VIDEO|ವೇಗಿ ಇಶಾಂತ್​ ಶರ್ಮಾ, ರವೀಂದ್ರ ಜಡೇಜಾ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದೇಕೆ?

ಪರ್ತ್​: ಆತೀಥೆಯ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಟೀಂ ಇಂಡಿಯಾ ಸೋಲಿನ ಮುಖಭಂಗ ಅನುಭವಿಸಿದೆ. 1-1 ಅಂತರದಲ್ಲಿ ಸಮಬಲ ಸಾಧಿಸಿರುವ ಉಭಯ ತಂಡಗಳು ಮುಂದಿನ ಪಂದ್ಯಕ್ಕೆ ಸಾಕಷ್ಟು ತಯಾರಿ ನಡೆಸುತ್ತಿವೆ. ಈ ನಡುವೆ ಪರ್ತ್​ನಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದ ವೇಳೆ ವೇಗಿ ಇಶಾಂತ್​ ಶರ್ಮಾ ಹಾಗೂ ರವೀಂದ್ರ ಜಡೇಜಾ ನಡುವಿನ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಅಂಪೈರ್​, ಕೊಹ್ಲಿ ವಿರುದ್ಧ ನೀಡಿದ ವಿವಾದಾತ್ಮಕ ತೀರ್ಪಿನಿಂದ ಉಭಯ ತಂಡದ ನಾಯಕರಾದ ಕೊಹ್ಲಿ ಹಾಗೂ ಟೀಮ್​ ಪೈನೆ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆದಿತ್ತು. ಇದು ಚರ್ಚೆಗೂ ಗ್ರಾಸವಾಗಿತ್ತು. ಎದುರಾಳಿಗಳ ನಡುವೆ ಮಾತಿನ ಚಕಮಕಿ ನಡೆಯುವುದು ಸಾಮಾನ್ಯ. ಆದರೆ, ಇದೇ ಪಂದ್ಯದಲ್ಲಿ ಬದಲಿ ಕ್ಷೇತ್ರ ರಕ್ಷಕನಾಗಿ ಬಂದಿದ್ದ ರವೀಂದ್ರ ಜಡೇಜಾ ಹಾಗೂ ಇಶಾಂತ್​ ಶರ್ಮಾ ಮೈದಾನದಲ್ಲೇ ವಾಗ್ವಾದ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಫಿಲ್ಡಿಂಗ್​​ ಪ್ಲೇಸ್​ಮೆಂಟ್​ ವಿಚಾರದಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಬೆರಳು ತೋರಿಸಿಕೊಂಡು ಏರು ಧ್ವನಿಯಲ್ಲಿ ಮಾತಾಡಿದ್ದಾರೆ. ಇದನ್ನು ಗಮನಿಸಿದ ಮಹಮ್ಮದ್​ ಶಮಿ ಹಾಗೂ ಕುಲದೀಪ್​ ಯಾದವ್​ ಇಬ್ಬರನ್ನು ಸುಮ್ಮನಿರಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ವಿರುದ್ಧ ಕ್ರೀಡಾಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *