ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ 5 ಸಾವಿರ ಟನ್ಗಿಂತಲೂ ಕಸ ಉತ್ಪಾದನೆಯಾಗುತ್ತಿದ್ದು, ಕಸ ಸುರಿಯಲು ಮಿಟ್ಟಗಾನಹಳ್ಳಿಯಲ್ಲಿ ಗುರುತಿಸಲಾಗಿರುವ ಕ್ವಾರಿ ಭರ್ತಿಯಾಗುತ್ತಿದ್ದು, ಮತ್ತೊಮ್ಮೆ ಕಸ ವಿಲೇವಾರಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. 1.3 ಕೋಟಿ ಜನಸಂಖ್ಯೆ ಹೊಂದಿರುವ ರಾಜಧಾನಿಯಲ್ಲಿ 5 ಸಾವಿರ ಟನ್ ಕಸ ಉತ್ಪಾದನೆಯಾದರೂ, 2,200 ಮೆ.ಟನ್ ಕಸ ಮಾತ್ರ ಸಂಸ್ಕರಣೆಯಾಗಿ ವಿಲೇವಾರಿಯಾಗುತ್ತಿದೆ. ಉಳಿದ 2,400 ಮೆ.ಟನ್ಗಿಂತ ಹೆಚ್ಚು ಕಸವನ್ನು ತಾತ್ಕಾಲಿಕವಾಗಿ ಕಸ ಸುರಿಯುವ ಸ್ಥಳಗಳನ್ನು ಗುರುತಿಸಿ ಸುರಿಯಲಾಗುತ್ತಿದೆ. ಈಗಾಗಲೇ ಸಾವಿರಾರು ಟನ್ ಕಸವನ್ನು ಅವೈಜ್ಞಾನಿಕವಾಗಿ ಹೊರ ವಲಯದ ಗುಂಡಿಗಳು, ಬಯಲು ಪ್ರದೇಶಗಳು ಹಾಗೂ ಕಲ್ಲು ಕ್ವಾರಿಯಲ್ಲಿ ಸುರಿಯಲಾಗಿದೆ.
ಕಳೆದ ಅಕ್ಟೋಬರ್ನಿಂದ ಮಿಟ್ಟಗಾನಹಳ್ಳಿಯ 1ನೇ ಕ್ವಾರಿಯಲ್ಲಿ ನಿತ್ಯ 2,200 ಟನ್ಗೂ ಹೆಚ್ಚು ಕಸ ಸುರಿಯಲಾಗುತ್ತಿದೆ. ಪ್ರಸ್ತುತ ಈ ಕ್ವಾರಿಯಲ್ಲಿ ಜನವರಿ ಅಂತ್ಯದವರೆಗೂ ಕಸ ಸುರಿಯಲು ಸ್ಥಳವಿದೆ. ನಂತರ ಅದು ಭರ್ತಿಯಾದರೆ ಕಸ ಸುರಿಯಲು ಜಾಗವೇ ಇಲ್ಲದಂತಾಗುತ್ತದೆ. ಹೀಗಾಗಿ ಕಸ ಸುರಿಯುವ ಸಮಸ್ಯೆ ಮತ್ತೆ ಮುನ್ನೆಲೆಗೆ ಬರಲಿದೆ.
65 ಕೋಟಿ ರೂ. ಟೆಂಡರ್ನಲ್ಲಿ ಅಕ್ರಮ: ಮಿಟ್ಟಗಾನಹಳ್ಳಿಯ 2ನೇ ಕ್ವಾರಿಯಲ್ಲಿ 65 ಕೋಟಿ ರೂ. ವೆಚ್ಚದಲ್ಲಿ ಕಸ ಭೂಭರ್ತಿ, ವೈಜ್ಞಾನಿಕ ಕಾರ್ಯಾಚರಣೆ ಮತ್ತು ನಿರ್ವಹಣಾ ಘಟಕ ಸ್ಥಾಪಿಸಲು ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಗುತ್ತಿಗೆ ಪಡೆವ ವ್ಯಕ್ತಿ ಸರ್ಕಾರಿ ಸಂಸ್ಥೆ ಅಥವಾ ಸ್ಥಳೀಯ ಸಂಸ್ಥೆಯಲ್ಲಿ ಭೂಭರ್ತಿ ಘಟಕದ ವೈಜ್ಞಾನಿಕ ವಿಲೇವಾರಿ ಮಾಡಿರುವ ಅನುಭವ ಹೊಂದಿರಬೇಕು ಎಂಬ ಮಾನದಂಡವಿತ್ತು. ಬಿಡ್ ಪೂರ್ವಭಾವಿ ಸಭೆಯ ನಂತರ ಟೆಂಡರ್ ನಿಯಮ ಬದಲಿಸಿ ಖಾಸಗಿ ಸಂಸ್ಥೆಯಲ್ಲಿ ಕಸ ವಿಲೇವಾರಿ ಅನುಭವವಿದ್ದವರೂ ಅರ್ಜಿ ಬಿಡ್ ಪಡೆಯಲು ವೇದಿಕೆ ಕಲ್ಪಿಸಿದ್ದಾರೆ.
ಕ್ವಾರಿ ಟೆಂಡರ್ಗೆ ತಡೆ
ಮಿಟ್ಟಗಾನಹಳ್ಳಿ 2ನೇ ಕ್ವಾರಿಯಲ್ಲಿ 1 ವರ್ಷ ಕಸ ಸುರಿಯುವಷ್ಟು ಸ್ಥಳ ಗುರುತಿಸಲಾಗಿದ್ದು, ಈ ಟೆಂಡರ್ನಲ್ಲಿ ಅನರ್ಹರಿಗೆ ಟೆಂಡರ್ ನೀಡಿದರೆ ಕಸದ ಸಮಸ್ಯೆ ಎದುರಾಗಲಿದೆ. ಹೀಗಾಗಿ ಟೆಂಡರ್ನ್ನು ಸರ್ಕಾರ ತಡೆಹಿಡಿದಿದೆ. ಟೆಂಡರ್ ರದ್ದುಪಡಿಸಿ ಮರು ಟೆಂಡರ್ ಕರೆದರೂ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಲು ಕನಿಷ್ಟ 45 ದಿನ ಬೇಕಾಗುತ್ತದೆ. ಸರ್ಕಾರ ಈ ಬಗ್ಗೆ ಶೀಘ್ರ ಕ್ರಮವಹಿಸದಿದ್ದರೆ ಕಸದ ಸಮಸ್ಯೆಯಿಂದ ನಗರದ ಜನತೆ ತೊಂದರೆಗೊಳಗಾಗಬೇಕಾಗುತ್ತದೆ.
ಮಿಟ್ಟಗಾನಹಳ್ಳಿಯಲ್ಲಿ 1 ವರ್ಷದ ಕಸ ಸುರಿಯು ವಷ್ಟು ಹೊಸ ಕ್ವಾರಿ ಗುರುತಿಸಿ ಟೆಂಡರ್ ಕರೆಯಲಾಗಿದೆ. ಟೆಂಡರ್ಗೆ ಅಕ್ರಮದ ಆರೋಪದ ಕಾರಣ ಸ್ಥಗಿತವಾಗಿದೆ. ಟೆಂಡರ್ ಪ್ರಕ್ರಿಯೆ ಬಗ್ಗೆ ಶೀಘ್ರ ಸರ್ಕಾರ ಮುಂದಿನ ಕ್ರಮ ವಹಿಸಲಿದೆ.
| ರಂದೀಪ್ ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ, ಬಿಬಿಎಂಪಿ
| ಸತೀಶ್ ಕೆ.ಬಳ್ಳಾರಿ