ನ.ಪಂ. ಅಂಗಳದಲ್ಲಿ ತ್ಯಾಜ್ಯ ರಾಶಿ!

ಗಂಗಾಧರ ಕಲ್ಲಪಳ್ಳಿ ಸುಳ್ಯ

ಕಲ್ಪರ್ಚೆಯಲ್ಲಿನ ನಗರ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕ ತುಂಬಿ ತುಳುಕಿ ಕಸ ಹಾಕುವುದು ನಿಲ್ಲಿಸಿದ ಬಳಿಕ ಇದೀಗ ನಗರ ಪಂಚಾಯಿತಿಯ ಅಂಗಳವೇ ತ್ಯಾಜ್ಯ ಘಟಕವಾಗಿ ಮಾರ್ಪಾಡಾಗಿದೆ. ನಗರ ಪಂಚಾಯಿತಿ ಮುಂಭಾಗದ ವಾಹನ ಪಾರ್ಕಿಂಗ್ ಕಟ್ಟಡ ಪೂರ್ತಿ ತ್ಯಾಜ್ಯವೇ ತುಂಬಿದೆ. ಕಳೆದ ಹಲವು ತಿಂಗಳ ಒಣ ಕಸಗಳು ಇಲ್ಲಿ ತುಂಬಿ ತುಳುಕಿದೆ.

ನಗರದಲ್ಲಿ ಸಂಗ್ರಹಿಸುವ ಕಸವನ್ನು ಒಣ ಕಸ ಮತ್ತು ಹಸಿ ಕಸ ಎಂದು ಬೇರ್ಪಡಿಸಲಾಗುತ್ತಿದ್ದು, ಗೋಣಿಯಲ್ಲಿ ಕಟ್ಟಿಡಲಾದ ಒಣ ಕಸಗಳು ರಾಶಿ ಬಿದ್ದಿವೆ. ಸುಳ್ಯ ನಗರದ ಕಸಗಳನ್ನು ಆಲೆಟ್ಟಿ ಗ್ರಾಮದ ಕಲ್ಚರ್ಪೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಾಕಲಾಗುತ್ತಿತ್ತು. ಆದರೆ ಅಲ್ಲಿ ವೈಜ್ಞಾನಿಕ ವಿಲೇವಾರಿ ಸಾಧ್ಯವಾಗದೆ ಹಲವು ವರ್ಷದ ಕಸ ತುಂಬಿ ತ್ಯಾಜ್ಯ ಪರ್ವತವೇ ನಿರ್ಮಾಣವಾಗಿತ್ತು. ಬಳಿಕ ಅಲ್ಲಿ ಕಸ ಹಾಕುವುದನ್ನೇ ನಿಲ್ಲಿಸಲಾಯಿತು.

ಬಳಿಕ ನಗರದಲ್ಲಿ ಸಂಗ್ರಹವಾಗುವ ಕಸಗಳನ್ನು ಹಸಿ ಕಸ, ಒಣ ಕಸ ಎಂದು ಬೇರ್ಪಡಿಸಿ ವಿಲೇವಾರಿ ಮಾಡಲಾಗುತ್ತದೆ. ಹಸಿ ಕಸವನ್ನು ಹಳೆಗೇಟಿನ ಕೃಷಿಕ ವಿನೋದ್ ಲಸ್ರಾದೋ ಎಂಬುವರ ತೋಟಕ್ಕೆ ಕೊಂಡೊಯ್ದು ಅಲ್ಲಿ ಗೊಬ್ಬರ ಮಾಡಲಾಗುತ್ತದೆ. ಪ್ರತಿ ದಿನ ಎರಡು ಲೋಡ್‌ನಷ್ಟು ಹಸಿ ಕಸ ಗೊಬ್ಬರಕ್ಕೆಂದು ಇವರ ತೋಟಕ್ಕೆ ಸಾಗಿಸಲಾಗುತ್ತದೆ. ಬೇರ್ಪಡಿಸಲಾದ ಒಣ ಕಸವನ್ನು ಗೋಣಿಗಳಲ್ಲಿ ತುಂಬಿ ನಗರ ಪಂಚಾಯಿತಿ ಮುಂಭಾಗದಲ್ಲಿರುವ ವಾಹನ ಪಾರ್ಕಿಂಗ್ ಕಟ್ಟಡದಲ್ಲಿ ತುಂಬಿಡಲಾಗುತ್ತದೆ.

ಯೋಜನೆಯಂತೆ ನಡೆಯಲಿಲ್ಲ: ನಗರದಲ್ಲಿ ಸಂಗ್ರಹಿಸಲಾಗುವ ಕಸದಿಂದ ಪ್ಲಾಸ್ಟಿಕ್, ಕಾಗದ, ರಟ್ಟು ಮತ್ತಿತರ ಸುಲಭವಾಗಿ ಕರಗದ ಒಣ ಕಸಗಳನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಇದನ್ನು ಗೋಣಿಯಲ್ಲಿ ತುಂಬಿ ಇಡಲಾಗುತ್ತದೆ. ಈ ಒಣ ಕಸವನ್ನು 15 ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಅದನ್ನು ಮರು ಬಳಕೆಗಾಗಿ ಕೈಗಾರಿಕೆಗಳಿಗೆ ಅಥವಾ ಬೇರೆಡೆ ಕಳುಹಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಕಳೆದ ಎಂಟು- ಒಂಭತ್ತು ತಿಂಗಳಿನಿಂದ ಈ ಒಣ ಕಸವನ್ನು ಎಲ್ಲಿಯೂ ಸಾಗಿಸಲು ಸಾಧ್ಯವಾಗಿಲ್ಲ. ನ.ಪಂ. ಅಧಿಕಾರಿಗಳು ಇದನ್ನು ಮಂಗಳೂರು, ಮೈಸೂರು ಕಡೆಗಳ ಕೈಗಾರಿಕಾ ಕೇಂದ್ರಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಪ್ರತಿದಿನ ಸುಮಾರು ಒಂದು ಟನ್ ಹಸಿ ಕಸ ಬೇರ್ಪಡಿಸಿ ಗೊಬ್ಬರಕ್ಕಾಗಿ ಕೊಂಡೊಯ್ಯಲಾಗುತ್ತದೆ. ಅದೇ ರೀತಿ ಬೇರ್ಪಡಿಸಲಾಗುವ ಕ್ವಿಂಟಾಲ್‌ಗಟ್ಟಲೆ ಒಣ ಕಸ ಇಲ್ಲೇ ಉಳಿಯುತ್ತದೆ. ತ್ಯಾಜ್ಯ ತುಂಬಿ ತುಳುಕಿ ನಗರ ಪಂಚಾಯಿತಿ ಪರಿಸರವನ್ನೇ ತ್ಯಾಜ್ಯಮಯವಾಗಿಸಿದೆ. ಇಲ್ಲೇ ಕೊಳೆಯುವ ಕಸದ ರಾಶಿ ಸಮೀಪದಲ್ಲೆಡೆ ದುರ್ನಾತವನ್ನೂ ಬೀರುತ್ತಿದೆ.

ಹಸಿ ಕಸದಿಂದ ಗೊಬ್ಬರ: ವಿನೋದ್ ಲಸ್ರಾದೋ ಅವರ ತೋಟಕ್ಕೆ ಕೊಂಡೊಯ್ಯಲಾಗುವ ಹಸಿ ಕಸವನ್ನು ‘ಏರೋಲಿಕ್ ಕಂಪೋಸ್ಟಿಂಗ್ ಸಿಸ್ಟಂ ಮೂಲಕ ಗೊಬ್ಬರವಾಗಿ ಮಾರ್ಪಾಡಿಸುತ್ತಾರೆ. ಕಂಗಿನ ಬಿದಿರನ್ನು ಬಳಸಿ ಗಾಳಿ ಮತ್ತು ತೇವಾಂಶ ಹರಿದಾಡುವಂತೆ ನಿರ್ಮಿಸಿದ ತೊಟ್ಟಿಯಲ್ಲಿ ಈ ಕಸವನ್ನು ಹರಡಲಾಗುತ್ತದೆ. ಅದರ ಮೇಲೆ ಬೆಲ್ಲ ಮತ್ತು ವೇಸ್ಟ್ ಡಿ ಕಂಪೋಸರ್ ಸೇರಿಸಿದ 100 ಲೀಟರ್ ಮಿಶ್ರಣವನ್ನು ಸಿಂಪಡಿಸಲಾಗುತ್ತದೆ. ಕಸವನ್ನು ಹುಡಿ ಮಾಡಿ ಗೊಬ್ಬರವಾಗಿ ಪರಿವರ್ತಿಸಲು ಈ ಡಿಕಂಪೋಸರ್ ಮಿಶ್ರಣ ಸಹಾಯಕವಾದರೆ, ವಾಸನೆ, ನೊಣ, ಸೊಳ್ಳೆಗಳು ಬಾರದಂತೆ ಇಎಂ-1 ಎಂಬ ದ್ರಾವಣವನ್ನು ಇದರ ಮೇಲೆ ಸಿಂಪಡಿಸಲಾಗುತ್ತದೆ. ಅದರ ಮೇಲೆ ಒಣಗಿದ ತರಗೆಲೆಗಳನ್ನು ಹಾಸಲಾಗುತ್ತದೆ. ಪ್ರತಿ ನಿತ್ಯ ಹೀಗೆ ಹಾಕಿದ ಕಸವು ಎರಡು ತಿಂಗಳಲ್ಲಿ ಉತ್ಕೃಷ್ಠ ಗೊಬ್ಬರವಾಗಿ ಪರಿವರ್ತನೆಯಾಗುತ್ತಿದೆ.

ಬರ್ನಿಂಗ್ ಮಷಿನ್ ಅಳವಡಿಕೆಗೆ ಚಿಂತನೆ: ಕೆಲವೊಂದು ತ್ಯಾಜ್ಯಗಳನ್ನು ಆ ಕಡೆ ಹಸಿ ಕಸಕ್ಕೂ ಈ ಕಡೆ ಒಣ ಕಣಕ್ಕೂ ಸೇರಿಸಲಾಗದೆ ನಗರ ಪಂಚಾಯಿತಿಗೆ ದೊಡ್ಡ ತಲೆ ನೋವು ಸೃಷ್ಟಿಸುತಿದೆ. ಇದನ್ನು ಪ್ರತಿ ದಿನ ವಿಲೇವಾರಿ ಮಾಡಲು ತ್ಯಾಜ್ಯಗಳನ್ನು ಉರಿಸುವ ಯಂತ್ರ (ಬರ್ನಿಂಗ್ ಮಷಿನ್) ಖರೀದಿಸುವ ಚಿಂತನೆಯನ್ನೂ ನಡೆಸಿದೆ.

ನಗರದಲ್ಲಿ ಸಂಗ್ರಹವಾಗುವ ಕಸವನ್ನು ಹಸಿ ಕಸ ಮತ್ತು ಒಣ ಕಸ ಎಂದು ಬೇರ್ಪಡಿಸಲಾಗುತ್ತದೆ. ಹಸಿ ಕಸವನ್ನು ಗೊಬ್ಬರ ಮಾಡಲು ಕಳಿಸಲಾಗುತ್ತದೆ. ಒಣ ಕಸವನ್ನು ಇಲ್ಲಿಯೇ ಸಂಗ್ರಹಿಸಲಾಗುತ್ತಿದೆ. ಇಲ್ಲಿ ತುಂಬಿರುವ ಕಸವನ್ನು ಎರಡು ದಿನದಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
| ಮತ್ತಡಿ ಮುಖ್ಯಾಧಿಕಾರಿ. ನ.ಪಂ. ಸುಳ್ಯ