VIDEO| ನಿವೃತ್ತಿ ನಂತರದ ಬದುಕಿನ ಬಗ್ಗೆ ಕೂಲ್​ ಕ್ಯಾಪ್ಟನ್​ ಬಿಚ್ಚಿಟ್ಟ ರಹಸ್ಯವೇನು?

ನವದೆಹಲಿ: ತಮ್ಮ ವಿಭಿನ್ನ ಆಟ ಹಾಗೂ ಯಶಸ್ವಿ ನಾಯಕತ್ವದಿಂದಲೇ ‘ಕೂಲ್​ ಕ್ಯಾಪ್ಟನ್’​ ಎಂಬ ಹೆಸರಿನ ಮೂಲಕ ವಿಶ್ವದ ಗಮನ ಸೆಳೆದ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​.ಧೋನಿ ಅವರು ಇಂಗ್ಲೆಂಡ್​ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್​ 2019ನೇ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ತೋರಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೆ ಅವರು ನಿವೃತ್ತಿ ನಂತರದ ಬದುಕಿನ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಧೋನಿ ಅಭಿಮಾನಿಯೊಬ್ಬರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಧೋನಿ, ನಾನು ನಿಮ್ಮೊಂದಿಗೆ ನನ್ನ ಒಂದು ರಹಸ್ಯವನ್ನು ಹಂಚಿಕೊಳ್ಳಬೇಕೆಂದುಕೊಂಡಿದ್ದೇನೆ. ಚಿಕ್ಕಂದಿನಿಂದಲೂ ನಾನೊಬ್ಬ ಕಲಾವಿದ ಆಗಬೇಕೆಂದುಕೊಂಡಿದ್ದೆ, ಇದುವರೆಗೂ ನಾನು ತುಂಬಾ ಕ್ರಿಕೆಟ್​ ಆಡಿದ್ದೇನೆ, ನಾನು ಏನಾಗಬೇಕೆಂದುಕೊಂಡಿದ್ದೆ ಅದಕ್ಕೆ ಈಗ ಕಾಲ ಕೂಡಿಬಂದಿದೆ ಎಂದು ನಾನು ನಿರ್ಧರಿಸಿದ್ದೇನೆ. ನಾನು ಕೆಲವು ಚಿತ್ರಗಳನ್ನು ಬಿಡಿಸಿದ್ದೇನೆ. ಅಲ್ಲದೆ, ಚಿತ್ರಕಲೆಯನ್ನೇ ವೃತ್ತಿಯನ್ನಾಗಿಕೊಳ್ಳುವುದರ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದೇನೆ ಎಂದು ತಾವು ಬಿಡಿಸಿರುವ ಕೆಲವು ಚಿತ್ರಗಳನ್ನು ಧೋನಿ ತೋರಿಸಿದ್ದಾರೆ.

ಮೇ 30ರಿಂದ ಕ್ರಿಕೆಟ್​ ತವರು ಇಗ್ಲೆಂಡ್​ನಲ್ಲಿ ಆರಂಭವಾಗಲಿರುವ ವಿಶ್ವಕಪ್​ ಟೂರ್ನಿಗೆ ಧೋನಿ ಅವರು ಸಜ್ಜಾಗಿದ್ದು, ಎರಡನೇ ಬಾರಿಗೆ ವಿಶ್ವಕಪ್​ ಟ್ರೋಫಿಯನ್ನು ಎತ್ತಿಡಿಯುವ ಕನಸ್ಸನ್ನು ಕಾಣುತ್ತಿದ್ದಾರೆ. ಧೋನಿ ಅವರ ವೃತ್ತಿ ಜೀವನದಲ್ಲಿ ಇದೇ ಕೊನೆಯ ವಿಶ್ವಕಪ್​ ಆಗಲಿದೆ ಎಂದು ಹೇಳಲಾಗುತ್ತದೆ. ನಿವೃತ್ತಿಯ ಬಳಿಕ ತಾವು ಅಂದುಕೊಂಡ ಹಾಗೆ ಚಿತ್ರಕಲೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *