VIDEO| ಹಿಂಬದಿಯಿಂದ ಬಂದು ಜಿಗಿದು ಹಾಲಿವುಡ್​ ನಟ ಅರ್ನಾಲ್ಡ್​ ಬೆನ್ನಿಗೆ ಒದ್ದ ಅಭಿಮಾನಿ

ಜೋಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಹಾಲಿವುಡ್​ ಸೂಪರ್​ ಸ್ಟಾರ್​ ಅರ್ನಾಲ್ಡ್ ಶ್ಕ್ವಾರ್ಜಿನಗರ್ ಅವರು ನಿಂತಿದ್ದ ಸಮಯದಲ್ಲಿ ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ಜಿಗಿದು ಅರ್ನಾಲ್ಡ್​ ಅವರ ಬೆನ್ನಿಗೆ ಕಿಕ್ ಮಾಡಿದ ಘಟನೆ ನಡೆದಿದೆ.

ಆ್ಯಕ್ಸನ್​ ಚಿತ್ರಗಳ ಮೂಲಕ ವಿಶ್ವದಾದ್ಯಂತ ಸಾಕಷ್ಟು ಹೆಸರು ಮಾಡಿರುವ ಅರ್ನಾಲ್ಡ್​ ಓರ್ವ ದೇಹದಾರ್ಢ್ಯ ಪಟು ಹಾಗೂ ಮಾಜಿ ರಾಜಕಾರಣಿ. ಜೋಹಾನ್ಸ್​ಬರ್ಗ್​ನ ಸ್ಯಾಂಡ್​ಟನ್​ ಕನ್ವೆನ್ಸನ್​ ಸೆಂಟರ್​ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತ ನಿಂತಿದ್ದ ವೇಳೆ ವ್ಯಕ್ತಿಯೊಬ್ಬ ಹಿಂಬದಿಯಿಂದ ಓಡಿ ಬಂದು ಜಿಗಿದು ಅರ್ನಾಲ್ಡ್​​ ಬೆನ್ನಿಗೆ ಒದ್ದಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅರ್ನಾಲ್ಡ್​ ಅವರು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅರ್ನಾಲ್ಡ್​, ಸಾಕಷ್ಟು ಬಾರಿ ನಡೆಯುವಂತೆ ಅಭಿಮಾನಿಗಳ ನಡುವೆ ಇರುವಾಗ ನಡೆದ ನೂಕಾಟ ಎಂದು ಪ್ರಾರಂಭದಲ್ಲಿ ಅಂದುಕೊಂಡಿದ್ದೆ, ಆದರೆ, ನಿಮ್ಮಂತೆಯೇ ನಾನು ವಿಡಿಯೋ ನೋಡಿದಾಗ ಯಾರೋ ಒಬ್ಬ ನನಗೆ ಒದ್ದಿರುವುದು ಗೊತ್ತಾಯಿತು. ಆದರೆ, ಅಭಿಮಾನಿಗಳೊಂದಿಗಿನ ಸಂವಾದಕ್ಕೆ ಆತ ಅಡ್ಡಿಪಡಿಸಲಿಲ್ಲ ಎಂಬುದೇ ಖುಷಿಯ ವಿಚಾರ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಲ್ಟಿ ಸ್ಪೋರ್ಟ್ಸ್​ ಫೆಸ್ಟಿವಲ್​ಗಳಲ್ಲಿ ಒಂದಾದ ವಾರ್ಷಿಕ ಅರ್ನಾಲ್ಡ್​ ಕ್ಲಾಸಿಕ್​ ಆಫ್ರಿಕಾ ಉತ್ಸವದಲ್ಲಿ ಭಾಗವಹಿಸಲು ಅರ್ನಾಲ್ಡ್​ ಜೋಹಾನ್ಸ್​ ಬರ್ಗ್​ಗೆ ತೆರಳಿದ್ದರು.

ಕ್ರೇಜಿ ಅಭಿಮಾನಿಯೊಬ್ಬ ಆಕಸ್ಮಿಕವಾಗಿ ಹಲ್ಲೆ ಮಾಡಿದ್ದು ಒಂದು ದುಖಃಕರವಾದ ಘಟನೆ. ಅರ್ನಾಲ್ಡ್​ ಅಥ್ಲೆಟ್​ಗಳಿಗೆ ಬೆಂಬಲ ನೀಡಲು ಅವರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಈ ರೀತಿ ನಡೆದಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

ಅರ್ನಾಲ್ಡ್​ ಗೆ ಹುಚ್ಚು ಅಭಿಮಾನದ ಕಿಕ್​ ಮಾಡಿದ ಆರೋಪಿಯನ್ನು ತಕ್ಷಣವೇ ಬಂಧಿಸಲಾಗಿದ್ದು, ಈ ಹಿಂದೆ ಇದೇ ರೀತಿಯ ಮತ್ತೊಂದು ಘಟನೆಯನ್ನು ಆತ ಎಸಗಿದ್ದ ಎಂದು ಸ್ಥಳೀಯ ಪೊಲೀಸರು ತಿಳಿಸಿರುವುದಾಗಿ ಸಂಘಟಕರು ಹೇಳಿದ್ದಾರೆ. (ಏಜೆನ್ಸೀಸ್​)