ಗೋಕರ್ಣ: ಇಲ್ಲಿನ ಘನ ಮತ್ತು ಹಸಿ ತ್ಯಾಜ್ಯ ಸಮಸ್ಯೆ ಬಗ್ಗೆ ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ಪರಿಸರ ಸಂಬಂಧಿ ಸಂಘಟನೆಯೊಂದರ ವತಿಯಿಂದ ಪ್ರಕರಣ ದಾಖಲಾಗಿದೆ. ಇಲ್ಲಿನ ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ, ಜಲಮೂಲ ಮತ್ತು ಅರಣ್ಯ ಮಾಲಿನ್ಯ ಹಾಗೂ ಗ್ರೀನ್-ಗೋಕರ್ಣ ಯೋಜನೆ ಕುರಿತು ಈಗಾಗಲೇ ಸಲ್ಲಿಸಲಾದ ಮನವಿಗೆ ಉತ್ತರಿಸದ ಮತ್ತು ಕ್ರಮ ಜರುಗಿಸದ ಬಗ್ಗೆ ಜಿಲ್ಲಾ ಪಂಚಾಯಿತಿ ವಿರುದ್ಧ ಕಳೆದ ಏಪ್ರೀಲ್ನಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಜಿಲ್ಲಾ ವರಿಷ್ಠ ಕುಮಾರಚಂದ್ರ ಅವರ ನೇತೃತ್ವದಲ್ಲಿ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಲಾಯಿತು.
ಇಲ್ಲಿನ ಘನ ಮತ್ತು ಜಲ ತ್ಯಾಜ್ಯಗಳು ಬಂದು ಸೇರುವ ಸಮುದ್ರ ತೀರದ ಸಂಗಮ ನಾಲೆಯ ಪರಿಸರವನ್ನು ಖುದ್ದಾಗಿ ವೀಕ್ಷಿಸಿದ ಅಧಿಕಾರಿಗಳು ಪರಿಸ್ಥಿತಿಯನ್ನು ದಾಖಲಿಸಿಕೊಂಡರು.
ಇದಕ್ಕೂ ಮುನ್ನ ಸ್ಥಳೀಯ ಪಂಚಾಯಿತಿಗೆ ಭೇಟಿ ನೀಡಿದ ಅಧಿಕಾರಿಗಳು ದೂರಿಗೆ ಸಂಬಂಧಿಸಿದ ಕಡತಗಳ ತಪಾಸಣೆ ನಡೆಸಿದರು. ಈ ಹಿಂದೆಯೇ ಲೋಕಾಯುಕ್ತ ವತಿಯಿಂದ ತ್ಯಾಜ್ಯ ಘಟಕಗಳನ್ನು ಸಂದರ್ಶಿಸಲಾಗಿದ್ದು, ಇವುಗಳ ಕುರಿತಾದ ಸಂಪೂರ್ಣ ಮಾಹಿತಿಯ ಕಡತವನ್ನು ಸಿದ್ಧವಿರಿಸಲು ಪಂಚಾಯಿತಿಗೆ ಆದೇಶಿಸಿದರು.
ಭೇಟಿ ಬಗ್ಗೆ ಮಾತನಾಡಿದ ಲೋಕಾಯುಕ್ತ ಎಸ್.ಪಿ. ಕುಮಾರಚಂದ್ರ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಲಾದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ದಾಖಲೆಗಳು ಮತ್ತು ಸ್ಥಳವನ್ನು ಪರಿಶೀಲಿಸಲಾಗಿದೆ. ದೂರಿಗೆ ಸಂಬಂಧಿಸಿದಂತೆ ಈ ತನಕ ಕೈಗೊಳ್ಳಲಾದ ವ್ಯವಸ್ಥೆ, ಅನುದಾನದ ನಿರ್ವಹಣೆ ಇನ್ನಿತರ ಎಲ್ಲ ಮಾಹಿತಿಗಳನ್ನು ಕಲೆ ಹಾಕಿ ನಂತರ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.
ಲೋಕಾಯುಕ್ತ ಇನ್ಸ್ಪೆಕ್ಟರ್ ಪ್ರಸಾದ ಪನ್ನೇಕರ, ವಿನಾಯಕ ಬಿಲ್ಲವ, ಗ್ರಾಪಂ ಪಿಡಿಒ ಮಂಜುನಾಥ ಕೊಡದ, ವಿನಾಯಕ ಸಿದ್ದಾಪುರ, ಇತರರಿದ್ದರು.