VIDEO| ಹೊಳೆಯಲ್ಲಿ ಬಿದ್ದ ಚೆಂಡನ್ನು ತೆಗೆದುಕೊಳ್ಳಲು ಹೋದ ಬಾಲಕಿಯನ್ನು ತಡೆದು ತಾನೇ ಚೆಂಡು ತಂದುಕೊಟ್ಟು ಸ್ವಾಮಿನಿಷ್ಠೆ ಮೆರೆದ ಶ್ವಾನ!

ನವದೆಹಲಿ: ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ. ಈ ಮೂಕ ಪ್ರಾಣಿ ಮಾನವನ ಉತ್ತಮ ಸ್ನೇಹಿತ ಎಂದು ಹೇಳಿದರೆ ತಪ್ಪಾಗಲಾರದು. ತೊಂದರೆಯಲ್ಲಿದ್ದಾಗ ರಕ್ಷಣೆ, ಒತ್ತಡದಲ್ಲಿದ್ದಾಗ ತನ್ನ ತುಂಟತನದಿಂದ ಅದನ್ನು ನಿವಾರಿಸುವ ಶ್ವಾನದ ಗುಣವನ್ನು ಮೆಚ್ಚದಿರುವ ವ್ಯಕ್ತಿಯನ್ನು ಲೋಕವೇ ಮೆಚ್ಚುವುದಿಲ್ಲ. ಇಂತಹ ಅದ್ಭುತ ಮಾನವ ಸ್ನೇಹಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಕಣ್ಣಲ್ಲಿ ಕಂಬನಿ ಮಿಡಿಯುವಂತಿದೆ.​

ವೈರಲ್​ ಆಗಿರುವ ವಿಡಿಯೋದಲ್ಲಿರುವಂತೆ ಹೊಳೆಯ ದಡದಲ್ಲಿ ಬಾಲಕಿಯೊಬ್ಬಳು ಚೆಂಡಾಟ ಆಡುತ್ತಿರುವಾಗ, ಚೆಂಡು ಬಾಲಕಿಯ ಕೈತಪ್ಪಿ ನೀರಿನ ಒಳಗೆ ಬೀಳುತ್ತದೆ. ಚೆಂಡನ್ನು ತೆಗೆದುಕೊಳ್ಳಲು ಬಾಲಕಿ ನೀರಿನ ಒಳಗೆ ಇಳಿಯಲು ಮುಂದಾದಾಗ ಅದನ್ನು ಗಮನಿಸುವ ಶ್ವಾನ ಆಕೆಯ ಹಿಂಬದಿಯ ಬಟ್ಟೆಯನ್ನು ಬಾಯಲ್ಲಿ ಕಚ್ಚಿ ಹಿಂದಕ್ಕೆ ಎಳೆದು ಬೀಳಿಸುತ್ತದೆ. ಬಳಿಕ ತಾನೇ ನೀರಿಗೆ ಇಳಿದು ಚೆಂಡನ್ನು ಹೊರತಂದು ಆಕೆಗೆ ತಂದುಕೊಡುತ್ತದೆ.

ಈ ವಿಡಿಯೋವನ್ನು ಅಲ್ಲೇ ಇದ್ದ ಮತ್ತೊಬ್ಬರು ತಮ್ಮ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ್ದಾರೆ. ಈ ವಿಡಿಯೋ ಫಿಸಿಕ್ಸ್​ ಅಸ್ಟ್ರೋನಮಿ ಎಂಬ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಆಗಿದ್ದು, ಸಾಮಾಜಿಕ ಜಾಲತಾಣದ ಬಳಕೆದಾರರ ಗಮನವನ್ನು ಸೆಳೆದಿದೆ. ಈಗಾಗಲೇ ವಿಡಿಯೋವನ್ನು 3.39 ಮಿಲಿಯನ್ಸ್​ ಮಂದಿ ಕಣ್ತುಂಬಿಕೊಂಡಿದ್ದಾರೆ. ಸಾಕಷ್ಟು ಮಂದಿ ಶ್ವಾನದ ಸಾಹಸ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *