ಬೂಮ್ರಾ ಬೌಲಿಂಗ್​ ಶೈಲಿ ಕಾಪಿ ಮಾಡಿ ಕ್ರೀಡಾಭಿಮಾನಿಗಳ ಮನಗೆದ್ದ ಪಾಕ್​ ಬಾಲಕ!

ನವದೆಹಲಿ: ಟೀಂ ಇಂಡಿಯಾದ ಡೆತ್​ ಓವರ್​ ಸ್ಪೆಷಲಿಸ್ಟ್​ ಹಾಗೂ ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರಿತ್​ ಬೂಮ್ರಾ ಅವರ ಬೌಲಿಂಗ್​ ಶೈಲಿ ತುಂಬಾ ವಿಶೇಷವಾಗಿದೆ. ಎದುರಾಳಿ ಬ್ಯಾಟ್ಸ್​ಮನ್​ನನ್ನು ಒಂದು ಕ್ಷಣ ಗೊಂದಲಕ್ಕೀಡು ಮಾಡುವ ಇವರ ಬೌಲಿಂಗ್​ ಶೈಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.​

ವಿಶೇಷವೆಂದರೆ ಪಾಕಿಸ್ತಾನದ ಐದು ವರ್ಷದ ಬಾಲಕನೊಬ್ಬ ಬೂಮ್ರಾ ಅವರ ಬೌಲಿಂಗ್​ ಶೈಲಿಯನ್ನು ನಕಲು ಮಾಡಿ ಕ್ರೀಡಾಭಿಮಾನಿಗಳ ಗಮನವನ್ನು ತನ್ನೆಡೆಗೆ ಸೆಳೆದಿದ್ದಾನೆ. ಟ್ವೀಟ್​ ಲೋಕದಲ್ಲಿ ಬಾಲಕ ಬೌಲಿಂಗ್​ ಮಾಡುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಸಾಕಷ್ಟು ವೈರಲ್​ ಆಗಿದೆ. ಈತ ಬೂಮ್ರಾ ಅವರ ದೊಡ್ಡ ಅಭಿಮಾನಿಯಾಗಿದ್ದು, ಪ್ರತಿಬಾರಿ ಬೌಲಿಂಗ್​ ಮಾಡುವಾಗಲೂ ಈತ ಬೂಮ್ರಾ ಅವರನ್ನೇ ನಕಲು ಮಾಡುತ್ತಾನೆ ಎಂದು ಬರೆಯಲಾಗಿದೆ.

ಅಹಮದಾಬಾದ್​ ಮೂಲದ ಜಸ್ಪ್ರಿತ್​ ಬೂಮ್ರಾ ಬಲಗೈ ವೇಗಿಯಾಗಿದ್ದು, ಟೀಂ ಇಂಡಿಯಾದಲ್ಲಿ ಪ್ರಮುಖ ಬೌಲರ್​ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್​ನಲ್ಲಿ ಮುಂಬೈ ಪರ ಆಡಿ ತನ್ನ ಪ್ರತಿಭೆಯಿಂದ ಗಮನ ಸೆಳೆದು ಟೀಂ ಇಂಡಿಯಾಕ್ಕೆ ಲಗ್ಗೆಯಿಟ್ಟ ಬೂಮ್ರಾ ಇದುವರೆಗೂ ಆಡಿರುವ 6 ಟೆಸ್ಟ್​ ಪಂದ್ಯಗಳಲ್ಲಿ 28 ವಿಕೆಟ್​ ಪಡೆದಿದ್ದಾರೆ. ಅಲ್ಲದೆ, 41 ಏಕದಿನ ಪಂದ್ಯದಲ್ಲಿ 72 ವಿಕೆಟ್​ ಹಾಗೂ 35 ಟಿ20 ಪಂದ್ಯಗಳಲ್ಲಿ 43 ವಿಕೆಟ್​ ಕಬಳಿಸಿ ಸ್ಟಾರ್​ ಬೌಲರ್​ ಆಗಿ ಮಿಂಚಿದ್ದಾರೆ. (ಏಜೆನ್ಸೀಸ್​)