ಅದ್ಭುತ ಕ್ಯಾಚ್​ಗೆ ಸಾಕ್ಷಿಯಾದ ಪಾಕ್​ ಆಟಗಾರ ಬಾಬರ್​ ಅಜಾಮ್​!

ನವದೆಹಲಿ: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆದ ಟೆಸ್ಟ್​ ಪಂದ್ಯದ ವೇಳೆ ಪಾಕ್​ ಆಟಗಾರ ಬಾಬರ್​ ಅಜಾಮ್​ ಹಿಡಿದ ಅದ್ಭುತ ಕ್ಯಾಚ್​ ಕ್ರೀಡಾಭಿಮಾನಿಗಳ ಮನವನ್ನು ಗೆದ್ದಿದೆ.

ಗುರುವಾರ ಅಂತ್ಯವಾದ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 8 ವಿಕೆಟ್​ ನಷ್ಟದಿಂದ ಬಹಳ ಕಷ್ಟಪಟ್ಟು ಪಂದ್ಯವನ್ನು ಡ್ರಾ ಮಾಡಿಕೊಂಡರು. ಉಸ್ಮಾನ್​ ಖವಾಜಾರ 141 ರನ್​ ನೆರವಿನಿಂದ ಪಾಕ್​​ ನೀಡಿದ್ದ 462 ರನ್​ ಗುರಿಯನ್ನು ಮುಟ್ಟಲು ಆಸಿಸ್​ ಸಾಕಷ್ಟು ಪರದಾಡಿತು. ತಂಡದ ಪರ ಟ್ರಿವಿಸ್​​ ಹೆಡ್(72)​ ಹಾಗೂ ನಾಯಕ ಟೀಮ್​ ಪೈನೆ(61*) ರನ್​ ನೆರವಿನಿಂದ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಮೂಲಕ ಆಸಿಸ್​ ಮಾನ ಉಳಿಸಿಕೊಂಡಿತು.

ಪಾಕ್​ ಬೌಲರ್​ಗಳಾದ ಯಾಸಿರ್​ ಷಾ, ಮಹಮ್ಮದ್​ ಅಬ್ಬಾಸ್​ ಮತ್ತು ಬಿಲಾಲ್​ ಆಸಿಫ್​ ಅವರ ಮಾರಕ ದಾಳಿಗೆ ಆಸಿಸ್​ ಆಟಗಾರರು ತರಗೆಲೆಗಳಂತೆ ಉದುರಿ ಹೋದರು. ಈ ವೇಳೆ ಬಾಬರ್ ಅಜಾಮ್​​ ಹಿಡಿದ ಕ್ಯಾಚ್​ ಮೈದಾನದಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳು ಒಂದು ಕ್ಷಣ ಎದ್ದು ನಿಂತು ಸಂಭ್ರಮಿಸುವಂತೆ ಮಾಡಿತು.

ಪಂದ್ಯದ 128ನೇ ಓವರ್​ನ ಮೊದಲನೇ ಎಸೆತದಲ್ಲಿ ಈ ಜಾದೂ ನಡೆಯಿತು. ಕ್ರೀಸ್​ನಲ್ಲಿದ್ದ ಮಿಚೆಲ್​ ಸ್ಟಾರ್ಕ್​, ಷಾ ಎಸೆದ ಬಾಲ್​ಗೆ ಬ್ಯಾಕ್​ ಡೀಪ್​ ಮಾಡಲು ಹೋಗಿ ಬಲಿಯಾದರು. ಸಿಲ್ಲಿ ಪಾಯಿಂಟ್​ನಲ್ಲಿ ನಿಂತಿದ್ದ ಬಾಬರ್​ ರೋಮಾಚಂನಕಾರಿಯಾದ ಡೈವ್​​​ ಮೂಲಕ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್​ ಹಿಡಿದರು. (ಏಜೆನ್ಸೀಸ್​)

https://twitter.com/TheSaniKhan/status/1050365168448868352