ಶಾಲೆ ಹಿಂಬದಿ ಗುಜರಿ ಸಾಮಗ್ರಿ

ಕುಮಟಾ: ಇಲ್ಲಿನ ಖೈರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ ಗುಜರಿ ಸಾಮಗ್ರಿಗಳಲ್ಲಿ ಮಳೆ ನೀರು ನಿಂತು, ಸೊಳ್ಳೆ ಉತ್ಪತ್ತಿಯ ತಾಣವಾಗಿದೆ. ಇದರಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗ ಬಾಧಿಸುವ ಆತಂಕ ಎದುರಾಗಿದೆ.

ಮಿರ್ಜಾನ್ ಗ್ರಾಪಂ ವ್ಯಾಪ್ತಿಯ ಖೈರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ಗುಜರಿ ಸಾಮಗ್ರಿ ಸಂಗ್ರಹಿಸಿಡಲಾಗಿದೆ. ಪ್ಲಾಸ್ಟಿಕ್ ಸಾಮಗ್ರಿ, ಬಾಟಲಿಗಳು ಸೇರಿದಂತೆ ಮರು ಬಳಕೆಗೆ ಬರುವಂತಹ ಹಲವು ಗೃಹಬಳಕೆ ವಸ್ತುಗಳನ್ನು ಶೇಖರಿಸಲಾಗಿದೆ. ಈ ಸಾಮಗ್ರಿಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿದ್ದು, ಸೊಳ್ಳೆ ಉತ್ಪತ್ತಿಗಳ ತಾಣವಾಗಿದೆ. ಡೆಂಘೆ, ಮಲೇರಿಯಾ, ಚಿಕನ್ ಗುನ್ಯಾ ಸೇರಿದಂತೆ ಕೆಲ ಅಪಾಯಕಾರಿ ಸಾಂಕ್ರಾಮಿಕ ರೋಗಗಳು ಶಾಲಾ ಮಕ್ಕಳನ್ನು ಬಾಧಿಸುವ ಸಾಧ್ಯತೆ ಅಧಿಕವಾಗಿದೆ. ಹಾಗಾಗಿ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುವಂತಾಗಿದೆ. ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಶಿಕ್ಷಕರು ಸೊಳ್ಳೆ ಬತ್ತಿಯನ್ನು ಉರಿಸುವ ಪ್ರಮೇಯ ಎದುರಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ಗುಜರಿ ಸಾಮಗ್ರಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂಬ ಒತ್ತಾಯ ಪಾಲಕರು ಮತ್ತು ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಪಾಲಕರ ಸಭೆ

ಈ ಸಂಬಂಧ ಪಾಲಕರ ಸಭೆ ಕರೆದ ಎಸ್​ಡಿಎಂಸಿ ಅಧ್ಯಕ್ಷೆ ಸವಿತಾ ಅಂಬಿಗ ಅವರು, ಪಾಲಕರು ನೀಡಿದ ದೂರಿನ ಬಗೆಗೆ ಚರ್ಚೆ ನಡೆಸಲಾಗಿದೆ. ಸೊಳ್ಳೆ ಕಾಟಕ್ಕೆ ಆತಂಕಗೊಂಡ ಪಾಲಕರು ಈಗಾಗಲೇ ನಮ್ಮ ಶಾಲೆಯ ನಾಲ್ಕು ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ವರ್ಗಾಹಿಸಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಪಂ ಪಿಡಿಒ ಅವರನ್ನು ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಪಂ ಸಭೆ

ಈ ಕುರಿತು ಮಿರ್ಜಾನ್ ಗ್ರಾಪಂ ಅಧ್ಯಕ್ಷೆ ನಾಗರತ್ನ ನಾಯ್ಕ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ತುರ್ತು ಸಭೆ ನಡೆದಿತ್ತು. ಬಹುತೇಕ ಸದಸ್ಯರು ಗುಜರಿ ಸಾಮಗ್ರಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ನಿರ್ಣಯ ಕೈಗೊಂಡಿದ್ದಾರೆ.

ಗ್ರಾಪಂನಲ್ಲಾದ ನಿರ್ಣಯದಂತೆ ಗುಜರಿ ಸಾಮಗ್ರಿಗಳನ್ನು ಸ್ಥಳಾಂತರಿಸುವ ಸಂಬಂಧ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ಕೆಲ ದಿನಗಳ ಗಡುವು ನೀಡಿದ್ದೇವೆ. ಸ್ಥಳಾಂತರವಾಗದಿದ್ದರೆ ಪೊಲೀಸ್ ಬಲದಿಂದ ಸಾಮಗ್ರಿ ತೆರವು ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
ಲಂಬೋಧರ ಗಾಂವ್ಕರ್, ಮಿರ್ಜಾನ್ ಪಿಡಿಒ

Leave a Reply

Your email address will not be published. Required fields are marked *