ಸರ್ಕಾರದ ಅನುದಾನ ಪೋಲು

blank

ವಿಜಯವಾಣಿ ಸುದ್ದಿಜಾಲ ಕುಂದಾಪುರ

ತ್ರಾಸಿ ಬೀಚ್ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಪತ್ರಿಕೆಗಳಲ್ಲಿ ಮಾತ್ರ ಬರುತ್ತಿದೆ ಬಿಟ್ಟರೆ ಯಾವ ಕೆಲಸವೂ ಆಗುತ್ತಿಲ್ಲ.ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಸ್ಥಳೀಯಾಡಳಿತ ಮತ್ತು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯೋಜನೆ ರೂಪಿಸಿ ಕಾಮಗಾರಿ ನಡೆಸುತ್ತಿದ್ದು, ಪ್ರಯೋಜನ ಇಲದಂತಾಗಿದ್ದು, ಸರ್ಕಾರದ ಅನುದಾನ ಪೋಲು ಮಾಡಲಾಗುತ್ತಿದೆ ಎಂದು ತ್ರಾಸಿ ಗ್ರಾಮಸ್ಥರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತ್ರಾಸಿ ಡಾ.ಅಂಬೇಡ್ಕರ್ ಸಭಾಭವನದಲ್ಲಿ ಬುಧವಾರ ತ್ರಾಸಿ ಗ್ರಾಪಂ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತ್ರಾಸಿ ಬೀಚ್ ಅಭಿವೃದ್ಧಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತ್ರಾಸಿ ಬೀಚ್‌ನಲ್ಲಿ ಸುಮಾರು 9.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮುತ್ತುರಾಜ್ ಹೇಳುತ್ತಿದ್ದಂತೆ ಜನರು ಆಕ್ರೋಶ ಹೊರಹಾಕಿದ್ದು, ಅಭಿವೃದ್ಧಿ ದಾಖಲೆಗಳಲ್ಲಿದೆ ಹೊರತು ಕಾಮಗಾರಿ ಆಗುತ್ತಿಲ್ಲ. ರಾ.ಹೆ. ಇನ್ನೊಂದು ಬದಿಯಲ್ಲಿ ನಿರ್ಮಿಸಲಾಗುತ್ತಿರುವ ರೆಸ್ಟೋರೆಂಟ್ ಮೇಲೆ ಅವೈಜ್ಞಾನಿಕವಾಗಿ ಶೀಟ್ ಹಾಕಲಾಗಿದ್ದು, ಒಂದೆರೆಡು ವರ್ಷದಲ್ಲಿ ತುಕ್ಕು ಹಿಡಿಯುದಲ್ಲದೆ ಗಾಳಿಗೆ ಶೀಟ್ ಉಳಿಯುವುದು ಕಷ್ಟ ಎಂದು ಸ್ಥಳೀಯರಾದ ರವೀಂದ್ರ ಖಾರ್ವಿ, ಪ್ರದೀಪ್ ಖಾರ್ವಿ, ಅಂತೋನಿ, ಜಿಪಂ ಮಾಜಿ ಅಧ್ಯಕ್ಷ ಅನಂತ ಮೊವಾಡಿ ಮೊದಲಾದವರು ಆಕ್ಷೇಪಿಸಿದರು.

ತ್ರಾಸಿ ಬೀಚ್‌ಗೆ ಬರುವ ಪ್ರವಾಸಿಗರ ಅನುಕೂಲಕ್ಕೆ ಶೌಚ ಮತ್ತು ಸ್ನಾನಗೃಹ ತುರ್ತಾಗಿ ನಿರ್ಮಿಸಬೇಕು ಎಂದು ಅನಂತ ಮೊವಾಡಿ ಆಗ್ರಹಿಸಿದರು. ಬೀಚ್ ಬಳಿ ಬಡ ವ್ಯಾಪಾರಿಗಳು ಇಟ್ಟ ಗೂಡಂಗಡಿ ತೆರವುಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆ ಸ್ಥಳೀಯ ಪಂಚಾಯಿತಿ ಮೇಲೆ ಒತ್ತಡ ಹೇರಿ ನೋಟಿಸ್ ಕೊಡುತ್ತಿದೆ. ಆದರೆ ಮಾರಾಸ್ವಾಮಿ ದೇವಸ್ಥಾನದ ಎದುರು ಹಾಕಿರುವ ಗೂಡಂಗಡಿಗಳಿಗೆ ಯಾವುದೇ ನೋಟಿಸ್ ನೀಡಿಲ್ಲ ಇದು ಯಾವ ನ್ಯಾಯ ಎಂದು ಗೂಡಂಗಡಿ ಮಾಲೀಕ ಪಾಂಡುರಂಗ ಇಲಾಖೆ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ತ್ರಾಸಿ ಬೀಚ್‌ನಲ್ಲಿ ಕರಾವಳಿ ಸಂಸ್ಕೃತಿಗೆ ಸಂಬಂಧ ಪಡದ ಕಲಾಕೃತಿ ರಚಿಸಿರುವ ಬಗ್ಗೆ ರವೀಂದ್ರ ಖಾರ್ವಿ ಆಕ್ರೋಶ ವ್ಯಕ್ತಪಡಿಸಿದರು. ತ್ರಾಸಿ ಬೀಚ್ ಅಭಿವೃದ್ಧಿ ಸಮಿತಿ ಪುನಃ ರಚಿಸಬೇಕು. ಯಾವುದೇ ಅಭಿವೃದ್ಧಿ ಕಾಮಗಾರಿ ಪ್ರಾರಂಭಕ್ಕೂ ಮುನ್ನ ಸ್ಥಳೀಯಾಡಳಿತದ ಗಮನಕ್ಕೆ ತಂದು ಸ್ಥಳೀಯರ ಅಭಿಪ್ರಾಯ ಪಡೆದುಕೊಂಡೇ ಕಾಮಗಾರಿ ನಿರ್ವಹಿಸಬೇಕು. ತ್ರಾಸಿ ಬೀಚ್ ಅಭಿವೃದ್ಧಿ ಬಗ್ಗೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಸ್ಥಳೀಯಾಡಳಿತ, ಸ್ಥಳೀಯರ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಅನಂತ ಮೊವಾಡಿ, ರವೀಂದ್ರ ಖಾರ್ವಿ, ಶರೀಫ್ ಮೊದಲಾದವರು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷ ಮಿಥುನ್ ದೇವಾಡಿಗ, ತ್ರಾಸಿ ಬೀಚ್‌ನಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಚರ್ಚೆ ನಡೆಸಲು ಹಿರಿಯ ಅಧಿಕಾರಿಗಳ ಸಭೆ ಆಯೋಜಿಸಬೇಕು ಎಂದರು. ಸಮ್ಮತಿಸಿದ ಇಲಾಖೆ ಅಧಿಕಾರಿ ವಿಚಾರವನ್ನು ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಒಂದು ವಾರದೊಳಗೆ ತ್ರಾಸಿಯಲ್ಲಿ ಹಿರಿಯ ಅಧಿಕಾರ ಸಭೆ ನಡೆಸುವುದಾಗಿ ಭರವಸೆ ನೀಡಿದರು.

ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಆರೋಗ್ಯ ಇಲಾಖೆ ಭಾಗ್ಯಲಕ್ಷ್ಮೀ, ಮೆಸ್ಕಾಂ ಶಾಖಾಧಿಕಾರಿ ದಿನೇಶ ಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿ ಅನಿಲ್ ಮೇತ್ರಿ, ಶಿಕ್ಷಣ ಸಂಯೋಜಕಿ ರಾಧಿಕಾ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಹೇಮಾ, ಸದಸ್ಯರಾದ ವಿಜಯ ಪೂಜಾರಿ, ನಾಗರತ್ನ ಶೆಟ್ಟಿಗಾರ್, ಗೀತಾ ದೇವಾಡಿಗ, ರಾಜು ಮೆಂಡನ್, ಪಿಡಿಒ ಶೋಭಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಶೋಭಾ ಪೂಜಾರಿ ಸ್ವಾಗತಿಸಿ, ಲೆಕ್ಕಸಹಾಯಕ ಶಿವಾನಂದ ಅನುಪಾಲನಾ ವರದಿ ವಾಚಿಸಿದರು.

ಕೇಳಿಬಂದ ಆಗ್ರಹಗಳು

* ಕಲ್ಲಾನಿ ಶಾಲೆ ಪುನರಾರಂಭ ಹಾಗೂ ಹಂದಿ ಸಾಕಣೆಯಿಂದ ಬರುತ್ತಿರುವ ವಾಸನೆ ವಿರುದ್ಧ ಕ್ರಮಕೈಗೊಳ್ಳಲಿ
* ಮೊವಾಡಿ ಎಸ್‌ಸಿ ಕಾಲನಿಯಲ್ಲಿ ಮನೆ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತೆರವುಗೊಳಿಸಿ
* ಮೊವಾಡಿ ಸೇತುವೆ ಸಂಪರ್ಕ ರಸ್ತೆಯಲ್ಲಿ ದಾರಿದೀಪ ಅಳವಡಿಸಲಿ ಮತ್ತು ರಸ್ತೆಯಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ವೇಗ ನಿಯಂತ್ರಕ ಅಳವಡಿಸಬೇಕು.
* ಹೊಸಪೇಟೆಯಲ್ಲಿ ಹಳೆಯ ವಿದ್ಯುತ್ ತಂತಿ ಬದಲಾಯಿಸಬೇಕು ಹಾಗೂ ಕೆಳಮಟ್ಟದಲ್ಲಿರುವ ಕಂಬ ಬದಲಾಯಿಸಬೇಕು ಎಂಬ ಆಗ್ರಹ ಕೇಳಿಬಂತು

ಮರವಂತೆ ಬೀಚ್ ಉಲ್ಲೇಖ

ಸುಮಾರು 2.5 ಕಿ.ಮೀ ಉದ್ದದ ಬೀಚ್‌ನ ಶೇ.90ರಷ್ಟು ಭಾಗ ತ್ರಾಸಿ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಕಡತದಲ್ಲಿ ಮರವಂತೆ ಬೀಚ್ ಎಂದು ಉಲ್ಲೇಖಿಸಲಾಗಿದೆ ಎಂದು ಸ್ಥಳೀಯರು ಇಲಾಖೆ ಕಾರ್ಯವೈಖರಿ ವಿರುದ್ಧ ಗುಡುಗಿದರು.

ಸ್ಕೈ ಡೈನ್ ಆತಂಕ

ಪ್ರವಾಸೋದ್ಯಮ ಇಲಾಖೆ ಗೂಡಂಗಡಿಗಳಿಂದ ಅಪಘಾತ ನಡೆಯುತ್ತಿದೆ ಎಂದು ಹೇಳುತ್ತಿದ್ದು, ರಾ.ಹೆ.ಸಮೀಪದಲ್ಲೇ ಸುಮಾರು ಒಂದು ಎಕರೆ ಜಾಗ ಸ್ಕೈ ಡೈನ್ ನಡೆಸಲು ಬಾಡಿಗೆಗೆ ನೀಡಿದ್ದು, ಇದರಿಂದ ಅನಾಹುತ ಆದರೆ ಯಾರು ಹೊಣೆ? ಎಂದು ಪ್ರಶ್ನಿಸಿದ ರವೀಂದ್ರ ಖಾರ್ವಿ, ಅಂತೋನಿ, ಶರೀಫ್ ಹಾಗೂ ಪ್ರದೀಪ್ ಖಾರ್ವಿ, ಪಂಚಾಯಿತಿ ನಿರಾಕ್ಷೇಪಣಾ ಪತ್ರ ಇಲ್ಲದೆ ನಡೆಯುತ್ತಿರುವ ಸ್ಕೈ ಡೈನ್‌ನಲ್ಲಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸಿಲ್ಲ ಎಂದು ದೂರಿದರು. ಸ್ಕೈ ಡೈನ್ ನಡೆಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದ ಸ್ಕೈ ಡೈನ್ ಮುಖ್ಯಸ್ಥರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು

ಅಕ್ರಮ ಮಳುಗಾರಿಕೆ ಆರೋಪ

ಗಣಿ ಇಲಾಖೆ ಅಧಿಕಾರಿ ಸಭೆಯಲ್ಲಿ ಗೈರುಹಾಜರಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು, ತ್ರಾಸಿ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಗಣಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಜನರು ಗ್ರಾಪಂ ಅಧ್ಯಕ್ಷರು, ಪಿಡಿಒ ಮೇಲೆ ಆರೋಪ ಮಾಡುವಂತಾಗಿದೆ. ಜನರು ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳನ್ನು ಸಂಶಯದಿಂದ ನೋಡುವಂತಾಗಿದೆ ಎಂದು ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

25ರಿಂದ ಕುಂಭಾಶಿ ಕ್ಷೇತ್ರದ ಬ್ರಹ್ಮಕಲಶ ಸಂಭ್ರಮ

ಕರಾವಳಿ ಜಿಲ್ಲೆಗಳ ಸ್ತ್ರೀಯರು ಸಬಲರು

 

Share This Article

Toilet ಬಳಸಿದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ: ಅಪಾಯ ಕಾದಿದೆಯಂತೆ!

Toilet : ನಮಲ್ಲಿ ಹಲವರು ಶೌಚಾಲಯ (ಪಾಶ್ಚಾತ್ಯ ಶೌಚಾಲಯ) ಬಳಸಿದ ನಂತರ ಟಾಯ್ಲೆಟ್​ನ ಮುಚ್ಚುಳ ಮುಚ್ಚದೇ…

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…