ಲೋಕೇಶ್ ಎಂ. ಐಹೊಳೆ ಜಗಳೂರು
ಚಿತ್ರದುರ್ಗ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ- 50 ರಸ್ತೆ ಕಾಮಗಾರಿ ಲೋಪದಿಂದ ಕಲ್ಲೇದೇವರಪುರ ಸೇರಿ ಕೆಲವು ಗ್ರಾಮಗಳಲ್ಲಿ ಚರಂಡಿ ಸಮಸ್ಯೆಯಿಂದ ಜನರು ಸಂಕಷ್ಟ ಎದುರಿಸಿದರೆ, ಇನ್ನು ಕೆಲವರು ಪರಿಹಾರದ ಹಣ ಸಿಗದೇ ಅಲೆದಾಡುವಂತಾಗಿದೆ.
ಕಲ್ಲೇದೇವರಪುರ, ಬಸಪ್ಪನಹಟ್ಟಿ ಸೇರಿ ಕೆಲವು ಗ್ರಾಮಗಳ ಜನರು ರಸ್ತೆ ಅಗಲೀಕರಣಕ್ಕೆ ಮನೆಗಳನ್ನು ಕಳೆದುಕೊಂಡಿದ್ದರು. ಕಾಮಗಾರಿ ಕೈಗೆತ್ತಿಕೊಂಡಿದ್ದ ಎಲ್ಆಂಡ್ಟಿ ಕಂಪನಿ ಕೆಲವರಿಗೆ ಪರಿಹಾರದ ಹಣ ನೀಡಿದೆ. ಇನ್ನು ಕೆಲವರಿಗೆ ಪರಿಹಾರ ಹಣ ಸಿಗದೆ ಸಂಕಷ್ಟದಲ್ಲಿದ್ದಾರೆ.
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಎಷ್ಟೇ ಮನವಿ, ಹೋರಾಟ ಮಾಡಿದರೂ ಕಂಪನಿಯವರು ಕಿವಿಗೊಡುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಕಾಮಗಾರಿ ಆರಂಭಕ್ಕೂ ಮುನ್ನ ರಸ್ತೆ, ಚರಂಡಿ ನಿರ್ವಿುಸುವುದಾಗಿ ಭರವಸೆ ನೀಡಿದ್ದರು, ಆದರೆ, ಚರಂಡಿಯನ್ನು ಅರೆಬರೆ ಮಾಡಿ ಅರ್ಧಕ್ಕೆ ಬಿಟ್ಟಿದ್ದಾರೆ. ಮಳೆ ಮತ್ತು ತ್ಯಾಜ್ಯ ನೀರು ಹರಿದು ಹೋಗಲು ದಾರಿ ಇಲ್ಲದೆ ಒಂದೆಡೆ ಸೇರಿ ಮಿನಿ ಕೆರೆಯಂತೆ ನಿರ್ವಣವಾಗಿದೆ. ಇದರ ದುರ್ವಾಸನೆ ನಿವಾಸಿಗಳಿಗೆ ಉಸಿರುಗಟ್ಟಿದ ವಾತಾವರಣವನ್ನುಂಟು ಮಾಡಿದೆ.
ತೆರೆದ ಪೈಪ್ಲೈನ್: ಶಾಂತಿಸಾಗರದಿಂದ ಜಗಳೂರು ಪಟ್ಟಣಕ್ಕೆ ಪೈಪ್ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಪೈಪ್ಗಳನ್ನು ಸ್ಥಳಾಂತರಿಸಲಾಗಿತ್ತು. ಆದರೆ, ಕಂಪನಿಯ ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಕಲ್ಲೇದೇವರಪುರ ಬ್ರಿಡ್ಜ್ ಕೆಳಗಿನ ಪೈಪ್ ಮುಚ್ಚಲಾಗಿಲ್ಲ. ಇದರಿಂದ ಕಾರು, ಬೈಕ್ ಸವಾರರು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ. ಆಕಸ್ಮಿಕವಾಗಿ ಪೈಪ್ ಒಡೆದರೆ ಸಾಕಷ್ಟು ನೀರು ಪೋಲಾಗುತ್ತದೆ. ಇದರಿಂದ ಪಟ್ಟಣ ಪಂಚಾಯಿತಿ ಬೊಕ್ಕಸಕ್ಕೆ ಹೊಡೆತ ಬೀಳಲಿದೆ. ಗ್ರಾಮಸ್ಥರು ಕಂಪನಿಯ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಗ್ರಾಮದಲ್ಲಿ ಒಂದು ರಸ್ತೆ, ಚರಂಡಿಯೂ ನೆಟ್ಟಗಿಲ್ಲ, ಸರಿಪಡಿಸಿಕೊಡುವಂತೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಲಾಗಿದ್ದು, ಇದೀಗ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ.
-ತಿಪ್ಪೇಸ್ವಾಮಿ, ಗ್ರಾಮದ ಮುಖಂಡ.
ಊರಿನ ಕಲುಷಿತ ನೀರೆಲ್ಲ ಮನೆಗಳ ಮುಂದೆ ನಿಂತು ದೊಡ್ಡ ಗುಂಡಿ ಬಿದ್ದಿದೆ. ಚರಂಡಿಗಳಲ್ಲಿ ತ್ಯಾಜ್ಯ ನೀರು ತುಂಬಿಕೊಂಡು ದುರ್ವಾಸನೆ ಬೀರುತ್ತಿವೆ. ಬೆಳಗ್ಗೆ ಮತ್ತು ರಾತ್ರಿ ವೇಳೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ನಿದ್ರೆ ಮಾಡಲು ಸಾದ್ಯವಾಗುತ್ತಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯ್ಕೆ ಗ್ರಾಮವೇ ಅನಾರೋಗ್ಯಕ್ಕೆ ತುತ್ತಾಗುತ್ತಿದೆ.
-ಸಣ್ಣ ಸೂರಪ್ಪ, ತಾ.ಪಂ ಮಾಜಿ ಅಧ್ಯಕ್ಷ
ಎನ್ಎಚ್ಐಯವರು ಹೊಸದಾಗಿ ಕಾಮಗಾರಿ ಕ್ರಿಯಾಯೋಜನೆ ರೂಪಿಸಿ ಟೆಂಡರ್ ಕರೆಯಬೇಕಾಗಿದೆ. ಈ ಬಗ್ಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದ್ದಾರೆ. ತಾತ್ಕಾಲಿಕವಾಗಿ ಜಿಲ್ಲಾ ಪಂಚಾಯಿತಿ ಇಲಾಖೆಯು ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡಲಿದೆ.
-ರವಿ, ಇಂಜಿನಿಯರ್