VIDEO| ತನ್ನ ಪ್ರಜೆಯಿಂದಲೇ ಪಾಕ್​ ಮಾನ ಹರಾಜು: ಆತ್ಮಹತ್ಯೆಗೂ ಮುನ್ನ ವಿಡಿಯೋ ಹರಿಬಿಟ್ಟು ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಯೋಧ!

ಇಸ್ಲಮಾಬಾದ್​: ಉಗ್ರರನ್ನು ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನ ವಿಶ್ವದೆಲ್ಲೆಡೆ ಭಯೋತ್ಪಾದನೆಯನ್ನು ಹರಡಲು ತನ್ನ ನಿಧಿಯನ್ನು ಬಳಸಿಕೊಳ್ಳುತ್ತಿದೆ ಎಂಬ ಹಲವು ಆರೋಪಗಳನ್ನು ಎದುರಿಸುತ್ತಿದೆ. ಆದರೂ ಅದನ್ನು ಸಾರಾಸಗಾಟವಾಗಿ ತಿರಸ್ಕರಿಸುವ ಪಾಕ್​ ನಾನೇನು ತಪ್ಪು ಮಾಡುತ್ತಿಲ್ಲ. ಉಗ್ರರ ದಮನಕ್ಕೆ ನಾವು ಕ್ರಮಕೈಗೊಳುತ್ತಿದ್ದೇವೆ ಎಂದು ಸುಳ್ಳು ಹೇಳಿಕೊಂಡೇ ಬರುತ್ತಿದೆ. ಇದೀಗ ಪಾಕ್​ ಸುಳ್ಳಿನ ಮುಖವನ್ನು ಆ ದೇಶದ ಪ್ರಜೆಯೇ ಬಹಿರಂಗ ಪಡಿಸಿದ್ದಾನೆ.

ತನ್ನ ನೀಚ ಕೃತ್ಯದಿಂದ ಹಲವು ಬಾರಿ ಪಾಕಿಸ್ತಾನ ವಿಶ್ವದ ಎದುರು ಬೆತ್ತಲಾಗಿ ನಿಂತು ಅವಮಾನಕ್ಕೀಡಾಗಿದೆ. ಆಗಿದ್ದರೂ ಕೂಡ ಪಾಕ್​ ಇನ್ನೂ ಬುದ್ಧಿ ಕಲಿತಿಲ್ಲ ಎಂಬುದೇ ದುರಂತ. ಇತ್ತೀಚೆಗೆ ಪಾಕ್​ ದೇಶದ ಪ್ರಜೆಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋವೊಂದನ್ನು ಶೇರ್​ ಮಾಡಿ ಪಾಕ್​ ಕರಾಳತೆಯನ್ನು ಬಿಚ್ಚಿಟ್ಟಿದ್ದಾನೆ. ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಭಯೋತ್ಪಾದನೆಯನ್ನು ಹರಡಲು ಪಾಕ್​ ಉಗ್ರರಿಗೆ ನೆರವಾಗಿ ನಿಂತಿದ್ದು, ಬೆಂಬಲ ನೀಡುತ್ತಿದೆ. ನಿಧಿಯನ್ನು ಸಂಗ್ರಹಿಸಿ ಉಗ್ರ ಕೃತ್ಯಕ್ಕೆ ವಿನಿಯೋಗ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾನೆ.

ರಾಣಾ ಜಾವೇದ್​ ಎಂಬ ಪಾಕ್​ ಪ್ರಜೆ ಸೋಮವಾರ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಅಪ್​ಲೋಡ್​ ಮಾಡಿದ್ದಾನೆ. ರಾಣಾ ಪಾಕ್​ನ ಮಾಜಿ ಯೋಧ ಹಾಗೂ ಜೈಷ್​ ಇ ಮೊಹಮ್ಮದ್​ ಸಂಘಟನೆಯ ಜಿಹಾದಿಸ್ಟ್​. ತಾನು ಅಪ್​ಲೋಡ್​ ಮಾಡಿರುವ 42 ಸೆಂಕೆಡಿನ ವಿಡಿಯೋ ಸಂದೇಶದಲ್ಲಿ ಪಾಕಿಸ್ತಾನಿ ಸೇನೆ ಯುವಕರನ್ನು ಜಿಹಾದ್​ ಕಡೆ ಪ್ರಚೋದಿಸುತ್ತದೆ ಎಂಬ ಕರಾಳತೆಯನ್ನು ಬಿಚ್ಚಿಟ್ಟಿದ್ದಾನೆ.

ವಿಡಿಯೋದಲ್ಲಿ ಪಾಕಿಸ್ತಾನದ ಬಾಲಾಕೋಟ್​ನಲ್ಲಿನ ಜೈಷ್​ ಇ ಮೊಹಮ್ಮದ್​ ಉಗ್ರ ಸಂಘಟನೆಯ ವಿರುದ್ಧ ಭಾರತ ನಡೆಸಿದ ವೈಮಾನಿಕ ದಾಳಿಯ ಕುರಿತು ಮಾತನಾಡಿರುವ ರಾಣಾ, ಬಾಲಾಕೋಟ್​ನಲ್ಲಿ ಉಗ್ರರ ಕ್ಯಾಂಪ್​ ಇಲ್ಲ ಎಂಬ ಪಾಕ್​ ವಾದವನ್ನೇ ತಳ್ಳಿಹಾಕಿದ್ದಾನೆ. ಬಾಲಾಕೋಟ್​ನಲ್ಲಿ ಜೆಇಎಂ ಉಗ್ರ ತರಬೇತಿ ಕೇಂದ್ರಗಳನ್ನು ಹೊಂದಿದ್ದು, ಭಾರತದೊಳಗೆ ಉಗ್ರರನ್ನು ಕಳುಹಿಸಲು ಅಲ್ಲಿ ತಯಾರಿ ನಡೆಯುತ್ತಿರುತ್ತದೆ. ಅಲ್ಲದೇ ವಿಶ್ವದೆಲ್ಲಡೆ ದಾಳಿಗಳನ್ನು ನಡೆಸಲು ಸಂಚು ರೂಪಿಸಲಾಗುತ್ತದೆ ಎಂದು ಬಹಿರಂಗಪಡಿಸಿದ್ದಾನೆ.

ನನ್ನ ತಂದೆಯ ಮನವಿಯ ಮೇರೆಗೆ ನಾನು ಭಯೋತ್ಪಾದನೆಯನ್ನು ಬಿಟ್ಟು ಮುಖ್ಯವಾಹಿನಿಗೆ ಮರಳಿದೆ. ಇಸ್ಲಾಂ ಹೆಸರಿನಲ್ಲಿ ಸೇನೆ ಪಾಕ್​ನಲ್ಲಿ ವಿಷಬೀಜವನ್ನು ಬಿತ್ತುತ್ತಿದೆ. ಆದರೆ, ಪಾಕ್​ನಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವಂತೆ ಅಂತಾರಾಷ್ಟ್ರೀಯ ಸಮುದಾಯಗಳ ಮುಂದೆ ಮನವಿ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ತಮ್ಮ ದೇಶದ ವ್ಯವಸ್ಥೆಯನ್ನೇ ಜರಿದಿದ್ದಾನೆ.

ಫೆ.14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್​ಪಿಎಫ್​ ಯೋಧರು ತೆರಳತ್ತಿದ್ದ ಬಸ್​ ಅನ್ನು ಗುರಿಯಾಗಿರಿಸಿಕೊಂದು ಜೈಷ್​ ಇ ಮೊಹಮ್ಮದ್​ ಉಗ್ರ ಸಂಘಟನೆಯ ಉಗ್ರರು ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸುಮಾರು 40 ಮಂದಿ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಫೆ.26ರಂದು ವಾಯುಪಡೆಯ ಮಿರಾಜ್​ 2000 ವಿಮಾನದ ನೆರವಿನಿಂದ ಪಾಕ್​ನ ಬಾಲಾಕೋಟ್​ನಲ್ಲಿರುವ ಜೆಇಎಂ ಸಂಘಟನೆಯ ಅಡಗುತಾಣಗಳ ಮೇಲೆ ದಾಳಿ ನಡೆಸಿ, ಅನೇಕ ಉಗ್ರರರನ್ನು ಹತ್ಯೆಗೈದಿದ್ದರು. ಆದರೆ, ಇದನ್ನು ಪಾಕ್​ ತಳ್ಳಿಹಾಕಿ, ದಾಳಿಯೇ ನಡೆದಿಲ್ಲ ಎಂದು ಹೇಳಿತ್ತು. ಅಲ್ಲದೇ, ಉಗ್ರರ ತರಬೇತಿ ಕೇಂದ್ರವೇ ಅಲ್ಲಿಲ್ಲ ಎಂದು ಪಾಕ್​ ಮೊಂಡು ವಾದ ಮಾಡಿತ್ತು. ಇದೀಗ ತನ್ನ ಪ್ರಜೆಯಿಂದಲೇ ಮಾನ ಹರಾಜಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *