More

    ಗುಜ್ಜಾಡಿಯಲ್ಲಿಲ್ಲ ತ್ಯಾಜ್ಯ ವಿಲೇ ಘಟಕ

    ತ್ಯಾಜ್ಯ ವಿಲೇವಾರಿ ಗುಜ್ಜಾಡಿ ಗ್ರಾಮದಲ್ಲಿ ಸವಾಲಾಗಿದ್ದು, ಅಧಿಕಾರಿಗಳನ್ನು ಹೈರಾಣ ಮಾಡಿದೆ. ಇಲ್ಲಿನ ತ್ಯಾಜ್ಯ ಸಮಸ್ಯೆಯತ್ತ ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ.

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಸವಾಲಾಗಿದ್ದು, ಅಧಿಕಾರಿಗಳನ್ನು ಹೈರಾಣ ಮಾಡಿದೆ. ಗುಜ್ಜಾಡಿ ಗ್ರಾ.ಪಂ.ನಲ್ಲಿ ಮಂಕಿ, ಕಳಿಹಿತ್ಲು, ಜನತಾ ಕಾಲೋನಿ, ಸಂಗಮೇಶ್ವರ ದೇವಸ್ಥಾನ ವಾರ್ಡ್ ಹಾಗೂ ಬೆಣ್ಗೆರೆ ಹೀಗೆ ಒಟ್ಟು 5 ವಾರ್ಡ್‌ಗಳಿವೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 6,042 ಜನರಿದ್ದು, 1,300 ಕ್ಕೂ ಹೆಚ್ಚು ಮನೆ, ಮಳಿಗೆಗಳಿವೆ. ಇವೆಲ್ಲದರ ಕಸ ವಿಲೇವಾರಿ ಮಾಡುತ್ತಿರುವ ಪಂಚಾಯಿತಿಯನ್ನು ದಾರಿ ಬದಿಗಳಲ್ಲಿ ಕಸ ಸುರಿಯುವವರು ಕಾಡುತ್ತಿದ್ದಾರೆ.

    ಗುಜ್ಜಾಡಿ ಗಾ.ಪಂ. ವ್ಯಾಪ್ತಿಯ ನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ ಎದ್ದು ಕಾಣುತ್ತಿದ್ದು ತ್ಯಾಜ್ಯ ವಿಲೇವಾರಿ ಸವಾಲಾಗಿದೆ. ಗ್ರಾಮಸ್ಥರು ಮಾತ್ರವಲ್ಲದೆ ಬೇರೆ ಕಡೆಯಿಂದಲೂ ಜನ ಇಲ್ಲಿಗೆ ಬಂದು ರಸ್ತೆ ಇಕ್ಕೆಲಗಳಲ್ಲಿರುವ ಚರಂಡಿಗೆ ಕಸ ಎಸೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಗೇರು ಪ್ಲಾಂಟೇಶನ್ ಸಮೀಪ ಹಲವರು ತ್ಯಾಜ್ಯ ಸುರಿಯುವುದರಿಂದ ಅಗ್ನಿ ಆಕಸ್ಮಿಕ ಸಂಭವಿಸಿದೆ.

    ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಗ್ರಹ

    ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಅನೇಕ ಗ್ರಾ.ಪಂ.ಗಳು ಜಿಲ್ಲಾ ಪಂಚಾಯಿತಿ ಅನುದಾನದಿಂದ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಆರಂಭಿಸಿವೆ. ಆದರೆ ಗುಜ್ಜಾಡಿ ಗ್ರಾಮ ಪಂಚಾಯಿತಿಯಲ್ಲಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದ್ದರೂ, ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪನೆಯಾಗಿಲ್ಲ. ಸಂಗ್ರಹಿಸಿದ ತ್ಯಾಜ್ಯವನ್ನು ತ್ರಾಸಿ ಮತ್ತು ಹೊಸಾಡು ಗ್ರಾ.ಪಂ.ನ ಎಸ್‌ಎಲ್‌ಆರ್‌ಎಂ ಘಟಕಗಳಿಗೆ ನೀಡಲಾಗುತ್ತಿದೆ. ಗುಜ್ಜಾಡಿಯಲ್ಲಿಯೂ ಎಸ್‌ಎಲ್‌ಆರ್‌ಎಂ ಘಟಕ ಆರಂಭಿಸಬೇಕು ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹ.

    ರಾತ್ರಿ ಕಸ ಸುರಿಯುವರು

    ಮುಳ್ಳಿಕಟ್ಟೆಯಿಂದ ನಾಯಕವಾಡಿಗೆ ತೆರಳುವ ಮುಖ್ಯ ರಸ್ತೆ ಹಾಗೂ ನಾಯಕವಾಡಿಯಿಂದ ತ್ರಾಸಿಗೆ ಸಾಗುವ ಮುಖ್ಯ ರಸ್ತೆಗಳ ಎರಡೂ ಬದಿಗಳ ಚರಂಡಿಯುದ್ದಕ್ಕೂ ಕಸದ ರಾಶಿಯೇ ಕಂಡು ಬರುತ್ತಿವೆ. ಕೇವಲ ಗುಜ್ಜಾಡಿ ಗ್ರಾಮದ ಜನರು ಮಾತ್ರವಲ್ಲದೆ ಗಂಗೊಳ್ಳಿ ಹಾಗೂ ಇನ್ನಿತರ ಕಡೆಗಳಿಂದ ವಾಹನಗಳಲ್ಲಿ ರಾತ್ರಿ ವೇಳೆ ಬಂದು ಕಸ ಎಸೆದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಅರೋಪಿಸುತ್ತಾರೆ.

    ಮುಳ್ಳಿಕಟ್ಟೆಯಿಂದ ನಾಯಕವಾಡಿಯವರೆಗೆ ತೆರಳುವ ಮುಖ್ಯ ರಸ್ತೆ ಹಾಗೂ ನಾಯಕವಾಡಿಯಿಂದ ತ್ರಾಸಿಗೆ ತೆರಳುವ ಮುಖ್ಯ ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಸ ಎಸೆಯವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    -ಯಮುನಾ ಪೂಜಾರಿ, ಗುಜ್ಜಾಡಿ ಗ್ರಾಪಂ ಅಧಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts