VIDEO| ಸೇನಾ ಕ್ಯಾಪ್​ ಧರಿಸಿ ಕಣಕ್ಕಿಳಿದ ಭಾರತ: ಪಂದ್ಯದ ಮೊತ್ತ ಹುತಾತ್ಮ ಯೋಧರ ಕುಟುಂಬಕ್ಕೆ ನೀಡಲು ನಿರ್ಧಾರ

ರಾಂಚಿ: ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಟೀಂ ಇಂಡಿಯಾ ಗೌರವ ಸೂಚಿಸಿದೆ. ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಸೇನಾ ಕ್ಯಾಪ್​ ಧರಿಸುವ ಮೂಲಕ ಭಾರತ ಕಣಕ್ಕಿಳಿದಿದೆ.

ಜಾರ್ಖಂಡ್​ ರಾಜಧಾನಿ ರಾಂಚಿಯ ಜೆಎಸ್​ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯವು ಉತ್ತಮ ಉದ್ದೇಶಕ್ಕೆ ಸಾಕ್ಷಿಯಾಗಿದ್ದು, ಈ ಪಂದ್ಯದಲ್ಲಿ ಬರುವ ಮೊತ್ತವನ್ನು ಹುತಾತ್ಮ ಯೋಧರ ಕುಟುಂಬದವರಿಗೆ ನೀಡಲು ಬಿಸಿಸಿಐ ನಿರ್ಧರಿಸಿದೆ.

ಈ ಬಗ್ಗೆ ಬಿಸಿಸಿಐ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ತಿಳಿಸಿದ್ದು, ಟೀಂ ಇಂಡಿಯಾ ಆಟಗಾರರು ಸೇನಾ ಕ್ಯಾಪ್ ಧರಿಸುತ್ತಿರುವ ವಿಡಿಯೋವನ್ನು ಶೇರ್​ ಮಾಡಿದೆ. ಮಾಜಿ ನಾಯಕ ಎಂ.ಎಸ್​.ಧೋನಿ ಅವರು ತಮ್ಮ ತವರು ನೆಲದಲ್ಲಿ ತಂಡದ ಆಟಗಾರರಿಗೆ ಕ್ಯಾಪ್​ ವಿತರಣೆ ಮಾಡಿದ್ದು, ವಿಶೇಷವಾಗಿದೆ.

ಟಾಸ್​ ನಂತರ ಈ ಬಗ್ಗೆ ಮಾತನಾಡಿರುವ ನಾಯಕ ವಿರಾಟ್​ ಕೊಹ್ಲಿ ಇದೊಂದು ವಿಶೇಷ ಕ್ಯಾಪ್​ ಆಗಿದ್ದು, ನಮ್ಮ ಸೇನಾ ಪಡೆಗಳಿಗೆ ಇದು ಕಾಣಿಕೆಯಾಗಿದೆ. ಪಂದ್ಯದ ಮೊತ್ತವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಲಿದ್ದೇವೆ. ದೇಶದ ಜನರು ಹುತಾತ್ಮ ಯೋಧರ ಕುಟುಂಬಗಳ ಬೆನ್ನಿಗೆ ನಿಲ್ಲಬೇಕೆಂದು ಕೊಹ್ಲಿ ತಿಳಿಸಿದರು. (ಏಜೆನ್ಸೀಸ್​)