ರಸ್ತೆಯುದ್ದಕ್ಕೂ ತ್ಯಾಜ್ಯ ರಾಶಿ

<<ಪಚ್ಚನಾಡಿಯಲ್ಲಿ ಮೈ ಮೇಲೆ ರಾಚುವ ಭೀತಿ * ವಾಹನ ಅಪಘಾತಕ್ಕೆ ಕಾರಣ>>

ಹರೀಶ್ ಮೋಟುಕಾನ ಮಂಗಳೂರು
ಪಚ್ಚನಾಡಿ ಡಂಪಿಂಗ್ ಯಾರ್ಡ್ ರಸ್ತೆಯಲ್ಲಿ ಸಾಗುವಾಗ ಮೂಗು ಮುಚ್ಚಿಕೊಂಡು ಹೋಗುವುದು ಅನಿವಾರ್ಯ. ಅದಕ್ಕಿಂತ ಹೆಚ್ಚಾಗಿ ಇಲ್ಲಿ ಹೋಗುವಾಗ ತ್ಯಾಜ್ಯ ಯಾವ ಸಂದರ್ಭದಲ್ಲಿ ಮೈ ಮೇಲೆ ರಾಚುತ್ತದೆ ಎನ್ನುವ ಭೀತಿ ಹೆಚ್ಚಾಗಿದೆ.
ಇದಕ್ಕೆ ಕಾರಣ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದು. ಅದನ್ನು ನಾಯಿ, ಕಾಗೆಗಳು ರಸ್ತೆಗೆ ಎಳೆದು ತಂದು ಹಾಕುತ್ತಿವೆ. ವಾಹನಗಳು ಸಾಗುವಾಗ ಕಸದಲ್ಲಿ ದ್ರವ ತ್ಯಾಜ್ಯವಿದ್ದರೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರ ಅಥವಾ ಪಾದಚಾರಿಗಳ ಮೇಲೆ ಎರಚಲ್ಪಡುತ್ತದೆ. ಅಲ್ಲದೆ ದ್ವಿಚಕ್ರ ವಾಹನಗಳ ಚಕ್ರಕ್ಕೆ ಸಿಲುಕಿ ಅಪಘಾತಗಳಿಗೂ ಕಾರಣವಾಗುತ್ತಿದೆ.
ಪಚ್ಚನಾಡಿ ಪರಿಸರದ ಮಂದಾರ ಸೇರಿದಂತೆ ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ಪಾಲಿಕೆ ವತಿಯಿಂದ ಮನೆ ಮನೆಯಿಂದ ಸಂಗ್ರಹಿಸುವ ಕಸದ ವಾಹನಗಳು ಬರುತ್ತಿಲ್ಲ. ಇಲ್ಲಿನ ನಿವಾಸಿಗಳು ಹಾಗೂ ಹೊರಗಡೆಯಿಂದ ಕೆಲವರು ಕಸವನ್ನು ಸಂಗ್ರಹಿಸಿಟ್ಟು ಡಂಪಿಂಗ್ ಯಾರ್ಡ್‌ಗೆ ಹಾಕಲು ಬರುತ್ತಾರೆ. ಇಲ್ಲಿರುವ ಭದ್ರತಾ ಸಿಬ್ಬಂದಿ ಅವರನ್ನು ಯಾರ್ಡ್‌ಗೆ ಪ್ರವೇಶಿಸಲು ಬಿಡುತ್ತಿಲ್ಲ. ಆ ಕಾರಣ ತಂದಿದ್ದ ಕಸವನ್ನು ರಸ್ತೆ ಬದಿಯಲ್ಲೇ ಎಸೆದು ಹೋಗುತ್ತಾರೆ. ಹಲವು ಸಮಯಗಳಿಂದ ಈ ಪರಿಸ್ಥಿತಿ ಇದ್ದು, ಇದರಿಂದಾಗಿ ರಸ್ತೆಯುದ್ದಕ್ಕೂ ತ್ಯಾಜ್ಯ ತುಂಬಿಕೊಂಡಿದೆ.
ಮಳೆಗಾಲದಲ್ಲಿ ಇಲ್ಲಿ ಸಂಚರಿಸುವುದೇ ಪ್ರಯಾಸ. ಕಾಂಕ್ರೀಟ್ ರಸ್ತೆಯಲ್ಲಿ ತ್ಯಾಜ್ಯ ತುಂಬಿಕೊಂಡರೆ ವಾಹನ ಸಾಗುವಾಗ ಎರಚುವ ಜತೆಗೆ ಜಾರುವ ಅಪಾಯವೂ ಹೆಚ್ಚಾಗಿದೆ. ವಾಮಂಜೂರಿನಲ್ಲಿ ಹಲವು ಶಾಲಾ- ಕಾಲೇಜುಗಳಿರುವುದರಿಂದ ಬೆಳಗ್ಗೆ ಮತ್ತು ಸಾಯಂಕಾಲ ನೂರಾರು ಮಕ್ಕಳು ಈ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ.

 ಬೀದಿ ನಾಯಿ ಕಾಟ:  ಪಚ್ಚನಾಡಿಯಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಡಂಪಿಂಗ್ ಯಾರ್ಡ್‌ನಿಂದಲೇ ತ್ಯಾಜ್ಯಗಳನ್ನು ಕಚ್ಚಿಕೊಂಡು ಬಂದು ರಸ್ತೆ, ಸ್ಥಳೀಯರ ಮನೆಯ ಅಂಗಳ, ಶಾಲಾ ಆವರಣದಲ್ಲಿ ಹಾಕುತ್ತಿವೆ. ಕೆಲವರು ಹೆಣ್ಣು ನಾಯಿ ಮರಿಗಳನ್ನು ಇಲ್ಲಿ ತಂದು ಬಿಡುತ್ತಾರೆ. ಇವು ಓಡಾಡುವುದರಿಂದ ದ್ವಿಚಕ್ರ ವಾಹನಗಳ ಅಪಘಾತಕ್ಕೂ ಕಾರಣವಾಗುತ್ತಿವೆ. ದನಗಳು ಡಂಪಿಂಗ್ ಯಾರ್ಡ್‌ನೊಳಗೆ ಹೋಗಿ ಪ್ಲಾಸ್ಟಿಕ್ ತಿನ್ನುತ್ತಿವೆ. ಭದ್ರತಾ ಸಿಬ್ಬಂದಿ ದನಗಳನ್ನು ಯಾರ್ಡ್‌ನೊಳಗೆ ಪ್ರವೇಶಿಸದಂತೆ ಎಚ್ಚರ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹೊರಗೆ ವ್ಯವಸ್ಥೆ ಕಲ್ಪಿಸಬೇಕು: ಸ್ಥಳೀಯರು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ತಂದ ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್ ಒಳಗಡೆ ಹಾಕಲು ಬಿಡದಿದ್ದರೆ, ಹೊರಗಡೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಅದಕ್ಕಾಗಿ ಸೂಕ್ತ ಜಾಗವನ್ನು ಮೀಸಲಿಡಬೇಕು. ಅಥವಾ ದೊಡ್ಡದಾದ ಕಸದ ಬುಟ್ಟಿಯನ್ನು ಇಡಬೇಕು. ಆಗ ರಸ್ತೆ ಬದಿಯಲ್ಲಿ ಕಸ ಬಿಸಾಡುವುದು ತಪ್ಪುತ್ತದೆ. ಮಹಾನಗರ ಪಾಲಿಕೆಗೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಮಂದಾರ ನಿವಾಸಿ ರವೀಂದ್ರ ಭಟ್ ವಿಜಯವಾಣಿಗೆ ತಿಳಿಸಿದ್ದಾರೆ.

ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಬಜ್ಪೆ, ಬಂಟ್ವಾಳ, ಉಳ್ಳಾಲ ಮೊದಲಾದ ಕಡೆಯಿಂದ ವಾಹನಗಳಲ್ಲಿ ಕೋಳಿ ಮೊದಲಾದ ಮಾಂಸ ತ್ಯಾಜ್ಯಗಳನ್ನು ತಂದು ಹಾಕುವವರಿಗೆ ಅವಕಾಶ ನೀಡುತ್ತಾರೆ. ಪ್ಲಾಸ್ಟಿಕ್‌ಗಳಲ್ಲಿ ತ್ಯಾಜ್ಯ ತಂದು ಹಾಕುವ ಸ್ಥಳೀಯರಿಗೆ ಅವಕಾಶವಿಲ್ಲ. ಹಣ ಕೊಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ. ಎಲ್ಲರಿಗೂ ಒಂದೇ ರೀತಿಯಲ್ಲಿ ನ್ಯಾಯ ಒದಗಿಸಬೇಕು.
ರವೀಂದ್ರ ಭಟ್ ಮಂದಾರ ನಿವಾಸಿ