ಕಾಡಿಗೆ ತ್ಯಾಜ್ಯ ಎಸೆದರೆ ತಟ್ಟಲಿದೆ ಬಿಸಿ

ವೇಣುವಿನೋದ್ ಕೆ.ಎಸ್.ಮಂಗಳೂರು
ಹೆದ್ದಾರಿ ಬದಿ, ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ತಲೆಯೆತ್ತುವ ಅಂಗಡಿಗಳು ಬೇಕಾಬಿಟ್ಟಿಯಾಗಿ ಅರಣ್ಯಪ್ರದೇಶದಲ್ಲಿ ತ್ಯಾಜ್ಯ ಚೆಲ್ಲುವುದನ್ನು ನಿಯಂತ್ರಿಸಲು ದ.ಕ.ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ಇದಕ್ಕೆ ಮುನ್ನುಡಿಯಾಗಿ ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ಬಳಿ ಮೀಸಲು ಅರಣ್ಯ ಪ್ರದೇಶದಲ್ಲಿ ರಸ್ತೆ ಇಕ್ಕೆಲಗಳಲ್ಲಿ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

ಕರಾವಳಿಯಲ್ಲಿ ಅರಣ್ಯ ಪ್ರದೇಶಕ್ಕೆ ತಾಗಿಕೊಂಡಿರುವ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಈ ರೀತಿ ಅಂಗಡಿಗಳು ತ್ಯಾಜ್ಯ ಚೆಲ್ಲುವ ಪರಿಪಾಠ ಹೊಂದಿವೆ. ಪ್ರಸ್ತುತ ತೆಗೆದುಕೊಂಡಿರುವ ಕ್ರಮ ಕೇವಲ ಪ್ರಾತಿನಿಧಿಕ. ಆದರೆ, ಈ ಮೂಲಕ ಜಿಲ್ಲೆಯಲ್ಲಿ ಇಂತಹ ಬೆಳವಣಿಗೆಗೆ ನಿಯಂತ್ರಣ ಸಾಧ್ಯ ಎನ್ನುವುದು ಅಧಿಕಾರಿಗಳ ಲೆಕ್ಕಾಚಾರ.

ಒಂದೂವರೆ ತಿಂಗಳ ಹಿಂದೆ ಪುತ್ತೂರು ತಾಲೂಕಿನಲ್ಲೂ ಲಾರಿಯಲ್ಲಿ ತ್ಯಾಜ್ಯ ತಂದು ಕಾಡಿಗೆ ಎಸೆಯುವುದನ್ನು ಸ್ಥಳೀಯರು ಪತ್ತೆ ಮಾಡಿ, ಗ್ರಾಮ ಪಂಚಾಯಿತಿ ಪಿಡಿಒ ಸಹಕಾರದಲ್ಲಿ ಪೊಲೀಸರಿಗೆ ಒಪ್ಪಿಸಿದ್ದರು. ಈಗ ಈ ಬಗ್ಗೆ ಗ್ರಾಮಸ್ಥರು, ಪಿಡಿಒ ಮತ್ತು ಗ್ರಾ.ಪಂ. ಸಿಬ್ಬಂದಿಯಲ್ಲಿ ಜಾಗೃತಿ ಹೆಚ್ಚಾಗಿದೆ ಎನ್ನುತ್ತಾರೆ ಜಿ.ಪಂ.ಸಿಇಒ ಸೆಲ್ವಮಣಿ.ಆರ್.

ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ ಪೆರಿಯಶಾಂತಿ ಭಾಗದಲ್ಲಿ ಪ್ರವಾಸಿಗರು, ಪ್ರಯಾಣಿಕರು ಹೆಚ್ಚಾಗಿರುವ ಕಾರಣ ಅನಧಿಕೃತ ಅಂಗಡಿಗಳು ಹೆಚ್ಚಿವೆ. ಗುಂಡ್ಯ, ನೆಲ್ಯಾಡಿ ಸೇರಿದಂತೆ ಉದ್ದಕ್ಕೂ ಇದೇ ಮಾದರಿಯ ಅಂಗಡಿಗಳಿವೆ. ಪೆರಿಯಶಾಂತಿಯಲ್ಲಿಯಂತೂ ಪ್ಲಾಸ್ಟಿಕ್ ಸೇರಿದಂತೆ ಹಲವು ಅಪಾಯಕಾರಿ ತ್ಯಾಜ್ಯಗಳನ್ನು ಮೀಸಲು ಅರಣ್ಯದಲ್ಲಿ ಚೆಲ್ಲಲಾಗುತ್ತಿತ್ತು. ಇದನ್ನು ತಪ್ಪಿಸಲು ಅರಣ್ಯ ಇಲಾಖೆ ಪದೇಪದೆ ಅಂಗಡಿಗಳಿಗೆ ಎಚ್ಚರಿಕೆ ನೀಡಿತ್ತು. ತೆರವಿಗೆ ಮುಂದಾದಾಗ ತಮಗೆ ಉದ್ದಿಮೆ ಪರವಾನಗಿ ಸಿಕ್ಕಿದೆ ಎಂದು ಅಂಗಡಿಗಳ ಮಾಲೀಕರು ಹೇಳುತ್ತಿದ್ದರು. ರಾಜಕೀಯ ವ್ಯಕ್ತಿಗಳ ಪ್ರಭಾವವನ್ನೂ ಬಳಸಿಕೊಳ್ಳುತ್ತಿದ್ದರು.
ಇದನ್ನು ಗಮನಿಸಿದ್ದ ಮಂಗಳೂರಿನ ರಾಷ್ಟ್ರೀಯ ಪರಿಸರ ಸೇವಾ ಪ್ರತಿಷ್ಠಾನದ(ಎನ್‌ಇಸಿಎಫ್) ಸಂಚಾಲಕ ಶಶಿಧರ ಶೆಟ್ಟಿ ಅರಣ್ಯ ಇಲಾಖೆ ವರದಿ ಆಧರಿಸಿ ಜಿ.ಪಂ.ಸಿಇಒಗೆ ದೂರು ನೀಡಿದರು. ಅದರಂತೆ ಸಿಇಒ ಪುತ್ತೂರು ತಾ.ಪಂ.ಕಾರ್ಯನಿರ್ವಹಣಾಧಿಕಾರಿಯವರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು. ಪೆರಿಯಶಾಂತಿ ವ್ಯಾಪ್ತಿಯ ಕೌಕ್ರಾಡಿ ಗ್ರಾ.ಪಂ. ಪಿಡಿಒ ಕೊನೆಗೂ 14 ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿ, ತೆರವುಗೊಳಿಸುವಲ್ಲಿ ಯಶಸ್ವಿಯಾದರು.

ಯಾತ್ರಿಕರು, ಪ್ರಯಾಣಿಕರು, ಪ್ರವಾಸಿಗರು ಮೀಸಲು ಅರಣ್ಯಗಳನ್ನು ಹೊಲಸು ಮಾಡುತ್ತಾರೆ. ಅಂಗಡಿಗಳೂ ಸಾಕಷ್ಟು ಪ್ರಮಾಣದಲ್ಲಿ ಕಸ ಚೆಲ್ಲುತ್ತಿವೆ. ಜಿ.ಪಂ.ಸಿಇಒ ಅವರ ಆದೇಶ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕಟ್ಟುನಿಟ್ಟಾಗಿ ಜಾರಿ ಆಗಬೇಕು.
– ಶಶಿಧರ ಶೆಟ್ಟಿ, ಸಂಚಾಲಕ, ಎನ್‌ಇಸಿಎಫ್

ಎಲ್ಲ ಗ್ರಾ.ಪಂ.ಪಿಡಿಒಗಳಲ್ಲೂ ಈಗ ಜಾಗೃತಿ ಇದೆ. ತ್ಯಾಜ್ಯ ಚೆಲ್ಲುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಎಲ್ಲ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಆರ್.ಸೆಲ್ವಮಣಿ, ಜಿ.ಪಂ ಸಿಇಒ

Leave a Reply

Your email address will not be published. Required fields are marked *