ಧೋನಿ ಸ್ಟೈಲ್​ನಲ್ಲಿ ಮ್ಯಾಚ್​ ಫಿನಿಶ್​ ಮಾಡಿದ ಆಂಗ್ಲ ಪಡೆಯ ಬೆನ್​ ಸ್ಟೋಕ್ಸ್​!

ನವದೆಹಲಿ: ವರುಣನ ಅಡ್ಡಿಯಿಂದ ಕೆಲವೇ ಓವರ್​ಗಳಿಗೆ ಸೀಮಿತವಾದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ವಿಕೆಟ್​ ಪಡೆಯುವಲ್ಲಿ ವಿಫಲವಾದರೂ ತನ್ನ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಶ್ರೀಲಂಕಾ ವಿರುದ್ಧ ತಮ್ಮ ತಂಡ ಗೆಲುವಿನ ನಗೆ ಬೀರಲು ಕಾರಣರಾಗಿದ್ದಾರೆ. ವಿಶೇಷವೆಂದರೆ ಎಂ.ಎಸ್​. ಧೋನಿ ಶೈಲಿಯಲ್ಲಿ ಮ್ಯಾಚ್​ ಫಿನಿಶ್​ ಮಾಡಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.

ಲಂಕಾದ ಪಲ್ಲೆಕೇಲೆ ಅಂತಾರಾಷ್ಟ್ರೀಯ ಕ್ರಿಡಾಂಗಣದಲ್ಲಿ ಬುಧವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ,​ ಲಂಕಾ ಪಡೆಗೆ ಸೋಲುಣಿಸಿ 7 ವಿಕೆಟ್​ಗಳ ಜಯ ಸಾಧಿಸಿತು. ಮಳೆ ಅಡ್ಡಿಯಾದ್ದರಿಂದ ಪಂದ್ಯವನ್ನು 21 ಓವರ್​ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್​ ಮಾಡಿದ ಲಂಕಾ ತಂಡ 9 ವಿಕೆಟ್​ ನಷ್ಟಕ್ಕೆ 150 ರನ್​ ಗಳಿಸಿತ್ತು. ಗುರಿ ಬೆನ್ನತ್ತಿದ ಆಂಗ್ಲ 18.3 ಓವರ್​ಗಳಲ್ಲೇ 3 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸುವ ಮೂಲಕ ಗುರಿ ಮುಟ್ಟಿತು.

ಗಮನ ಸೆಳೆದ ಸ್ಟೋಕ್ಸ್​, ಮಾರ್ಗನ್​ ಜತೆಯಾಟ
ಪಂದ್ಯದಲ್ಲಿ ಉತ್ತಮ ಜತೆಯಾಟವಾಡಿದ ಸ್ಟೋಕ್ಸ್​ ಮಾರ್ಗನ್​ 4ನೇ ವಿಕೆಟ್​ಗೆ 73 ರನ್​ ಜತೆಯಾಟವಾಡಿದರು. ಮಾರ್ಗನ್​(58*) ಹಾಗೂ ಸ್ಟೋಕ್ಸ್​(35*) ರನ್​ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಶೇಷವಾಗಿ ಟೀಂ ಇಂಡಿಯಾದ ಕೂಲ್​ ಕ್ಯಾಪ್ಟನ್​ ಧೋನಿ ರೀತಿಯಲ್ಲೇ ಸಿಕ್ಸರ್​ ಬಾರಿಸುವ ಮೂಲಕ ಪಂದ್ಯವನ್ನು ಮುಗಿಸಿದರು. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಸದ್ಯ ಇಂಗ್ಲೆಂಡ್​ 2-0 ಯಿಂದ ಮುನ್ನೆಡೆ ಕಾಯ್ದುಕೊಂಡಿದೆ. (ಏಜೆನ್ಸೀಸ್​)

https://twitter.com/ghanta_10/status/1052626082321653762

https://twitter.com/ghanta_10/status/1052626627451113473