆ ಗುರಿಯಾಗಿದ್ದರು. ಅವರ ಜಾಗಕ್ಕೆ ಬಂದ ಹೊಸ ಸಿಇಒ ಅಶ್ವಥಿ ಅವರೂ ಸಹ ಹಿಂದಿನ ಸಿಇಒ ರೀತಿ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲವೆಂಬುದು ಹಲವು ಸದಸ್ಯರ ಅಸಮಾಧಾನ. ಬಯಲು ಸೀಮೆಯ ಕಡೂರು ತಾಲೂಕು, ಚಿಕ್ಕಮಗಳೂರು ಲಕ್ಯಾ ಹೋಬಳಿಯಲ್ಲಿ ಬರಗಾಲ ತೀವ್ರಗೊಂಡಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿ ಜನರು ಪರದಾಡುವ ಸ್ಥಿತಿ ನಿರ್ವಣವಾಗಿದೆ. ಇದೇ ಪರಿಸ್ಥಿತಿ ಮಲೆನಾಡು ಪ್ರದೇಶದಲ್ಲಿಯೂ ಉಂಟಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕುಡಿಯುವ ನೀರಿನಂತಹ ಗಂಭೀರ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಸಂದರ್ಭ ಅನೌಪಚಾರಿಕವಾಗಿ ಸಭೆ ಕರೆದು ಅಭಿಪ್ರಾಯ ಕೇಳಬೇಕಿತ್ತು ಎಂಬುದು ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಹಲವು ಸದಸ್ಯರ ವಾದ.

ಅಸಹಾಯಕ ಸ್ಥಿತಿಯಲ್ಲಿ ಸಿಇಒ: ಜಿಪಂ ಸಾಮಾನ್ಯ ಸಭೆ ಜ.9ರಂದು ನಡೆದಿದ್ದು, ಮಾ. 9ರಂದು ಸಭೆ ಕರೆಯಬೇಕೆನ್ನುವಷ್ಟರಲ್ಲಿಯೇ ಲೋಕಸಭೆ ಚುನಾವಣೆ ದಿನಾಂಕ ಘೊಷಣೆಯಾಯಿತು. ಹೀಗಾಗಿ ಸಾಮಾನ್ಯ ಸಭೆ ನಡೆದಯದೆ ನಾಲ್ಕು ತಿಂಗಳಾಗಿದೆ. ಕನಿಷ್ಟ ಮೂರು ತಿಂಗಳು ಮೀರದಂತೆ ಸಭೆ ಕರೆಯಬೇಕೆಂಬ ನಿಯಮ ಪಂಚಾಯತ್​ರಾಜ್ ಕಾಯ್ದೆಯಲ್ಲಿದೆ. ಆದರೆ, ನೀತಿ ಸಂಹಿತೆ ಇದಕ್ಕೆ ಅಡ್ಡಿಯಾಗಿದ್ದು, ಸಿಇಒ ಕೂಡ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಕೂಡಲೆ ಅನೌಪಚಾರಿಕ ಸಭೆ ನಡೆಸಲಿ: ಜಿಪಂ ಸಿಇಒ ಅವರು ಕೂಡಲೆ ಎಲ್ಲ ಸದಸ್ಯರನ್ನೊಳಗೊಂಡ ಅನೌಪಚಾರಿಕ ಸಭೆ ಕರೆಯಬೇಕೆಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಒತ್ತಾಯಿಸಿದ್ದಾರೆ. ದೂರವಾಣಿ ಮೂಲಕ ಸಿಇಒ ಅಶ್ವಥಿ ಜತೆ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಉಲ್ಬಣಗೊಂಡಿರುವ ಕುಡಿಯುವ ನೀರು ಮತ್ತು ಇತರೆ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಜತೆ ರ್ಚಚಿಸಬೇಕೆಂದು ಸೂಚಿಸಿದ್ದಾರೆ. ಸಿಇಒ ಆಗಿ ಜಿಲ್ಲೆಗೆ ಆಗಮಿಸಿದ ತಕ್ಷಣ ನೀತಿ ಸಂಹಿತೆ ಜಾರಿಯಾಗಿದ್ದು, ಬಹುತೇಕ ಸದಸ್ಯರಿಗೆ ಅವರು ಪರಿಚಯವಾಗಿಲ್ಲ. ನೀತಿ ಸಂಹಿತೆ ಜಾರಿ ಇರುವ ಸಂದರ್ಭ ಕೈಗೊಂಡಿರುವ ಕೆಲ ನಿರ್ಧಾರಗಳೂ ಮರು ಪರಿಶೀಲನೆ ಆಗಬೇಕಿದೆ. ಸ್ಥಳೀಯವಾಗಿ ಸಮಸ್ಯೆಗಳ ಅರಿವಿರುವ ಸದಸ್ಯರಿಂದ ಸಿಇಒ ಅವರು ಈತನಕ ಮಾಹಿತಿ ಸಂಗ್ರಹಿಸಿಲ್ಲ. ಅನೇಕ ಸದಸ್ಯರು ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಸಿಇಒ ಅವರು, ಕಾರ್ಯದರ್ಶಿ ಮೂಲಕ ಸದಸ್ಯರಿಂದ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವೂ ಅಲ್ಲ. ಸದಸ್ಯರಿಗೂ ನೀಡುವ ಗೌರವವೂ ಅಲ್ಲ ಎಂದು ಹೇಳಿದ್ದಾರೆ.