ಸೇನೆ ಏನು ಮಾಡುತ್ತದೆ ಎಂದು ಯಾವಾಗಲೂ ಕೇಳ್ತಿದ್ದೆ ಇಂದು ನೋಡಿ ನನ್ನ ಕಣ್ಣಂಚಲ್ಲಿ ನೀರು ಬಂತು

ಹೊಸ ವರ್ಷ ಸಂಭ್ರಮಕ್ಕೂ ಮುನ್ನ ಹಿಮಪಾತದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಿದ ಸೇನೆಗೆ ಮಹಿಳೆಯೊಬ್ಬರ ಕೃತಜ್ಞತೆ

ನವದೆಹಲಿ: ಒಂದೆಡೆ ಇಡೀ ದೇಶವೇ ಹೊಸ ವರ್ಷದ ಸಂಭ್ರಮಕ್ಕೆ ಅಣಿಯಾಗಿತ್ತು. ಆದರೆ, ಇತ್ತ ನಮ್ಮ ಭಾರತೀಯ ಯೋಧರು ಹಿಮಪಾತದಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಿಸಿ ತ್ಯಾಗದ ಪ್ರತಿರೂಪ ಎನಿಸಿಕೊಂಡಂತಹ ಹೆಮ್ಮೆಯ ಘಟನೆ ಡಿಸೆಂಬರ್​ 28ರಂದು ನಡೆದಿದ್ದು, ಮಹಿಳೆಯೊಬ್ಬಳು ಸೇನೆಗೆ ಧನ್ಯವಾದ ತಿಳಿಸಿದ್ದಾಳೆ.

ಡಿಸೆಂಬರ್​ 28ರಂದು ಭಾರತ ಮತ್ತು ಟಿಬೆಟ್​ ಪ್ರದೇಶವನ್ನು ಸಂಪರ್ಕಿಸುವ ಸಿಕ್ಕಿಂನ ನಾಥುಲಾ ಪಾಸ್​ನಲ್ಲಿ ಸುಮಾರು 3000 ಪ್ರವಾಸಿಗರು ಭಾರಿ ಹಿಮಪಾತಕ್ಕೆ ಸಿಲುಕಿ ದಾರಿ ಕಾಣದೆ ಕಂಗಾಲಾಗಿದ್ದರು. ಸುಮಾರು 300 ರಿಂದ 400 ವಾಹನಗಳು ಮಾರ್ಗ ಮಧ್ಯೆದಲ್ಲೇ ನಿಂತುಬಿಟ್ಟಿದ್ದವು. ಇದರಲ್ಲಿ ಮಹಿಳೆ, ಮಕ್ಕಳು ಹಾಗೂ ಹಿರಿಯ ನಾಗರಿಕರು ಸಿಲುಕಿಕೊಂಡಿದ್ದರು.

ಈ ವೇಳೆ ನೆರವಿಗೆ ಬಂದಿದ್ದು ನಮ್ಮ ಹೆಮ್ಮೆಯ ಭಾರತೀಯ ಸೇನೆ. ತಮ್ಮ ಮಿಂಚಿನ ಕಾರ್ಯಾಚರಣೆಯಿಂದ ಹಿಮಪಾತವನ್ನು ಸರಿಪಡಿಸಿ ಪ್ರವಾಸಿಗರಿಗೆ ದಾರಿ ಮಾಡಿಕೊಟ್ಟು ಸುರಕ್ಷತೆಯಿಂದ ತೆರಳಲು ಅನುವು ಮಾಡಿಕೊಟ್ಟರು. ಅಲ್ಲದೆ, ಪ್ರವಾಸಿಗರಿಗೆ ಹೊದ್ದಿಕೊಳ್ಳಲು ಬೆಚ್ಚನೆಯ ಬಟ್ಟೆಗಳನ್ನು ಹಾಗೂ ಉಳಿದುಕೊಳ್ಳಲು ಸೇನಾ ಕ್ವಾರ್ಟರ್ಸ್​ನಲ್ಲಿ ಅವಕಾಶ ಮಾಡಿಕೊಟ್ಟರು.

ಸೇನೆಯ ಈ ಕಾರ್ಯಕ್ಕೆ ಪ್ರವಾಸಿಗರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದು, ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್​ಲೋಡ್​ ಮಾಡಿ ನೆರವಿಗೆ ಬಂದ ಸೇನೆಗೆ ಕಣ್ಣೀರಿನ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಡಿಯೋದಲ್ಲಿರುವ ಮಹಿಳೆ ಯಾರೆಂಬುದು ತಿಳಿದುಬಂದಿಲ್ಲ. ಆದರೆ, ನಾನು ಮತ್ತು ಪ್ರವಾಸಿಗರು ಇಂದು ಜೀವಂತವಾಗಿದ್ದೇವೆ ಎಂದರೆ ಅದಕ್ಕೆ ಸೇನೆಯೇ ಕಾರಣ. ನಾನು ಯಾವಾಗಲೂ ಸೇನೆ ಏನು ಮಾಡುತ್ತದೆ ಎಂದು ಕೇಳುತ್ತಿದ್ದೆ. ಆದರೆ, ಇಂದು ಅದನ್ನು ನೋಡಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)