ಪಟ್ಟುಬಿಡದೆ ಧೋನಿ, ಕೊಹ್ಲಿ ಮನವೊಲಿಸಿ ರಿವ್ಯೂ ಮೂಲಕ ವಿಕೆಟ್​ ಪಡೆದ ಜಡ್ಡೂ, ವಿಡಿಯೋ ವೈರಲ್​!

ತಿರುವನಂತಪುರ(ಕೇರಳ): ಇಲ್ಲಿನ ಗ್ರೀನ್​ಫೀಲ್ಡ್​ ಮೈದಾನದಲ್ಲಿ ಗುರುವಾರ ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ 5ನೇ ಏಕದಿನ ಪಂದ್ಯದಲ್ಲಿ ಅಮೋಘ ಜಯಸಾಧಿಸಿದ ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದ್ದು, ನಿನ್ನೆ ನಡೆದ ಪಂದ್ಯದಲ್ಲಿ ನಡೆದ ಆಸಕ್ತಿದಾಯಕ ಘಟನೆಯೊಂದು ವಿಡಿಯೋದಲ್ಲಿ ಸೆರೆಯಾಗಿದೆ.

ಹೌದು, ವೆಸ್ಟ್​ ಇಂಡೀಸ್​ ಆಟಗಾರ ಶಿರ್ಮೊನ್​ ಹೆಟ್​ಮೈರ್​ ಜಡ್ಡೂ ಎಸೆದ 16ನೇ ಓವರ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಈ ವೇಳೆ ಜಡ್ಡೂ ಅಂಪೈರ್​ಗೆ ಮನವಿ ಮಾಡಿದರೂ ಅದನ್ನು ಔಟ್​ ಎಂದು ಪರಿಗಣಿಸಲಿಲ್ಲ. ಆದರೆ, ತನ್ನ ಬೌಲಿಂಗ್​ ಮೇಲೆ ಬಲವಾದ ನಂಬಿಕೆಯಿಟ್ಟಿದ್ದ ಜಡ್ಡೂ ಡಿಆರ್​ಎಸ್​ ರಿವ್ಯೂಗೆ ಮನವಿ ಮಾಡುವಂತೆ ವಿಕೆಟ್​ ಕೀಪರ್​​ ಧೋನಿ ಮತ್ತು ನಾಯಕ ಕೊಹ್ಲಿಗೆ ತಿಳಿಸಿದರು.

ಒಂದು ರಿವ್ಯೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಯೋಚಿಸುತ್ತಿದ್ದ ಧೋನಿ ಮತ್ತು ಕೊಹ್ಲಿಯನ್ನು ಪಟ್ಟುಬಿಡದೆ ಮನವೊಲಿಸಿದ ಜಡ್ಡೂ ಅದರಲ್ಲಿ ಯಶಸ್ಸು ಕಂಡರು. ತಪ್ಪು ನಿರ್ಣಯಕ್ಕೆ ಕ್ಷಮೆಯಾಚಿಸಿದ ಅಂಪೈರ್​ ಕೊನೆಯಲ್ಲಿ ಔಟ್​ ಎಂದು ಪರಿಗಣಿಸಿದರು. ಜಡ್ಡೂ ವಿಶ್ವಾಸ ಕಂಡು ಕ್ರೀಡಾಭಿಮಾನಿಗಳು ಬೆರಗಾಗಿದ್ದಾರೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜಡ್ಡೂಗೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

ನಿನ್ನೆ ನಡೆದ ಪಂದ್ಯದಲ್ಲಿ ನಾಲ್ಕು ವಿಕೆಟ್​ ಪಡೆದು ತಂಡದ ಗೆಲವಿನಲ್ಲಿ ಜಡ್ಡೂ ಪ್ರಮುಖ ಪಾತ್ರ ವಹಿಸಿದರು. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 3-1 ರಿಂದ ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿತು. ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.(ಏಜೆನ್ಸೀಸ್​)

https://twitter.com/ghanta_10/status/1057923207808933888