VIDEO: ಸ್ಪಿನ್​ ಬೌಲಿಂಗ್​ನಲ್ಲಿ ಬೌನ್ಸರ್​ ಹಾಕಿ ಎಲ್ಲರ ಹುಬ್ಬೇರಿಸಿದ ಕೃನಾಲ್​ ಪಾಂಡ್ಯ

ಲಖನೌ: ಅಚ್ಚರಿಗಳ ತಾಣಗಳಲ್ಲಿ ಕ್ರಿಕೆಟ್​ ಲೋಕವೂ ಒಂದು. ಕೆಲವು ಬಾರಿ ಇಲ್ಲಿ ನಡೆಯುವ ವಿಶೇಷ ಘಟನೆಗಳು ಕ್ರೀಡಾಭಿಮಾನಿಗಳ ಮನದಲ್ಲಿ ಉಳಿಯುವುದಲ್ಲದೇ, ಮೊಗದಲ್ಲಿ ಮುಗುಳುನಗೆಯನ್ನು ಉಂಟು ಮಾಡುತ್ತವೆ.

ಹೌದು, ಲಖನೌದಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್​ ಕೃನಾಲ್​ ಪಾಂಡ್ಯ ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾದರು.

ಸ್ಪಿನ್​ ಬೌಲಿಂಗ್​ನಲ್ಲಿ ಅಪರೂಪದ ಬೌನ್ಸರ್​ ಹಾಕಿ ಎಲ್ಲರು ಅಚ್ಚರಿಯಿಂದ ನೋಡುವಂತೆ ಮಾಡಿದರು. 13ನೇ ಓವರ್​ನಲ್ಲಿ ಕಾರ್ಲೋಸ್​​ ಬ್ರಾಥ್​ವೈಟ್​ಗೆ ಬೌಲ್​ ಮಾಡಿದ ಕೃನಾಲ್​​ ಬೌನ್ಸರ್​ ಹಾಕಿದರು. ವಿಕೆಟ್​ ಕೀಪರ್​​ ದಿನೇಶ್​ ಕಾರ್ತಿಕ್​ ಎಂದಿನಂತೆ ಸ್ಪಿನ್​ ಬೌಲಿಂಗ್​ ವೇಳೆ ಮುಂದೆ ನಿಂತಿದ್ದ ಕಾರಣ ಅವರು ಎಷ್ಟೇ ಜಿಗಿದರು ಅವರ ಕೈಗೆ ಬಾಲ್​ ಸಿಗದೆ ಬೌಂಡರಿ ಗೆರೆಯನ್ನು ಮುಟ್ಟಿತು.

3 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿರುವ ಭಾರತ ಈಗಾಗಲೇ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಕೊನೆಯ ಟಿ20 ಪಂದ್ಯ ನವೆಂಬರ್​ 11 ರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
(ಏಜೆನ್ಸೀಸ್​)